KJ George: ರಾಜ್ಯದಲ್ಲಿ ಪಂಚ ಗ್ಯಾರಂಟಿ ಕೈಬಿಡುತ್ತಾ ಕಾಂಗ್ರೆಸ್? ಕೆಜೆ ಜಾರ್ಜ್ ಹೇಳಿದ್ದೇನು?
ಚಿಕ್ಕಮಗಳೂರು ಆಗಸ್ಟ್ 15: ರಾಜ್ಯದಲ್ಲಿ ಗೃಹ ಜ್ಯೋತಿ ಜಾರಿಯಲ್ಲಿದೆ, ಯಾವುದೇ ಪರಿಷ್ಕರಣೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಹೀಗಾಗಿ ಪಂಚ ಗ್ಯಾರಂಟಿಗಳನ್ನು ಕೈ ಬಿಡಬೇಕು ಎನ್ನುವ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಜೆ ಜಾರ್ಜ್ ಬಿಜೆಪಿ ವಿರುದ್ಧ ಆಕ್ರೋಶಗೊಂಡರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಪಂಚ ಗ್ಯಾರಂಟಿಗಳೇ ದೊಡ್ಡ ಡೆವಲಪ್ಮೆಂಟ್. ಕೊವೀಡ್ ಸರಿಯಾಗಿ ನಿರ್ವಹಿಸದೆ, ಡೀಮಾನಿಟೈಸ್ ಮಾಡಿ ಜನರನ್ನ ಕಷ್ಟಕ್ಕೆ ತಳ್ಳಿದವರು ಯಾರು...? ಅದಕ್ಕೆ ನಾವು ಈ ತರ ಕಾರ್ಯಕ್ರಮಗಳನ್ನ ನೀಡಿ ಅವರ ಕೈ ಬಲ ಪಡಿಸುತ್ತಿದ್ದೇವೆ' ಎಂದು ಹೇಳಿದರು.

'ಬಿಜೆಪಿಯವರಿಗೆ ಅವರ ಜೀವಮಾನದಲ್ಲಿ ಹೊಸ ಯೋಜನೆ ಮಾಡಲು ಆಗಲ್ಲ. 5 ಗ್ಯಾರಂಟಿಗಳ ಯೋಜನೆಗಳು, ಸಾಮಾನ್ಯ ಜನ, ಮಹಿಳೆಯರಿಗೆ ಕೊಡ್ಸೋ ಕೆಲಸ ಮಾಡಿದ್ರಾ? ಅವರ ರಾಜಕೀಯ ಭಾಷಣಕ್ಕೆ ನೀವೇಕೆ ಚಿಂತೆ ಮಾಡ್ತೀರಾ? ಪರಿಷ್ಕರಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗಿಲ್ಲ' ಎಂದರು.
ಗ್ಯಾರಂಟಿ ಪರಿಷ್ಕರಣೆ ಬಗ್ಗೆ ಸಚಿವರು, ಶಾಸಕರ ಮನವಿ ಬಗ್ಗೆ ಮಾತನಾಡಿದ ಜಾರ್ಜ್, 'ಅದು ಅವರ ವೈಯಕ್ತಿಕ ಅಭಿಪ್ರಾಯ, ಅವರಿಗೆ ಹೇಳಲು ಹಕ್ಕಿದೆ, ಅವರು ಹೇಳೋದು ತಪ್ಪಲ್ಲ. ಅದು ಕ್ಯಾಬಿನೆಟ್ ತೀರ್ಮಾನ, ಕ್ಯಾಬಿನೆಟ್ ನಲ್ಲಿ ಬರಬೇಕು ಎಂದು ಕೆ.ಜೆ.ಜಾರ್ಜ್ ಹೇಳಿದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ ಎಂದಿದ್ದಾರೆ. ಸಚಿವರು, ಮುಖಂಡರು ದೆಹಲಿಗೆ ಹೋದಾಗ ಎಐಸಿಸಿ ಕಚೇರಿಗೆ ಭೇಟಿ ನೀಡುವುದು ಸಂಪ್ರದಾಯ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ತಲುಪಬೇಕು ಎಂಬುದು ಬಹಳ ಜನರ ಅಭಿಪ್ರಾಯವಾಗಿದೆ. ಈಗಾಗಲೇ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ರೂ. 56 ಸಾವಿರ ಕೋಟಿ ಮೀಸಲಿಡಲಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವುದು ಸಾಧ್ಯವಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಚರ್ಚೆಗಳಾಗುತ್ತಿರುವುದು ನಿಜ. ಶಾಸಕರು, ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡಿರಬಹುದು. ಪಕ್ಷದ ವೇದಿಕೆಯಲ್ಲಿ, ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.13ರಷ್ಟು ಮತ ಹೆಚ್ಚಾಗಿವೆ. ಗ್ಯಾರಂಟಿ ಯೋಜನೆಗಳಿಂದ ಮತ ಹೆಚ್ಚಾಗಿದೆ ಎಂದು ಯಾಕೆ ವಿಶ್ಲೇಷಣೆ ಮಾಡಬಾರದು ಎಂದ ಅವರು, ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ನನ್ನ ಅಭಿಪ್ರಾಯವೊಂದೇ ಮುಖ್ಯವಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಹೋದರೆ ಗೊಂದಲ ಉಂಟಾಗುತ್ತದೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications