Siddaramaiah: ಪದಚ್ಯುತಿಗೆ ಕಾಯ್ತಿದ್ದಾರೆ, ಕುರ್ಚಿ ಭದ್ರಪಡಿಸಿಕೊಳ್ಳಿ: ವಿಜಯೇಂದ್ರಗೆ ಗುಮ್ಮಿದ ಟಗರು
ಬೆಂಗಳೂರು, ನವೆಂಬರ್ 02: ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳು ಮುಂದುವರಿದ ಭಾಗವಾಗಿ ಉಭಯ ಪಕ್ಷಗಳ ನಾಯಕರ ಚರ್ಚೆಗೆ ಆಹ್ವಾನ ನೀಡುತ್ತಿದ್ದಾರೆ. ಭ್ರಷ್ಟಾಚಾರ, ಹೇಳಿಕೆಗಳು, ಸುಳ್ಳು ಆರೋಪ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ನಮ್ಮ ಚಿಂತೆ ಬಿಡಿ, ಬಿಜೆಪಿ ನಾಯಕರ ಬಹಿರಂಗ ಹೇಳಿಕೆಗಳಿಗೆ ಮೊದಲು ಪ್ರತಿಕ್ರಿಯಿಸಿ ಎಂದಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿವೈ ವಿಜಯೇಂದ್ರ ಅವರು ಕಾಲೆಳೆದಿದ್ದರು. ಇದೀಗ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಬದಲಿಗೆ ವಿಜಯೇಂದ್ರ ಅವರೇ ತಾವು ಬಹಿರಂಗ ಚರ್ಚೆಗೆ ಸಿದ್ಧ ಎಂದು ಹಾಕಿರುವ ಸವಾಲನ್ನು ಗಮನಿಸಿದೆ. ನನ್ನ ಜೊತೆ ಚರ್ಚೆ ನಡೆಸುವ ಮೊದಲು ನಿಮ್ಮದೇ ಪಕ್ಷದ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಜೊತೆ ಒಂದು ಸುತ್ತು ಚರ್ಚೆ ಮಾಡಿಕೊಂಡು ಬನ್ನಿ ಎಂದು ಟಾಂಗ್ ಕೊಟ್ಟಿದ್ದಾರೆ.

ಸಿಎಂ, ರಾಜ್ಯಾಧ್ಯಕ್ಷರಾಗಲು ಸಾವಿರಾರು ಕೋಟಿ ಕೊಟ್ಟಿದ್ದೀರಿ
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಮಾಡಲು ನೀವು ಕೆಂದ್ರ ಬಿಜೆಪಿ ಹೈಕಮಾಂಡ್ ಗೆ 2000 ಕೋಟಿ ರೂಪಾಯಿ ನೀಡಿದ್ದೀರಿ..!! ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಇನ್ನೂ ಒಂದಷ್ಟು ಕೋಟಿ ರೂಪಾಯಿ ನೀಡಿದ್ದೀರಿ..!! ಎಂದು ನಿಮ್ಮ ನಾಯಕರೇ ಆರೋಪಿಸಿದ್ದಾರೆ. ಮೊದಲು ಅವರ ಜೊತೆ ಚರ್ಚೆ ಮಾಡಿ ಮುಗಿಸಿ ಬನ್ನಿ ಎಂದು ಗುಡುಗಿದ್ದಾರೆ.
ನೀವು ಕಮಿಷನ್ ಹೊಡೆಯುವುದರಲ್ಲಷ್ಟೇ ಪರಿಣತರು ಎಂದು ನಿಮ್ಮದೇ ಪಕ್ಷದ ನಾಯಕರಾದ ಶಾಸಕ ಯತ್ನಾಳ್, ಜಾರಕಿಹೊಳಿ, ಹೆಚ್.ವಿಶ್ವನಾಥ್ ಅವರು ಹೇಳುತ್ತಲೇ ಇದ್ದಾರೆ. ಇಲ್ಲಿಯ ವರೆಗೆ ಅವರ ಆರೋಪಗಳಿಗೆ ನೀವು ಪ್ರತಿಕ್ರಿಯೆ ನೀಡಿಲ್ಲ ಏಕೆ? ಇಂತಹ ಆರೋಪ ಮಾಡುತ್ತಿರುವವರ ವಿರುದ್ಧ ನಿಮ್ಮ ಬಿಜೆಪಿ ಹೈಕಮಾಂಡ್ ಕೂಡಾ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಈ ಆರೋಪಗಳನ್ನು ನೀವು ಒಪ್ಪಿಕೊಂಡಂತೆ ಕಾಣಿಸುತ್ತಿದೆ, ಇದು ನಿಜವೇ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮವರೇ ನಿಮ್ಮ ಪದಚ್ಯುತಿಗೆ ಕಾಯುತ್ತಿದ್ದಾರೆ!: ಸಿಎಂ
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ನಿಮ್ಮ ಪದಚ್ಯುತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿರುವ ಡಿಸೆಂಬರ್ ತಿಂಗಳ ಗಡುವು ನಿಜವಾಗುತ್ತಿರುವಂತೆ ಕಾಣುತ್ತಿದೆ. ನಮ್ಮ ಸರ್ಕಾರದ ಬಗ್ಗೆ ಚಿಂತಿಸುವ ಬದಲಿಗೆ ಮೊದಲು ನಿಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಯೋಚನೆ ಮಾಡಿ ಎಂದು ಕಿವಿ ಮಾತು ಹೇಳಿದ್ದಾರೆ.
