Breaking; ಕಂಪ್ಯೂಟರ್ ಪರೀಕ್ಷೆ, ಸರ್ಕಾರಕ್ಕೆ ಸರ್ಕಾರಿ ನೌಕರರ ಪತ್ರ
ಬೆಂಗಳೂರು, ಡಿಸೆಂಬರ್ 20; ರಾಜ್ಯ ಸರ್ಕಾರಿ ನೌಕರರು 'ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ'ಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಪತ್ರವೊಂದನ್ನು ಬರೆದಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಈ ಕುರಿತು ಮಾನ್ಯ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇವರಿಗೆ ಮಂಗಳವಾರ ಪತ್ರವನ್ನು ಬರೆದಿದ್ದಾರೆ.
ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ದಿನಾಂಕವನ್ನು 31/12/2023 ರವರೆಗೆ ವಿಸ್ತರಣೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ, ಮುಂಬಡ್ತಿ ಇನ್ನಿತರೆ ಸವಲತ್ತುಗಳನ್ನು ಪಡೆಯಲು ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಲಾಗಿದೆ.
ಅಂತೆಯೇ, ಉಲ್ಲೇಖಿತ ಅಧಿಸೂಚನೆಯನ್ವಯ ದಿನಾಂಕ 31/12/2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಮಯಾವಕಾಶ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಆದರೆ, ಕೆಲವು ಕಾರಣಗಳಿಂದಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಅಧಿಕಾರಿ, ನೌಕರರು ನಿಗಧಿತ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದಿರುವುದನ್ನು ಗಮನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲಿ ಹಲವು ಅಂಶಗಳನ್ನು ವಿವರಿಸಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ-ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ದಿನಾಂಕ 31/12/2023ರವರೆಗೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲು ಕೋರಲಾಗಿದೆ.
ಕಾರಣಗಳೇನು?
* ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಪ್ಯೂಟರ್ ಸಾಕ್ಷರತಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಸಾಕ್ಷರತಾ ಕೇಂದ್ರಗಳಿಲ್ಲದ ಜಿಲ್ಲೆಗಳ ನೌಕರರು ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ತೆಗೆದುಕೊಳ್ಳುವಲ್ಲಿ ಆಗುತ್ತಿರುವ ತೊಂದರೆಗಳು.
* ಪರೀಕ್ಷಾ ಕೇಂದ್ರಗಳು ಅತ್ಯಲ್ಪ ಪ್ರಮಾಣದಲ್ಲಿ ಸ್ಲಾಟ್‌ಗಳನ್ನು ನೀಡುತ್ತಿರುವುದು ಹಾಗೂ ಸ್ಲಾಟ್‌ಗಳನ್ನು ನೀಡುವಲ್ಲಿ ದೀರ್ಘಾವಧಿ ಸಮಯವನ್ನು ತೆಗೆದುಕೊಳ್ಳುತ್ತಿರುವುದು.
* ಇತ್ತೀಚೆಗೆ ಸರ್ಕಾರವು ಹೊಸದಾಗಿ ವಿವಿಧ ವೃಂಧದ ಹುದ್ದೆಗಳನ್ನು ನೇಮಕ ಮಾಡಿದ್ದು, ಹೊಸದಾಗಿ ನೇಮಕ ಹೊಂದಿದ ಸಿಬ್ಬಂದಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಬೇಕಾಗುತ್ತದೆ.
* ಕೆಲವು ಇಲಾಖೆಗಳಲ್ಲಿ ನೌಕರರ ಮಾಹಿತಿಗಳನ್ನು ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ಅಳವಡಿಸದೇ ವಿಳಂಬವಾಗಿದ್ದು, ಪ್ರಸ್ತುತ ಹೆಚ್. ಆರ್. ಎಂ. ಎಸ್ ತಂತ್ರಾಂಶದಲ್ಲಿ ಮಾಹಿತಿ ಅಳವಡಿಸಿಕೊಂಡಿರುವ ನೌಕರರೂ ಸಹ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಕಲ್ಪಿಸಬೇಕಾಗುತ್ತದೆ ಎಂದು ವಿವರಿಸಲಾಗಿದೆ.












Click it and Unblock the Notifications