ಹಾಸನದಲ್ಲಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ: ಕಾರಣವೇನು?
ಹಾಸನ, ನವೆಂಬರ್ 07: ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಯ ಹಣ ಹಲವೆಡೆ ಫಲಾನುಭವಿಗಳಿಗೆ ತಲುಪಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದು, ಮಂಗಳವಾರ ಹಾಸನಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅಧಿಕಾರಿಗಳನ್ನು ವಿಚಾರಿಸಿದರು. ಈ ವೇಳೆ ಎಲ್ಲ ಫಲಾನುಭವಿಗಳಿಗೆ ಇನ್ನೂ ಯಾಕೆ 'ಗೃಹಲಕ್ಷ್ಮಿ' ಹಣ ತಲುಪಿಲ್ಲ ಎಂದು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು, ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆಗೆ ಮಾತನಾಡಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯ ಸಾಧನೆ ಶೇ100 ರಷ್ಟು ಸಾಧಿಸಬೇಕು. ಆದರೆ ಹಾಸನ ಜಿಲ್ಲೆಯಲ್ಲಿ ಇನ್ನೂ ಶೇ90 ರಷ್ಟಕ್ಕೆ ನಿಂತಿದೆ. ಇದನ್ನು ಶೇ 100 ರಷ್ಟು ಪೂರೈಸಿ. ನೋಂದಣಿ ಮಾಡಿಸಿರುವ ಪ್ರತಿಯೊಬ್ಬರಿಗೂ ಗ್ಯಾರಂಟಿ ಸ್ಕೀಂಗಳು ತಲುಪಬೇಕು ಎನ್ನುವ ಸೂಚನೆ ನೀಡಿದರು.

ಹಾಸನ, ಅರಸೀಕರೆ, ಅರಕಲಗೂಡು ತಾಲ್ಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳು ಶೇ 90 ರಷ್ಟನ್ನೂ ತಲುಪಿಲ್ಲ ಏಕೆ ಎಂದು ಗರಂ ಆಗಿ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಮೂರೂ ತಾಲ್ಲೂಕುಗಳ ಅಂಕಿ ಅಂಶಗಳನ್ನು ಕೈಯಲ್ಲಿಟ್ಟುಕೊಂಡು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿ. ನಮ್ಮ ಸರ್ಕಾರ ಎಲ್ಲಾ ವರ್ಗ, ಎಲ್ಲಾ ಜಾತಿ, ಎಲ್ಲಾ ಧರ್ಮಗಳಿಗೂ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಮತ್ತು ನಾವು ಜನರ ಸೇವಕರು. ಜನರೇ ನಮ್ಮ ಮಾಲೀಕರು. ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಸಹಿಸಲ್ಲ, ಅರ್ಜಿ ಸ್ವೀಕರಿಸಿದರೆ ಸ್ವೀಕೃತಿ ಪತ್ರ ಕಡ್ಡಾಯವಾಗಿ ನೀಡಿ. ಸಣ್ಣ ಪುಟ್ಟ ಸಮಸ್ಯೆಗಳಿಗಾಗಿ ನಮ್ಮ ಜನರು ಬೆಂಗಳೂರಿನವರೆಗೂ ನನ್ನನ್ನು ಹುಡುಕಿಕೊಂಡು ಬರಬೇಕಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ರೈತರು ಮತ್ತು ಶ್ರಮಿಕರ ಸಮಸ್ಯೆಗಳು ಬಹುತೇಕ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೇ ಬಗೆಹರಿಸಿ. ಜನರು ಬೆಂಗಳೂರಿನವರೆಗೂ ಅಲೆಯಬಾರದು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಅನಗತ್ಯ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ. ಕಠಿಣ ಕ್ರಮ ಖಚಿತ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಎಲ್ಲದ್ದಕ್ಕೂ ಕೇಂದ್ರ ಸರ್ಕಾರದೆಡೆಗೆ ಬೊಟ್ಟು ಮಾಡುತ್ತಿಲ್ಲ ಬದಲಿಗೆ ಪರಿಹಾರ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿ ಬರ ಬಂದರೆ ಕೇಂದ್ರ ಸರ್ಕಾರದ್ದು ಜವಾಬ್ದಾರಿ ಇರುತ್ತದೆ.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತೆರಿಗೆ ನೀಡುತ್ತದೆ. ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಅನುದಾನವಿರುತ್ತದೆ. ಬೆಳೆ ನಷ್ಟವಾದಾಗ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇರುತ್ತದೆ. 33700 ಕೋಟಿ ರೂ.ಗಳ ಬೆಳೆ ನಷ್ಟವಾಗಿದ್ದು, 17900 ಕೋಟಿ ರೂ.ಗಳನ್ನು ಪರಿಹಾರವಾಗಿ ಕೇಳಿದ್ದೇವೆ. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವೂ ಇಲ್ಲಿಗೆ ಭೇಟಿ ನೀಡಿ ಹೋಗಿದ್ದರೂ, ಇನ್ನೂ ವರದಿ ನೀಡಿಲ್ಲ. ಅನುದಾನ ಶೀಘ್ರ್ರವಾಗಿ ನೀಡಲು ಕೋರಿದ್ದೇವೆ ಎಂದರು. ನಾವು ಬರೆದಿರುವು ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ ಎಂದೂ ತಿಳಿಸಿದರು.












Click it and Unblock the Notifications