Gruhalakshmi Scheme: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ನಾಳೆ ಸಿದ್ದರಾಮಯ್ಯ ಚಾಲನೆ: ಅರ್ಜಿ ಸಲ್ಲಿಸುವುದೇಗೆ ತಿಳಿಯಿರಿ
ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಹಣ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ನಾಳೆ ಮಧ್ಯಾಹ್ನ 1.30ಕ್ಕೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ರಾಜಭವನದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ, ಶುಕ್ರವಾರದಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ ಎಂದು ಹೇಳಿದರು.

ಆಗಸ್ಟ್ 18ರಂದು ಅಕೌಂಟ್‌ಗೆ ಹಣ ಹಾಕುವ ಯೋಜನೆಗೆ ಚಾಲನೆ ನೀಡಲಾಗುವುದು. ಅರ್ಜಿ ಸಲ್ಲಿಕೆ ಬಗ್ಗೆ ಯಾವುದೇ ಅನುಮಾನ ಇದ್ದರೂ 1902 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದರು. ಪತಿ ತೆರಿಗೆ ಕಟ್ಟುತ್ತಿದ್ದರೆ ಅವರ ಪತ್ನಿಯರು ಈ ಯೋಜನೆಗೆ ಅರ್ಹರಾಗುವುದಿಲ್ಲ, ಅರ್ಜಿ ಸ್ವೀಕಾರ ಆಗುವುದಿಲ್ಲ, ಇ-ಗವರ್ನೆನ್ಸ್ ಮೂಲಕ ಅರ್ಜಿ ಸ್ವೀಕರಿಸುತ್ತಿರುವ ಕಾರಣ ಅನರ್ಹವಾಗಿ ಯೋಜನೆಯ ಲಾಭ ಪಡೆಯಲು ಪ್ರಯತ್ನಿಸಿದರೆ ಸುಲಭವಾಗಿ ತಿಳಿಯಲಿದೆ ಎಂದು ಹೇಳಿದರು.
ಫಲಾನುಭವಿಗಳಾಗಲು ಯಾರು ಅರ್ಹ?
ಪ್ರತಿ ಕುಟುಂಬದಲ್ಲಿ ಒಬ್ಬರು ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅತ್ತೆ-ಸೊಸೆ ಇದ್ದಾಗ ಇಬ್ಬರಲ್ಲಿ ಮನೆ ಯಜಮಾನಿ ಯಾರು ಎಂದು ನಿರ್ಧರಿಸಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುತ್ತಿರಬೇಕು. ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು
1) ವಾಸಸ್ಥಳ ಪ್ರಮಾಣಪತ್ರ
2) ಮೊಬೈಲ್ ಸಂಖ್ಯೆ
3) 2 ಪಾಸ್‌ಪೋರ್ಟ್ ಗಾತ್ರದ ಫೋಟೊ
4) ಬ್ಯಾಂಕ್ ಪಾಸ್‌ಬುಕ್ ನಕಲು
5) ಪಡಿತರ ಚೀಟಿ, ನೀರಿನ ಬಿಲ್, ವಿದ್ಯುತ್ ಬಿಲ್ (ವಿಳಾಸ ದೃಢೀಕರಣಕ್ಕೆ)
6) ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ (ವೈಯಕ್ತಿಕ ದೃಢೀಕರಣಕ್ಕೆ)
7) ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
ಅರ್ಜಿ ಸಲ್ಲಿಸುವ ವಿಧಾನ :
ಯೋಜನೆಯ ಪುಟದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ಗೃಹಲಕ್ಷ್ಮಿ ಯೋಜನೆ ನಮೂನೆ ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟೌಟ್ ತೆಗೆದುಕೊಳ್ಳಿ.
ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಮೇಲೆ ತಿಳಿಸಿದ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಅರ್ಜಿಯನ್ನು ಕರ್ನಾಟಕ ಗ್ರಾಮ ಪಂಚಾಯಿತಿ ಕೇಂದ್ರ ಅಥವಾ ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಅಧಿಕಾರಿಗಳು ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿ, ನಂತರ ಅರ್ಹ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಿನಿಂದ ಪ್ರತಿ ತಿಂಗಳು 2000 ರೂಪಾಯಿ ಹಣ ಖಾತೆಗೆ ಜಮಾ ಆಗಲಿದೆ.
ಆನ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದ್ದು, ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ.












Click it and Unblock the Notifications