ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಜೊತೆ 2.5 ಲಕ್ಷ ರೂ. ಲಂಚ ಆರೋಪ : ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ
ಬೆಂಗಳೂರು, ಅಕ್ಟೋಬರ್ 28: 40% ಕಮೀಷನ್ , ಪೇ ಸಿಎಂ ನಿಂದ ಈಗಾಗಲೇ ಚರ್ಚೆಗೀಡಾಗಿರುವ ರಾಜ್ಯ ಸರಕಾರ ದೀಪಾವಳಿ ಹಬ್ಬದ ಪ್ರಯುಕ್ತ ಕೆಲವು ಪತ್ರಕರ್ತರಿಗೆ ಸಿಹಿ ತಿಂಡಿಗಳ ಜೊತೆಗೆ ಹಣವನ್ನು ನೀಡಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
ಆರೋಪ ಕುರಿತು ಕರ್ನಾಟಕ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಸರಣಿ ಟ್ವೀಟ್ ಮಾಡಿದೆ. " ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ 2.5 ಲಕ್ಷ ಉಡುಗೊರೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 40% ಕಮಿಷನ್‌ನಲ್ಲಿ ನೀಡಿದ ಹಣವೇ? 40% ಕಮಿಷನ್ ಕರ್ಮಕಾಂಡಗಳನ್ನು ಮುಚ್ಚಿಡಲು ನೀಡಿದ ಲಂಚವೇ? ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ? ಬಸವರಾಜ ಬೊಮ್ಮಾಯಿಯವರೇ, ಆ 'ಲಂಚ'ದ ಬಗ್ಗೆ ತಾವು ಜನತೆಗೆ ಉತ್ತರಿಸಬೇಕಿದೆ.
ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಿದ ವರದಿಯ ಬಗ್ಗೆ ತನಿಖೆಯಾಗಬೇಕು. ಆ ಹಣ ಯಾರದ್ದು? ಸರ್ಕಾರದ್ದೇ? ಬಿಜೆಪಿ ಪಕ್ಷದ್ದೇ? ಮುಖ್ಯಮಂತ್ರಿಗಳದ್ದೇ?. 40% ಕಮಿಷನ್ ಆ ಹಣದ ಮೂಲವೇ? ಪಡೆದ ಲಂಚವು ಕೊಡುವ ಲಂಚವಾಗಿ ಮಾರ್ಪಟ್ಟಿದೆಯೇ? ಬೊಮ್ಮಾಯಿ ಅವರೇ, ನಿಮ್ಮ ಕಚೇರಿಯಲ್ಲಿ ನಡೆದದ್ದಕ್ಕೆ ನೀವೇ ಉತ್ತರದಾಯಿ, ತನಿಖೆಯಾಗಬೇಕಲ್ಲವೇ?

ಸಿಎಂ ಕಚೇರಿ ನೀಡಿದ 2.5 ಲಕ್ಷ ರೂಗಳ ಲಂಚವನ್ನು ವಾಪಸ್ ಮಾಡುವ ಮೂಲಕ ಕೆಲವರು ಪತ್ರಿಕಾಧರ್ಮವನ್ನು ಎತ್ತಿ ಹಿಡಿದಿದ್ದಾರೆ ಎಂಬುದು ತಿಳಿದುಬಂದಿದೆ. ಈ ಮೂಲಕ ಕರ್ನಾಟಕದ ಪತ್ರಕರ್ತರು ಪತ್ರಿಕಾಧರ್ಮದ ಪಾವಿತ್ರ್ಯತೆಗೆ ದಕ್ಕೆ ತರುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಆದರೆ ಪತ್ರಕರ್ತರಿಗೆ ಲಂಚ ನೀಡಿದ್ದೇಕೆ ಎಂಬುದನ್ನು ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಪ್ರತಿ ಟ್ವೀಟ್‌ಗೂ #SayCM ಎಂದು ಟ್ಯಾಗ್ ಮಾಡಿ ಕಾಂಗ್ರೆಸ್ ಆಗ್ರಹಪಡಿಸಿದೆ.
ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯ 'ಸ್ವೀಟ್ ಬಾಕ್ಸ್ ಲಂಚ'ದ ಕುರಿತು ನ್ಯಾಯಾಂಗ ತನಿಖೆಯಾಗಬೇಕು.