ವಿಜಯೇಂದ್ರ ಅವರೇ ನೀವಿನ್ನೂ ಆಡಳಿತಕ್ಕೆ ಹೊಸಬರು. ತೆರಿಗೆ - ಅನುದಾನ - ಜಿಎಸ್‌ಟಿ ಇತ್ಯಾದಿ ವಿಚಾರಗಳೆಲ್ಲ ನಿಮ್ಮ ತಂದೆಯವರಾದ ಬಿ.ಎಸ್.ಯಡಿಯೂರಪ್ಪನವರಿಗೇ ಅರ್ಥವಾಗಿಲ್ಲ, ನಿಮಗೆಷ್ಟು ಅರ್ಥವಾಗಬಹುದು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಿಮ್ಮದೇ ಕೇಂದ್ರ ಹೈಕಮಾಂಡ್ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ರಾಜ್ಯದ ಜನಪರ ಧ್ವನಿ ಎತ್ತ ಬಿಜೆಪಿಗೆ ಧಮ್ ತಾಕತ್ತಿದೆಯೇ?
ಇತ್ತೀಚೆಗಷ್ಟೇ 28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ತೆರಿಗೆ ಪಾಲನ್ನು ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.6,498 ಕೋಟಿ ಮಾತ್ರ ಎಂದು ವಿವರಿಸಿದರು.
ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ ರೂ.4 ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು ರೂ.45,000 ಕೋಟಿ ಮಾತ್ರ. ಕರ್ನಾಟಕದ ಜನತೆ, ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಪ್ರತಿಯೊಂದು ರೂಪಾಯಿಗೆ ಹಿಂದಿರುಗಿ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ. ಏಳು ಕೋಟಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್-ತಾಖತ್ ನಿಮಗಾಗಲಿ, ನಿಮ್ಮ ಹದಿನೇಳು ಎಂಪಿಗಳಿಗಾಗಲಿ ಎಲ್ಲಿದೆ? ಎಂದು ಲೇವಡಿ ಮಾಡಿದರು.
ನಿಮ್ಮ ಮನೇಲಿ ಪೋಕ್ಸೋ ಆರೋಪಿ: ಹೆಣ್ಮಕ್ಕಳ ಬಗ್ಗೆ ನಮಗೆ ಪಾಠ
ನಮ್ಮ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ? ನಿಮ್ಮ ಅವಧಿಯಲ್ಲಿ ನಿಮ್ಮದೇ ಶಾಸಕರು ಹೇಗೆ ದುರ್ಯೋಧನ - ದುಶ್ಯಾಸನರ ರೀತಿಯಲ್ಲಿ ನಡೆದುಕೊಂಡಿದ್ದರು ಎನ್ನುವ ಇತಿಹಾಸ ನಾನು ಕೆದಕುವುದಿಲ್ಲ. ಆದರೆ ಪೋಕ್ಸೋ ಕಾಯ್ದೆಯಡಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನಿಮ್ಮ ಪೂಜ್ಯ ತಂದೆಯವರನ್ನು ಮನೆಯಲ್ಲಿಟ್ಟುಕೊಂಡು ನಮಗೆ ಹೆಣ್ಣುಮಕ್ಕಳ ರಕ್ಷಣೆಯ ಪಾಠ ಮಾಡಲು ಕನಿಷ್ಠ ನಿಮಗೆ ನಾಚಿಕೆ ಆಗುವುದಿಲ್ಲವೇ?
''ಬೇಟಿ ಬಚಾವೋ, ಬೇಟಿ ಪಡಾವೋ'' ಎಂದು ಆಗಾಗ ಘೋಷಣೆ ಕೂಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆಗೆ ಬದ್ಧರಾಗಿದ್ದರೆ ಪೋಕ್ಸೋ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಸ್ಥಾನದಿಂದ ಮತ್ತು ಅವರನ್ನು ರಕ್ಷಿಸುತ್ತಿರುವ ನಿಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಗುಡುಗಿದರು.
ನನ್ನ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸುವ ನೈತಿಕತೆ ಈ ಜನ್ಮದಲ್ಲಿ ನೀವು ಪಡೆದುಕೊಂಡಿಲ್ಲ. ಅದನ್ನು ಮುಂದಿನ ಜನ್ಮದಲ್ಲಿ ಗಳಿಸಿಕೊಳ್ಳುವ ಪ್ರಯತ್ನ ಮಾಡಬಹುದು ಅಷ್ಟೆ. ಸಿಬಿಐ ಮತ್ತು ಇಡಿ ಸಂಸ್ಥೆಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರೆ, ಡಿನೋಟಿಪೀಕೇಷನ್, ಅಕ್ರಮ ಗಣಿಗಾರಿಕೆ, ಮನಿ ಲಾಂಡ್ರಿಂಗ್ ಹೀಗೆ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳ ಕಿಂಗ್ ಪಿನ್ ಆಗಿರುವ ನಿಮ್ಮ ಜಾಗ ಎಲ್ಲಿರಬಹುದೆಂದು ಯೋಚಿಸಿ ಎಂದು ಎಚ್ಚರಿಸಿದರು.












Click it and Unblock the Notifications