ಆಣೆ ಪ್ರಮಾಣ ಮಾಡುವ ಮೂಢನಂಬಿಕೆಗ ಸರ್ಕಾರ ನಮ್ಮದಲ್ಲ: ಬಿಜೆಪಿ ವಿರುದ್ದ ಸಚಿವ ಬೈರತಿ ಸುರೇಶ್ ಕಿಡಿ
ಕೋಲಾರ, ಆಗಸ್ಟ್ 16: ನ್ಯಾಯಯುತವಾಗಿ ಕೆಲಸ ಮಾಡಿದವರಿಗೆ ಬಿಲ್ ಮಾಡಿಕೊಡಲಾಗುವುದು. ಆಣೆ ಪ್ರಮಾಣ ಮಾಡುವುದು ಸಂವಿಧಾನದಲ್ಲಿ ಇಲ್ಲ, ನಾವು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಂತೆ ಆಡಳಿತ ನಡೆಸುತ್ತಿದ್ದೇವೆ. ಆಣೆ ಪ್ರಮಾಣ ಮಾಡುವ ಮೂಢನಂಬಿಕೆಗ ಸರ್ಕಾರ ನಮ್ಮದಲ್ಲ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಈ ಕುರಿತು ಕೋಲಾರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಯಾವುದೇ ಲಂಚ ಕೇಳಿಲ್ಲ ಎಂದು ನಿನ್ನೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳೆ ಹೇಳಿಕೆ ನೀಡಿದ್ದಾರೆ. ಆಣೆ ಪ್ರಮಾಣ ಮಾಡುವ ಮೂಢನಂಬಿಕೆ ಸರ್ಕಾರ ನಮ್ಮದಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದಾರೆ.

ಇನ್ನೂ ಸರ್ಕಾರ ಬೀಳಲಿದೆ ಎಂದು ಬಿಜೆಪಿ ನಾಯಕರ ಟೀಕೆ ಕುರಿತು ಮಾತನಾಡಿದ ಅವರು, ಜನಗಳ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನ ಗೆದ್ದಿದೆ. ಸಿಂಪಲ್ ಮೆಜಾರಿಟಿಗಿಂತ ಹೆಚ್ಚಿಗೆ ಸ್ಥಾನಗಳು ನಮ್ಮ ಸರ್ಕಾರದಲ್ಲಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ 136 ಶಾಸಕರಿದ್ದು, ನಮ್ಮ ಸರ್ಕಾರ ಬೀಳುತ್ತೆ ಅಂದರೆ ಹೇಗೆ? ಅತೃಪ್ತ ಆತ್ಮಗಳು ಆಗಿರೋದು ಬಿಜೆಪಿ ಅವರು, ಕಾಂಗ್ರೆಸ್ ನಲ್ಲಿ ಅತೃಪ್ತರು ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ವರ್ಗಾವಣೆ ಕುರಿತು ಬಿಜೆಪಿ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ವರ್ಗಾವಣೆ ಎನ್ನುವುದು ನಿತ್ಯ ನಿರಂತರ ನಡೆಯುವ ಪ್ರಕ್ರಿಯೆ. ಹೊಸ ಸರ್ಕಾರಗಳು ಬಂದಾಗ ವರ್ಗಾವಣೆಗಳು ಆಗುವುದು ಸಹಜ. ಭ್ರಷ್ಟ ಅಧಿಕಾರಿಗಳನ್ನು ತೆಗೆದು ಆ ಜಾಗಕ್ಕೆ ಒಳ್ಳೆಯವರನ್ನು ಹಾಕುತ್ತೇವೆ. ಇದಕ್ಕೆ ಭ್ರಷ್ಟಾಚಾರ ಅಂತ ಹೆಸರಿಟ್ಟರೆ ಹೇಗೆ? ಭ್ರಷ್ಟಾಚಾರಕ್ಕೆ ಸಾಕ್ಷಿ ಆಧಾರಗಳು ಇರಬೇಕಲ್ಲ? ವರ್ಗಾವಣೆಗೆ ಹಣ ಕೇಳಿದ್ದಾರೆಂದು ಯಾರೋ ಖಾಸಗಿ ವ್ಯಕ್ತಿ ಎಫ್ ಐಆರ್ ದಾಖಲು ಮಾಡಿದ್ರೆ ಹೇಗೆ? ಒಂದು ವೇಳೆ ದಾಖಲೆಗಳು ಇದ್ದರೆ ಕೊಡಲಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸರ್ಕಾರ ಬರುತ್ತೆ ಅಂತ ಮುಂಚೆನೇ ಸಾವಿರಾರು ಬಸ್ ಗಳನ್ನು ಖರೀದಿಸೋಕೆ ಆಗುತ್ತಾ? ನಾವು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಈಗ ಒಟ್ಟಾರೆಯಾಗಿ 4000 ಬಸ್ ಗಳನ್ನು ಹೆಚ್ಚುವರಿಯಾಗಿ ಬಿಡಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ವಿದ್ಯುತ್ ಸಮಸ್ಯೆ ಸಾರ್ವತ್ರಿಕ ಸಮಸ್ಯೆಯಾಗಿದೆ. ಫ್ರೀ ಕರೆಂಟ್ ಕೊಡ್ತೀವಿ ಅಂತ ಕರೆಂಟ್ ತೆಗೆಯದೆ ಇರುವುದಕ್ಕೆ ಆಗುತ್ತಾ? ಕೆಲವೊಮ್ಮೆ ತಾಂತ್ರಿಕ ಸಮಸ್ಯೆ ಇದ್ದಾಗ ಕರೆಂಟ್ ತೆಗೆಯಬೇಕಾಗುತ್ತದೆ ಎಂದು ಹೇಳಿದರು.
ಇನ್ನೂ ನಾವು ಕೊಟ್ಟ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆ ಖುಷಿಯಾಗಿದ್ದಾರೆ. ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾದರೂ ಜನಗಳಿಗೆ ತಲುಪಿಸಿದ್ದೇವೆ. ಕೆಲವು ಅತೃಪ್ತ ಆತ್ಮಗಳು ರಾಜಕೀಯವಾಗಿ ನಮ್ಮ ಯೋಜನೆಗಳನ್ನು ಹೀಗೆಳೆಯುತ್ತಿದ್ದಾರೆ ಅಷ್ಟೇ. ಅದು ಬಿಟ್ಟು ಬಡವರು ಮಧ್ಯಮ ವರ್ಗದವರು ಶ್ರೀಮಂತರು ಯೋಜನೆಗಳಿಂದ ಖುಷಿಯಾಗಿದ್ದಾರೆ ಎಂದು ಹೇಳಿದರು.












Click it and Unblock the Notifications