ಗ್ಯಾರಂಟಿಗೆ ದುಡ್ಡು ಎತ್ತೋದು ಎಲ್ಲಿಂದ: ಈ 5 ವಿಭಾಗದ ಮೇಲೆಯೇ ಸರ್ಕಾರದ ಕಣ್ಣು?
ರಾಜ್ಯದಲ್ಲಿ ಚುನಾವಣಾ ಫಲಿತಾಂಶದ ನಂತರ ಬಹು ಚರ್ಚಿತ ವಿಷಯಗಳೆಂದರೆ ಸರ್ಕಾರ ಅಧಿಕೃತವಾಗಿ ಜಾರಿಗೆ ತರಲು ಹೊರಟಿರುವ ಫ್ರೀಬೀಸ್. ಈಗಾಗಲೇ, ಬಿಜೆಪಿ ಮತ್ತು ಜೆಡಿಎಸ್ ಪಕ್ಷವು ಸಿದ್ದರಾಮಯ್ಯನವರ ಸರ್ಕಾರದ ಹಿಂದೆ ಬಿದಿದ್ದು, ಶುಕ್ರವಾರದ (ಜೂನ್ 2) ಸಚಿವ ಸಂಪುಟ ಸಭೆಯ ಮೇಲೆ ಎಲ್ಲರ ಕಣ್ಣಿದೆ.
ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ ಕೆಲವು ಗ್ಯಾರಂಟಿಯನ್ನು ಘೋಷಣೆ ಮಾಡಿಯಾಗಿತ್ತು. ಇದಕ್ಕೆ ಇನ್ನಷ್ಟು ಗ್ಯಾರಂಟಿಗಳನ್ನು ಪ್ರಚಾರದ ವೇಳೆ ಸೇರಿಸಿದ ನಂತರ ಇದರ ಕರಪತ್ರವನ್ನು ಕಾಂಗ್ರೆಸ್ ಮನೆಮನೆಗೆ ಹಂಚುವ ಕೆಲಸವನ್ನೂ ಮಾಡಿತ್ತು. ಆಡಳಿತ ವಿರೋಧಿ ಅಲೆಯ ಜೊತೆಗೆ, ಈ ಗ್ಯಾರಂಟಿಗಳು ಕಾಂಗ್ರೆಸ್ಸಿಗೆ ಭರ್ಜರಿಯಾಗಿ ವರ್ಕೌಟ್ ಆಗಿತ್ತು.

ಪ್ರಥಮ ಸಂಪುಟ ಸಭೆಯಲ್ಲೇ ಸಿದ್ದರಾಮಯ್ಯನವರ ಸರ್ಕಾರ ಈ ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆಯನ್ನು ನೀಡಿತ್ತು. ಇದನ್ನು ಅಧಿಕೃತವಾಗಿ ಜಾರಿಗೆ ತರುವ ವಿಚಾರದಲ್ಲಿ ಸಿಎಂ ಮತ್ತು ಸಂಬಂಧಪಟ್ಟ ಸಚಿವರುಗಳು ಅಧಿಕಾರಿಗಳ ಜೊತೆಗೆ ಸಾಲುಸಾಲು ಸಭೆಯನ್ನು ನಡೆಸಿ ಮಾಹಿತಿ ಮತ್ತು ಅಂಕಿಅಂಶವನ್ನು ತರಿಸಿಕೊಂಡಿದ್ದಾರೆ.
ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಸಿದ್ದರಾಮಯ್ಯನವರಿಗೆ ವಾರ್ಷಿಕ ಅಂದಾಜು 50 - 55ಸಾವಿರ ಕೋಟಿಯ ಅವಶ್ಯಕತೆಯಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳಿಗೆ ರಾಜ್ಯದ ಬೊಕ್ಕಸದ ಪರಿಸ್ಥಿತಿ, ಆದಾಯದ ಮೂಲಗಳ ಸರಿಯಾದ ಲೆಕ್ಕಾಚಾರವಿದೆ. ಹಾಗಾಗಿ, ಈ ಗ್ಯಾರಂಟಿಗಳಿಗೆ ದುಡ್ಡು ಹೊಂದಿಸುವುದು ಹೇಗೆ ಎನ್ನುವ ವಿಚಾರದಲ್ಲಿ ಕೆಲವೊಂದು ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆ
ಕನಿಷ್ಠ ಮುಂಬರುವ ಲೋಕಸಭಾ ಚುನಾವಣೆಯವರೆಗೆ ಜನಸಾಮಾನ್ಯರ ದೈನಂದಿನ ಬದುಕಿಗೆ ಹೊರೆಯಾಗುವ ಯಾವುದೇ ವಸ್ತುಗಳ ಬೆಲೆ ಏರಿಸದಿರಲು ಸರ್ಕಾರ ನಿರ್ಧಾರಕ್ಕೆ ಬರುವ ಸಾಧ್ಯತೆ. ಹಾಗಾಗಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಾಜ್ಯ ಸೆಸ್ ಹೆಚ್ಚಾಗುವ ಸಾಧ್ಯತೆ ಕಮ್ಮಿ. ಜುಲೈ ತಿಂಗಳಲ್ಲಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ಅಬಕಾರಿ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಗಣನೀಯವಾಗಿ ತೆರಿಗೆ ಏರಿಸುವ ಸಾಧ್ಯತೆ ಹೆಚ್ಚಿದೆ. ರಾಜಸ್ವ ಸಂಗ್ರಹದ ವಿಚಾರದಲ್ಲಿ ಅಬಕಾರಿ ಇಲಾಖೆ ಎರಡನೇ ಸ್ಥಾನದಲ್ಲಿದೆ.

