ಮುನಿರತ್ನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು
ಬೆಂಗಳೂರು, ಮಾರ್ಚ್ 06 : ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಚುನಾವಣೆ ಹತ್ತಿರವಾಗುತ್ತಿರುವಾಗ ಮತದಾರರಿಗೆ ಸೀರೆ, ಕುಕ್ಕರ್ ಹಂಚುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಲಗ್ಗೆರೆ ವಾರ್ಡ್ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಅವರು ಆಯೋಗಕ್ಕೆ ದೂರು ನೀಡಿದ್ದಾರೆ. ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ? : ರಾಜರಾಜೇಶ್ವರಿ ನಗರದಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆಯುವ ಸಾಧ್ಯತೆ ಕ್ಷೀಣಿಸುತ್ತಿದೆ. ಕಾಂಗ್ರೆಸ್‌ನ ಕೆಲವು ಸದಸ್ಯರು ರಾಜಾರೋಷವಾಗಿ ಮತದಾನ ನಡೆಯುವ ಶಾಲೆ, ಸರ್ಕಾರಿ ಕಟ್ಟಡಗಳ ಜಾಗದಲ್ಲಿ ಸೀರೆ, ಕುಕ್ಕರ್, ಮಿಕ್ಸಿ ಹಂಚುತ್ತಿದ್ದಾರೆ.

ಶಾಸಕ ಮುನಿರತ್ನ ಅವರಿಗೆ ಮತ ಹಾಕುತ್ತೇವೆ ಎಂದು ಆಣೆ-ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅವರ ಗುರುತಿನ ಚೀಟಿಯನ್ನು ಕಿತ್ತಿಕೊಳ್ಳುತ್ತಿದ್ದಾರೆ. ಪೊಲೀಸರ ಮೇಲೆ ಒತ್ತಡ ಹಾಕಿ, ರೌಡಿ ಶೀಟರ್ ಪಟ್ಟಿಗೆ ಸೇರಿಸುವುದಾಗಿ ಬೆದರಿಸಿ ಯುವಕರು ಕಾಂಗ್ರೆಸ್ ಪರವಾಗಿ ಕೆಲಸ ಮಾಡುವಂತೆ ಮಾಡಲಾಗುತ್ತಿದೆ.
ಬಿಬಿಎಂಪಿ ರೆವಿನ್ಯೂ ಇಲಾಖೆ ಅಧಿಕಾರಿಗಳ ಮೂಲಕ ಕೆಲವು ಹೊರ ರಾಜ್ಯದಿಂದ ಬಂದ ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸಲಾಗುತ್ತಿದೆ. ಈ ಎಲ್ಲಾ ಅಕ್ರಮಗಳನ್ನು ತಡೆಯಲು ಅಧಿಕಾರಿಗಳು ಅಸಹಾಯಕರಾಗಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಜನರ ವೋಟರ್ ಕಾರ್ಡ್ ಕಸಿದುಕೊಂಡು ಸೀರೆ, ಕುಕ್ಕರ್, ಮಿಕ್ಸಿಗಳನ್ನು ಹಂಚುವುದನ್ನು ತಡೆಯಬೇಕು. ಜನರಿಗೆ ಹಂಚಲು ತಂದಿರುವ ವಸ್ತುಗಳನ್ನು ತಕ್ಷಣ ವಶಕ್ಕೆ ಪಡೆದುಕೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.











Click it and Unblock the Notifications