— Karnataka Congress (@INCKarnataka) October 28, 2022
ಅದು ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆಯೇ?
ಕಮಿಷನ್ ಭ್ರಷ್ಟಾಚಾರದ ಪಾಪದ ಹಣವೇ?
ಆ ಹಣದ ಮೂಲ ಯಾವುದು?
ಎಷ್ಟು ಹಣ ಲಂಚವಾಗಿ ನೀಡಲಾಗಿದೆ, ಪಡೆದವರೆಷ್ಟು, ವಾಪಸ್ ನೀಡಿದವರೆಷ್ಟು ಎಂಬಿತ್ಯಾದಿ ಸಂಗತಿ ರಾಜ್ಯದ ಜನತೆಗೆ ತಿಳಿಯಬೇಕು.#SayCM
ನ್ಯಾಯಾಂಗ ತನಿಖೆಗೆ ಒತ್ತಾಯ; "ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯ 'ಸ್ವೀಟ್ ಬಾಕ್ಸ್ ಲಂಚ'ದ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಅದು ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆಯೇ? ಕಮಿಷನ್ ಭ್ರಷ್ಟಾಚಾರದ ಪಾಪದ ಹಣವೇ? ಆ ಹಣದ ಮೂಲ ಯಾವುದು? ಎಷ್ಟು ಹಣ ಲಂಚವಾಗಿ ನೀಡಲಾಗಿದೆ, ಪಡೆದವರೆಷ್ಟು, ವಾಪಸ್ ನೀಡಿದವರೆಷ್ಟು? ಎಂಬಿತ್ಯಾದಿ ಸಂಗತಿ ರಾಜ್ಯದ ಜನತೆಗೆ ತಿಳಿಯಬೇಕಿದೆ" ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಆರೋಪದ ನ್ಯಾಯಾಂಗ ತನಿಖೆಯಾಗಬೇಕೆಂದು ಒತ್ತಾಯಿಸಿದೆ.
ನಾವು ಸುಮ್ಮನೇ ಬಸವರಾರಾಜ ಬೊಮ್ಮಾಯಿಯವರನ್ನು ಪೇ ಸಿಎಂ ಎಂದಿಲ್ಲ!. ಈ ಸರಕಾರ ಲಂಚವನ್ನು ಪಡೆಯುತ್ತದೆ, ಲಂಚವನ್ನು ನೀಡುತ್ತದೆ! ಇವೆಲ್ಲವೂ #PayCM ಮೂಲಕವೇ ನಡೆಯುತ್ತದೆಯೇ ಮುಖ್ಯಮಂತ್ರಿಗಳೇ!? ಶಾಸಕರನ್ನು ಖರೀದಿಸಿ ಸರಕಾರ ಮಾಡಿದಂತೆ ಮಾಧ್ಯಮಗಳನ್ನೂ ಖರೀದಿಸಿ ಅಕ್ರಮಗಳನ್ನು ಮುಚ್ಚಿಕೊಳ್ಳುವ ಹುನ್ನಾರವೇ? ಎಂದು ಆಡಳಿತ ಪಕ್ಷಕ್ಕೆ ಚಾಟಿ ಬೀಸಿದೆ.
ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂದು ಪೀಪಲ್ ಮೀಡಿಯಾ ಜಾಲತಾಣವು ಪ್ರಕಟಿಸಿದ ವರದಿಯು ಮಾಧ್ಯಮ ಸಂಸ್ಥೆಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ವರದಿಯ ನಂತರ ಲೇಖಕ ರಾಜರಾಂ ತಲ್ಲೂರು, ಇದೊಂದು ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಪರಿಗಣಿಸಬೇಕಲ್ಲದೇ ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜನಾಧಿಕಾರ ಸಂಘರ್ಷ ಪರಿಷತ್ ಲೋಕಾಯುಕ್ತರು ಮತ್ತು ಎಡಿಜಿಪಿಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಲಂಚ ಮುಖ್ಯಮಂತ್ರಿ ಹಾಗೂ ಮಾಧ್ಯಮ ಸಂಯೋಜಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮದ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ ಎಂದು ತಿಳಿದುಬಂದಿದೆ.












Click it and Unblock the Notifications