ಮುದ್ರಾಂಕ ಶುಲ್ಕ
ಇನ್ನು ಮುದ್ರಾಂಕ ಶುಲ್ಕವನ್ನು (stamp duty) ಹೆಚ್ಚಿಸುವ ಮೂಲಕ ಗ್ಯಾರಂಟಿಗೆ ಹಣ ಹೊಂದಿಸುವ ಯೋಚನೆಯೂ ಸರ್ಕಾರಕ್ಕಿದೆ. ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ಸರ್ಕಾರ ತೆರಿಗೆ ಹೆಚ್ಚಿಸುವ ಸಾಧ್ಯತೆ ಇಲ್ಲದಿಲ್ಲ. ಗೈಡೆನ್ಸ್ ವ್ಯಾಲ್ಯೂ (guidance value) ಹೆಚ್ಚಿಸದೇ ಹಲವು ಅವಧಿಗಳು ಆಗಿರುವುದರಿಂದ, ಸರ್ಕಾರ ಇದರಿಂದ ಆದಾಯದ ಕ್ರೋಢೀಕರಣ ಹೆಚ್ಚಿಸುವ ಉದ್ದೇಶವನ್ನು ಇಟ್ಟುಕೊಂಡಿದೆ ಎನ್ನುವ ಸುದ್ದಿಯಿದೆ. ರಿಯಾಯತಿ ದರದಲ್ಲಿ ಆಸ್ತಿ ತೆರಿಗೆ (property tax) ಪಾವತಿಸುವ ಅವಧಿಯನ್ನೂ ಸರ್ಕಾರ (ಬಿಬಿಎಂಪಿ) ವಿಸ್ತರಿಸಿದೆ.
ಮರಳು ಮತ್ತು ಜಾಹೀರಾತು ನಿಯಮ
ಮರಳು ಮತ್ತು ಜಾಹೀರಾತು ನಿಯಮಗಳನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಮಹಾನಗರಪಾಲಿಕೆ ಮತ್ತು ಇತರ ನಗರ/ಪುರಸಭೆಗಳಿಗೆ ಪ್ರತ್ಯೇಕ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ. ಇದರ ಜೊತೆಗೆ, ಯಾವುದೇ ಇಲಾಖೆಯಲ್ಲಿ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಲಿದೆ.
ಹತ್ತು ಕೆಜಿ ಅಕ್ಕಿಗೆ ಕೇಂದ್ರಕ್ಕೆ ಒತ್ತಡ
ಹತ್ತು ಕೆಜಿ ಅಕ್ಕಿಗೆ ಕೇಂದ್ರಕ್ಕೆ ಒತ್ತಡ ಹಾಕುವ ಮತ್ತು ಜಿಎಸ್ಟಿಯ ರಾಜ್ಯದ ಪಾಲನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಲು ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡುವ ಸಾಧ್ಯತೆಯಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೇಂದ್ರ, ಅಕ್ಕಿಯನ್ನು ರಾಜ್ಯಕ್ಕೆ ವಿತರಿಸದೇ ಇದ್ದಲ್ಲಿ ಅದು ರಾಜ್ಯದ ಜನತೆಗೆ ಬೇರೆ ಸಂದೇಶ ಹೋಗುವ ಸಾಧ್ಯತೆಯಿದೆ. ಹಾಗಾಗಿ, ಕೇಂದ್ರದಿಂದ ಐದು ಕೆಜಿ ಬರಬಹುದು ಎನ್ನುವ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಇಟ್ಟುಕೊಂಡಿದೆ. ಒಟ್ಟಿನಲ್ಲಿ, ಗ್ಯಾರಂಟಿ ಜಾರಿಗೆ ಬರುವುದು ಖಚಿತ, ಅದು ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ತೆರಿಗೆ ರೂಪದಲ್ಲಿ ಎಷ್ಟು ಹೊರೆಯಾಗಲಿದೆ ಎನ್ನುವುದು ಕಾದು ನೋಡಬೇಕಿದೆ.












Click it and Unblock the Notifications