ನರ್ಸಿಂಗ್ ಕಾಲೇಜುಗಳ ಪರಿಶೀಲನೆಗೆ ಸದನ ಸಮಿತಿ ರಚನೆ ಅಧಿಕಾರವಿದೆ
ಬೆಂಗಳೂರು, ಜನವರಿ 10; ನರ್ಸಿಂಗ್ ಕಾಲೇಜುಗಳು ಭಾರತೀಯ ನರ್ಸಿಂಗ್ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿವೆಯೇ, ಅಲ್ಲಿನ ಮೂಲಸೌಕರ್ಯ ಸರಿಯಾಗಿದೆ ಎಂಬುದನ್ನು ಖಾತ್ರಪಡಿಸಿಕೊಳ್ಳಲು ರಾಜ್ಯ ವಿಧಾನ ಪರಿಷತ್‌ಗೆ ಸದನ ಸಮಿತಿ ರಚಿಸುವ ಅಧಿಕಾರವಿದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಸಮಿತಿ ರಚನೆ ಸಿಂಧುತ್ವ ಎತ್ತಿ ಹಿಡಿದಿರುವ ವಿಭಾಗೀಯಪೀಠ ಮೂಲಸೌಕರ್ಯ ಕುರಿತಂತೆ ಪರಿಶೀಲಿಸುವ ಹೊಣೆ ಸದನ ಸಮಿತಿಗೆ ಇದೆ ಎಂದು ಆದೇಶಿಸಿದೆ.
ಕರ್ನಾಟಕ ನರ್ಸಿಂಗ್ ಮತ್ತು ಆರೋಗ್ಯ ವಿಜ್ಞಾನಗಳ ನಿರ್ವಹಣೆಯ ರಾಜ್ಯ ಒಕ್ಕೂಟ, ಹೈದರಾಬಾದ್- ಕರ್ನಾಟಕ ನರ್ಸಿಂಗ್ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಮತ್ತಿತರ ಸಂಸ್ಥೆಗಳು ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರ್ಲೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.

ಅಲ್ಲದೇ, ಒಂದು ವೇಳೆ ಸದನ ಸಮಿತಿ ವರದಿ ನೀಡಿದರೆ ಅದು ಬಹಿರಂಗವಾಗಿ ಸಾರ್ವಜನಿಕರಿಗೆ ಲಭ್ಯವಾದಾಗ ಅವರು ಅದನ್ನು ದುರುಪಯೋಗಪಡಿಸಿಕೊಳ್ಳಬಹುದೆಂಬ ಅರ್ಜಿದಾರರ ವಾದ ತಿರಸ್ಕರಿಸಿದೆ.
ಸಮಿತಿಗೆ ನ್ಯಾಯಾಂಗ ಅಧಿಕಾರವಿಲ್ಲ: "ಸದನ ಸಮಿತಿಯನ್ನು ಕಾಲೇಜುಗಳ ಮೂಲಸೌಕರ್ಯ ಹಾಗೂ ಕಾರ್ಯ ನಿರ್ವಹಣೆ ಅಧ್ಯಯನ ಮಾಡಲು ಮಾತ್ರವೇ ರಚಿಸಲಾಗಿದೆಯೇ ಹೊರತು ಅಧಿಕಾರಿಗಳ ಕಾರ್ಯಗಳನ್ನು ಮೇಲ್ವಿಚಾರಣೆ ನಡೆಸಲು ಅಲ್ಲ. ಮೂಲಸೌಕರ್ಯ ಇತ್ಯಾದಿಗಳ ಕುರಿತು ಅಧ್ಯಯನ ನಡೆಸುವ ನಿಟ್ಟಿನಲ್ಲಿ ಸಮಿತಿಯು, ನರ್ಸಿಂಗ್ ಕಾಲೇಜುಗಳಿಗೆ ಭೇಟಿ ನೀಡುವ ಅಧಿಕಾರವನ್ನು ಹೊಂದಿದೆ. ಈ ಸಮಿತಿಯು ಸಾಂವಿಧಾನಿಕ ಯೋಜನೆಯಡಿ ನ್ಯಾಯಾಂಗಕ್ಕೆ ಸೇರಿರುವ ಯಾವುದೇ ನ್ಯಾಯಮಂಡಳಿಯ ಅಧಿಕಾರ ಹೊಂದಿಲ್ಲ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 223ರ ಪ್ರಕಾರ, ಸಮಿತಿ ವರದಿ ಸಲ್ಲಿಸಿದಾಕ್ಷಣ ಅದನ್ನು ಬಹಿರಂಗಪಡಿಸುವುದಿಲ್ಲ. ಅದು ಸದನದಲ್ಲಿಮಂಡನೆಯಾದರೆ ಮಾತ್ರ ಅದು ಸಾರ್ವಜನಿಕ ಸ್ವತ್ತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರದ ಸಮರ್ಥನೆ: ಸರ್ಕಾರದ ಪರ ವಕೀಲರು, ಕರ್ನಾಟಕ ವಿಧಾನ ಪರಿಷತ್ತಿನಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 199ರ ಅನುಸಾರವೇ ಉಪಸಮಿತಿ ರಚಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
2021ಕ್ಕೂ ಮುನ್ನ ಸರಕಾರ 62 ಹೊಸ ನರ್ಸಿಂಗ್ ಕಾಲೇಜುಗಳಿಗೆ ಮತ್ತು 40 ಹೊಸ ವಿಜ್ಞಾನ ಕೇಂದ್ರಗಳಿಗೆ ಅನುಮತಿ ನೀಡಿರುವುದರಲ್ಲಿಆಗಿದೆ ಎನ್ನಲಾದ ನೂನ್ಯತೆಗಳ ಮತ್ತು ಕಾಲೇಜುಗಳ ಮೂಲಸೌಕರ್ಯ ಭಾರತೀಯ ನರ್ಸಿಂಗ್ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಇವೆಯೇ ಎಂಬುದನ್ನು ಪರಿಶೀಲಿಸಲು 2022ರ ಮೇ 4ರಂದು ಜಂಟಿ ಸದನ ಸಮಿತಿ ರಚನೆ ಮಾಡಲಾಗಿತ್ತು.
ಅದರ ಸಿಂಧುತ್ವವನ್ನು ಪ್ರಶ್ನಿಸಿದ್ದ ನರ್ಸಿಂಗ್ ಕಾಲೇಜುಗಳು ಸದನಕ್ಕೆ ಅಂತಹ ಸಮಿತಿ ರಚನೆ ಅಧಿಕಾರವಿಲ್ಲಎಂದು ಹೈಕೋರ್ಟ್ ಮೆಟ್ಟಿಲೇರಿದ್ದವು. ಏಕಸದಸ್ಯ ನ್ಯಾಯಪೀಠವು ಸಮಿತಿಯ ಸಿಂಧುತ್ವವನ್ನು ಎತ್ತಿ ಹಿಡಿದು ಅರ್ಜಿಗಳನ್ನು ವಜಾಗೊಳಿಸಿತ್ತು. ಆ ಆದೇಶ ಪ್ರಶ್ನಿಸಿ ಖಾಸಗಿ ನರ್ಸಿಂಗ್ ಸಂಸ್ಥೆಗಳು ವಿಭಾಗೀಯಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದವು.












Click it and Unblock the Notifications