ʼರೇಷನ್ ಕಾರ್ಡ್ ರದ್ದುಪಡಿಸಲು ಹೊರಟ ರಾಜ್ಯ ಸರ್ಕಾರʼ
ಬೆಂಗಳೂರು, ಸೆಪ್ಟೆಂಬರ್ 10: ಉಚಿತ ಗ್ಯಾರಂಟಿಗಳನ್ನು ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಅದಕ್ಕಾಗಿ ಇದೀಗ ಬಡವರ ರೇಷನ್ ಕಾರ್ಡ್ ರದ್ದು ಮಾಡಿ ದುಡ್ಡು ಮಾಡಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 60 ಲಕ್ಷ ರೇಷನ್ ಕಾರ್ಡ್ ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. 5 ಗ್ಯಾರಂಟಿಗಳಿಗೆ ಕೊಡಲು ಇವರ ಬಳಿ ಹಣವಿಲ್ಲ. ನಮ್ಮ ರೇಷನ್ ಕಾರ್ಡ್ ಕಿತ್ತುಕೊಳ್ಳುತ್ತಿದ್ದಾರೆಂದು ಬಡ ಜನರು ಆತಂಕಕ್ಕೀಡಾಗಿದ್ದಾರೆ. ಈ ವಿಚಾರದಲ್ಲಿ ಎಲ್ಲೆಡೆ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಿದರು.

ಗ್ಯಾರಂಟಿಗಳಿಗೆ ಕೊಡಲು ಹಣವಿಲ್ಲ. ಹೀಗಾಗಿ ರೇಷನ್ ಕಾರ್ಡ್ ಕಿತ್ತರೆ ಮೂರು ನಾಲ್ಕು ಸಾವಿರ ಕೋಟಿ ರೂಪಾಯಿ ಹಣ ಸಿಗುತ್ತದೆ ಎಂದು ಅಂತ ಅದಕ್ಕೆ ಕೈ ಹಾಕಿದ್ದಾರೆ. ಸರ್ಕಾರದ ಆಡಳಿತ ಯಂತ್ರ ಪೂರ್ತಿ ಐಸಿಯುನಲ್ಲಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ ಉದ್ಯಮಸ್ನೇಹಿ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉದ್ಯಮಸ್ನೇಹಿ ವಾತಾವರಣವನ್ನು ಹಾಳು ಮಾಡಿದೆ ಎಂದು ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಸರ್ಕಾರದ ನೀತಿಗಳು ಹಾಗೂ ಅಸಮರ್ಪಕ ಆಡಳಿತದಿಂದ ಅನೇಕ ಉದ್ಯಮಗಳು ರಾಜ್ಯ ತೊರೆದು ಬೇರೆ ಕಡೆ ಹೋಗುತ್ತಿವೆ ಎಂದೂ ಬಿಜೆಪಿ ಎಕ್ಸ್ ಸಂದೇಶದ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಆಡಳಿತದಲ್ಲಿ ಉದ್ಯಮವೂ ಇಲ್ಲ, ಉದ್ಯೋಗವೂ ಇಲ್ಲ!
ನಮ್ಮ ಬಿಜೆಪಿ ಸರ್ಕಾರದ ಆಡಳಿತದ ನೀತಿ, ನಾವು ರಾಜ್ಯದಲ್ಲಿ ಮೂಡಿಸಿದ್ದ ಉದ್ಯಮಸ್ನೇಹಿ ವಾತಾವರಣದಿಂದ ಇಡೀ ಭಾರತದಲ್ಲೇ ಅತಿ ಹೆಚ್ಚಿನ ವಿದೇಶೀ ಬಂಡವಾಳ ಹೂಡಿಕೆ ನಮ್ಮ ಕರ್ನಾಟಕಕ್ಕೆ ಹರಿದು ಬಂದಿತ್ತು. ಜಗತ್ತೇ ಕೋವಿಡ್ ಮಹಾಮಾರಿಯಿಂದ ತತ್ತರಿಸಿ ಆರ್ಥಿಕವಾಗಿ ಕುಸಿದ ಸಮಯದಲ್ಲೂ ನಮ್ಮ ಆಡಳಿತ ವೈಖರಿಯಿಂದ ಅವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಎಫ್‌ಡಿಐ ನೀತಿ ಸುಧಾರಣೆಗಳ ಕುರಿತು ನಾವು ಕೈಗೊಂಡ ಕ್ರಮಗಳಿಂದ ಕರ್ನಾಟಕವನ್ನು ಎಫ್‌ಡಿಐ ನಲ್ಲಿ ದೇಶದಲ್ಲಿಯೇ ನಂಬರ್-1 ಸ್ಥಾನಕ್ಕೆ ಏರಿಸಿದ್ದೆವು ಎಂದು ಬಿಜೆಪಿ ತಿಳಿಸಿದೆ.
ಆದರೆ ಇಂದಿನ ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತದಿಂದ ಉದ್ಯಮಗಳಿಗೆ ಸರಿಯಾದ ಮೂಲಸೌಕರ್ಯ ಕಲ್ಪಿಸದೇ ಹಲವಾರು ಉದ್ಯಮಗಳು ರಾಜ್ಯ ತೊರೆದು ಬೇರೆ ಕಡೆ ಹೋದವು. ಹಾಗೂ ಉದ್ಯಮಿಗಳ ಕುರಿತ ಕಡೆಗಣನೆಯಿಂದ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ತಗ್ಗಿದ ಪರಿಣಾಮ ಕರ್ನಾಟಕವು ಇಂದು ಎರಡನೇ ಸ್ಥಾನಕ್ಕೆ ಕುಸಿದಿದೆ.
10 ಕೆಜಿ ಅಕ್ಕಿ ಕೊಡುವುದಾಗಿ ಮತದಾರರಿಗೆ ಸುಳ್ಳು ಆಮಿಷಗಳನ್ನೊಡ್ಡಿ ಅಧಿಕಾರಕ್ಕೆ ಬಂದು ಅಕ್ಕಿಯನ್ನೂ ಕೊಡದೆ, ಹಣವೂ ನೀಡದ ನಯವಂಚಕತನ ಮೆರೆದ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡುವ ಅಕ್ಕಿಯನ್ನೇ ತಮ್ಮದೆಂದು ಬಿಂಬಿಸಿಕೊಂಡು ಕಪಟತನ ಮೆರೆದಿರುವ ಸಿದ್ದರಾಮಯ್ಯ ನವರ ಸರ್ಕಾರ ಹಣ ಕೊಟ್ಟರೂ ಅಕ್ಕಿ ಕೊಡುತ್ತಿಲ್ಲ ವೆಂದು ನಾಟಕವಾಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾಯಿತು. ಈಗ ಕರ್ನಾಟಕಕ್ಕೆ ಬೇಕಾಗುವಷ್ಟು ಅಕ್ಕಿ ಕೊಡುವುದಾಗಿ ಮೋದಿ ಸರ್ಕಾರ ಹೇಳಿದರೂ, ಸಚಿವ ಮುನಿಯಪ್ಪ ಮುಖ್ಯಮಂತ್ರಿಗಳು ಅನುಮತಿ ನೀಡುತ್ತಿಲ್ಲವಂತೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಅಕ್ಕಿ ಖರೀದಿಗೆ ಏಕೆ ಅನುಮತಿ ಕೊಡುತ್ತಿಲ್ಲ? ಬೊಕ್ಕಸ ಬರಿದಾಯಿತೇ ? ಎಂದು ಬಿಜೆಪಿ ಪ್ರಶ್ನಿಸಿದರು.












Click it and Unblock the Notifications