ಡಿ ಕೆ ಶಿವಕುಮಾರ್ ವಿರುದ್ಧ ಒಂದಾದ ಕೈ ದಲಿತ ನಾಯಕರು: ಎಲ್ಲಾರದ್ದೂ ಒಂದೇ ಗುರಿ!
ಬೆಂಗಳೂರು, ಫೆಬ್ರವರಿ 13: ರಾಜ್ಯ ಕಾಂಗ್ರೆಸ್‌ನಲ್ಲಿ ಪದೇ ಪದೇ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕೈ ಪಾಳಯದಲ್ಲಿ ಚರ್ಚೆ ನಡೆಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಬದಲಾವಣೆ ಕುರಿತು ಸ್ವಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದು, ಹಲವು ಕೈ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣೀಟ್ಟಿದ್ದಾರೆ.
ಕಾಂಗ್ರೆಸ್ ರಾಜ್ಯ ನಾಯಕ ಬಹಿರಂಗ ಹೇಳಿಕೆಗೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಬ್ರೇಕ್ ಹಾಕಿತ್ತು. ಆದರೂ ಸಹ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಬದಲಾವಣೆ ಆಗಬೇಕು ಎಂದು ಕಾಂಗ್ರೆಸ್ ಪಕ್ಷದ ದಲಿತ ನಾಯಕರು ಬಹಿರಂಗವಾಗಿಯೇ ಅಸಮಾಧಾನವನ್ನ ಹೊರಹಾಕುತ್ತಿದ್ದಾರೆ. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಗಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ರಾಜ್ಯ ಕಾಂಗ್ರೆಸ್ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯ ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ದಲಿತ ಮುಖ್ಯಮಂತ್ರಿ ವಿಚಾರ ಚರ್ಚೆಯಲ್ಲಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಕೈ ಪಾಳಯದಲ್ಲಿ ಅಸಮಾಧಾನ ಶಮನವಾಗಿತ್ತು. ಲೋಕಸಭಾ ಚುನಾವಣೆಯ ಬಳಿಕ ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಹೈಕಮಾಂಡ್ ಮುಂದೆ ಹಲವು ನಾಯಕರು ಒತ್ತಡವನ್ನ ಹಾಕಿದ್ದಾರೆ. ಈಗಾಗಲೇ ದೆಹಲಿ ವರಿಷ್ಠರನ್ನ ರಾಜ್ಯ ಗೃಹ ಸಚಿವರಾದ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದರೆ ಕಾಂಗ್ರೆಸ್ ಹಿನ್ನೆಡೆಯಾಗಲಿದೆ ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್ ಹೊಸ ಸಾರಥಿಯನ್ನ ಆಯ್ಕೆ ಮಾಡುವುದಾಗಿ ಹೇಳಿತ್ತು. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ವಿರುದ್ಧ ಕಾಂಗ್ರೆಸ್ ನ ದಲಿತ ನಾಯಕರೆಲ್ಲಾ ಒಟ್ಟಿಗಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೊನೆಗೂ ದಿನಾಂಕ ಹಾಗೂ ಮುಹೂರ್ತ ಕೂಡಿ ಬಂದಿದೆ. ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸುಳಿವು ನೀಡಿದ್ದು, ಶೀಘ್ರದಲ್ಲೇ ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಆಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಭಾರೀ ಪ್ರಭಾವಿ ಇಲಾಖೆ ಹಾಗೂ ರಾಜ್ಯಾಧ್ಯಕ್ಷರ ಹುದ್ದೆಯೂ ಇದೆ ಎಂದು ಕಾಂಗ್ರೆಸ್‌ನ ಕೆಲವು ಸಚಿವರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ ಬಳಿಕ ದಲಿತ ನಾಯಕರೆಲ್ಲಾ ಕೆ ಶಿವಕುಮಾರ್ ವಿರುದ್ಧ ಒಂದಾಗಿದ್ದಾರೆ ಎನ್ನಲಾಗಿದೆ.
ಡಿ ಕೆ ಶಿವಕುಮಾರ್ ಅವರ ವಿರುದ್ಧ ದಲಿತ ನಾಯಕರೆಲ್ಲಾ ಒಂದಾಗಿರುವುದು ಒಂದೇ ಉದ್ದೇಶಕ್ಕಾಗಿ. ಸಿದ್ದರಾಮಯ್ಯ ಅವರ ಎರಡೂವರೆ ವರ್ಷಗಳ ಅಧಿಕಾರಾವಧಿಯ ನಂತರ ಮುಖ್ಯಮಂತ್ರಿ ಹುದ್ದೆಗೇರಲು ಡಿಕೆ.ಶಿವಕುಮಾರ್ ಅವರು ಸಜ್ಜಾಗಿದ್ದಾರೆ. ಆದರೆ, ಸಿಎಂ ಕುರ್ಚಿಯಿಂದ ಡಿಕೆ ಶಿವಕುಮಾರ್ ಅವರನ್ನ ದೂರ ಇಡಲು ಸತೀಶ್ ಜಾರಕಿಹೊಳಿ ಅ್ಯಂಡ್ ಟೀಮ್ ನಿರಂತರವಾಗಿ ಶ್ರಮ ವಹಿಸುತ್ತಿದೆ. ಹೀಗಾಗಿಯೇ ದಲಿತ ಸಮಾವೇಶ, ದಲಿತ ಸಿಎಂ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.












Click it and Unblock the Notifications