ಕರ್ನಾಟಕ: ಪರಿಶಿಷ್ಟರ ₹11,000 ಕೋಟಿ ಹಣ ದುರ್ಬಳಕೆ ವಿರುದ್ಧ ಬೃಹತ್ ಪ್ರತಿಭಟನೆ
ಬೆಂಗಳೂರು, ಆಗಸ್ಟ್ 03: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳಲ್ಲಿಯೇ ದಲಿತ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಹೊರಟಂತಿದೆ. ದಲಿತ ವರ್ಗದ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ ಕೋಟ್ಯಂತರ ರೂಪಾಯಿ ಹಣದ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಆಗಸ್ಟ್ 05 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ.
ಗುರುವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ (AAP) ಎಸ್ ಸಿ /ಎಸ್ ಟಿ ವಿಭಾಗದ ರಾಜ್ಯಾಧ್ಯಕ್ಷ ಪುರುಷೋತ್ತಮ ಅವರು, ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಯೋಜನೆಗಳ 11,130 ಕೋಟಿ ರೂಪಾಯಿಗಳನ್ನು ಗ್ಯಾರೆಂಟಿಗಳಿಗಾಗಿ ವಿನಿಯೋಜಿಸುತ್ತಿದೆ. ಇದು ಈ ಸಮುದಾಯಗಳ ಜನರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅವರು ದೂರಿದರು.

ಇದೇ ರೀತಿ ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡು ಬಂದಿದ್ದ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಾಗಿದ್ದರೂ ಸಹಿತ ದಲಿತ ವರ್ಗ ಇಂದು ಮಹಾ ಮೋಸಕ್ಕೆ ಒಳಗಾಗುತ್ತಿರುವುದು ದುರಂತವೇ ಸರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಿಎಂಗೆ ದಲಿತರು ಛೀಮಾರಿ ಹಾಕುವ ಸ್ಥಿತಿ ಬಂದಿದೆ
ಸಿಎಂ ಸಿದ್ದರಾಮಯ್ಯ ಅವರು 14 ಬಾರಿ ಬಜೆಟ್ ಮಂಡಿಸಿದ್ದಾರೆ. ಈ ಬಾರಿ 4,079 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಇಟ್ಟಿದ್ದೇವೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳುತ್ತಾ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ದಲಿತ ವರ್ಗದಿಂದ ಛೀಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ಅವರಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರಿದಂದ ಯಾವುದೇ ಕಾರಣಕ್ಕೂ ದಲಿತ ವರ್ಗಕ್ಕೆ ಈ ರೀತಿ ಅನ್ಯವಾಗುವುದನ್ನು ನಾವು ಸಹಿಸುವುದಿಲ್ಲ. ಹೋರಾಟದ ಹಾದಿಯನ್ನು ಇಳಿಯುತ್ತೇವೆ ಎಂದು ಪುರುಷೋತ್ತಮ ಸರ್ಕಾರವನ್ನು ಎಚ್ಚರಿಸಿದರು.

ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ್ದು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ಪರಿಪಾಠ ಅನುಸರಿಸಿದೆ. ಈ ಬಗ್ಗೆ ರಾಜ್ಯವ್ಯಾಪಿ ಹೋರಾಟ ರೂಪಿಸುತ್ತೇವೆ. ಇದೇ ತಿಂಗಳ ಆಗಸ್ಟ್ 5 ಶನಿವಾರದಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರದ ದಲಿತ ನೀತಿಯ ವಿರುದ್ಧ ಹೋರಾಟ ಮಾಡುತ್ತೇವೆ. ನಮ್ಮ ಪ್ರತಿಭಟನೆಗೆ ಅನೇಕ ದಲಿತ ಸಂಘಟನೆಗಳ ಬೆಂಬಲ ಸೂಚಿಸಿವೆ " ಎಂದು ಅವರು ತಿಳಿಸಿದರು.












Click it and Unblock the Notifications