1,777 ಎಕರೆ ಭೂಸ್ವಾಧೀನ ಇಲ್ಲ ಎಂದ ಸಿ.ಎಂ ಸಿದ್ದರಾಮಯ್ಯ: ಷರತ್ತುಗಳು ಅನ್ವಯ!
ಬೆಂಗಳೂರು: ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಸುತ್ತಲಿನ ಗ್ರಾಮಗಳಲ್ಲಿನ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೊನೆಗೂ ಕರ್ನಾಟಕ ಸರ್ಕಾರ ಕೈಬಿಟ್ಟಿದೆ. ಇದು ಸುದೀರ್ಘ ಹೋರಾಟವಾಗಿತ್ತು. ರೈತರ ಹೋರಾಟಕ್ಕೆ ಮಣಿದಿರುವ ಕರ್ನಾಟಕ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದಾಗಿ ಹೇಳಿದೆ. ಆದರೆ, ಇದರೊಂದಿಗೆ ಷರತ್ತುಗಳು ಅನ್ವಯಿಸಲಿವೆ ಎಂದು ಹೇಳಲಾಗಿದೆ.
1,777 ಎಕರೆ ಭೂಸ್ವಾಧೀನ ಮಾಡಿಕೊಳ್ಳುವುದಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ವಿರೋಧಿಸಿ ಬರೋಬ್ಬರಿ 1198 ದಿನಕ್ಕೂ ಹೆಚ್ಚು ಕಾಲ ಹೋರಾಟ ಮಾಡಲಾಗಿತ್ತು. 15 ದಿನಗಳ ಕಾಲ ಅವಕಾಶ ನೀಡಬೇಕು ಎಂದು ಸರ್ಕಾರ ಕೇಳಿತ್ತು. ಅದರಂತೆ ಇದು ರೈತರೊಂದಿಗೆ ಸಭೆ ನಡೆದಿದ್ದು. ಸಂಧಾನ ಸಭೆ ಫಲಪ್ರದವಾಗಿದೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಷರತ್ತನ್ನು ಸಹ ವಿಧಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭೂ ಸ್ವಾಧೀನ ಕೈ ಬಿಟ್ಟಿದ್ದೇವೆ. ಆದರೆ, ರೈತರು ಸ್ವಯಂ ಪ್ರೇರಿತರಾಗಿ ಭೂಮಿ ಕೊಡುವುದಕ್ಕೆ ಮುಂದೆ ಬಂದರೆ ಒಪ್ಪಂದ ಮೇಲೆ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಅದನ್ನು ಯಾರು ತಡೆಯೋಕೆ ಆಗುವುದಿಲ್ಲ. ನಮಗೆ ಕೈಗಾರಿಕೆಯೂ ಬೆಳೆಯಬೇಕು. ಹೀಗಾಗಿ ಆ ರೈತರಿಗೆ ಸೂಕ್ತವಾದ ಪರಿಹಾರವನ್ನು ಕೊಡುತ್ತೇವೆ. ಯಾವ ರೈತರು ಕೊಡೋಕೆ ಒಪ್ಪಲ್ಲ ಅವರ ಭೂಮಿಯನ್ನು ಕೈ ಬಿಡುತ್ತೇವೆ. ಆ ಅಧಿಸೂಚನೆಯನ್ನು ರದ್ದು ಮಾಡ್ತೀವಿ. ಈ ನಿರ್ಧಾರವನ್ನು ರೈತರು ಹಾಗೂ ಹೋರಾಟಗಾರರು ಸ್ವಾಗತಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅಧಿಸೂಚನೆಯನ್ನು ರದ್ದು ಪಡಿಸಲು ತೀರ್ಮಾನಿಸಲಾಗಿದೆ. ಆದರೆ ಇದು ದೇವನಹಳ್ಳಿ ಅಧಿಸೂಚನೆಗೆ ಮಾತ್ರ ಸೀಮಿತವಾಗಿ ರದ್ದು ಆಗಲಿದೆ. ಬೆಂಗಳೂರಿಗೆ ಹತ್ತಿರವಾಗಿರೋದರಿಂದ ಹಾಗೂ ಕೃಷಿ ಭೂಮಿ ಇರುವ ಕಾರಣಕ್ಕೆ ಅಧಿಸೂಚನೆ ರದ್ದು ಮಾಡುತ್ತಿದ್ದೇವೆ. ಎಲ್ಲದಕ್ಕೂ ಈ ತೀರ್ಮಾನ ಅನ್ವಯವಾಗುವುದಿಲ್ಲ ಎಂದಿದ್ದಾರೆ. ಇನ್ನು ಭೂ ಮಾಲೀಕರು ಸ್ವಯಂ ಪ್ರೇರಣೆ ಇಂದ ಮುಂದೆ ಬಂದಲ್ಲಿ. ಹೆಚ್ಚಿನ ಪರಿಹಾರ ನೀಡಲಾಗುವುದು. ಹೆಚ್ಚಿನ ಪರಿಹಾರಕ್ಕೆ ಒಪ್ಪದ ರೈತರ ಜಮೀನು ಹಾಗೇ ಬಿಡಲಾಗುವುದು.
ಕೈಗಾರಿಕಾ ಜಮೀನು ವಶಕ್ಕೆ ನೋಟಿಫಿಕೇಷನ್ ನೀಡಲಾಗಿತ್ತು. ರೈತರು ಮತ್ತು ಸಂಘಟನೆಗಳು ಹೋರಾಟ ಮಾಡಿದ್ದರು. ವ್ಯವಸಾಯವೇ ನಮ್ಮ ಮುಖ್ಯ ಕಸುಬು. ಅದೇ ನಮ್ಮ ಆಧಾರ. ಏರ್‌ಪೋರ್ಟ್ ಹಾಗೂ ಬೆಂಗಳೂರಿಗೆ ಹತ್ತಿರವಿದೆ. ಗ್ರೀನ್ ಬೆಲ್ಟ್ ಇರುವುದರಿಂದ ಸ್ವಾಧೀನ ಬೇಡ ಅಂತ ವಿರೋಧ ಮಾಡಿದ್ದರು.
ಸರ್ಕಾರ ಐದಾರು ಸಭೆ ಮಾಡಿತ್ತು. ರೈತರು ಹಾಗೂ ಹೋರಾಟಗಾರರ ಅಹವಾಲು ಕೇಳಿದ್ದೆವು. ಜನಪ್ರತಿನಿಧಿಗಳ ಅಭಿಪ್ರಾಯ ಕೂಡ ಕೇಳಿದ್ದೆವು. ರೈತರ ಹೋರಾಟದಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಗಳು ಭಾಗಿಯಾಗಿದ್ದರು. ಸರ್ಕಾರವು ಎಲ್ಲವನ್ನೂ ವಿಚಾರ ಮಾಡಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರೈತ ಮುಖಂಡರಾದ ಬಡಗಲಪುರ ನಾಗೇಂದ್ರ ಅವರು, ಇದೊಂದು ಸಂಘಟಿತ ಹೋರಾಟವಾಗಿತ್ತು. ಎಲ್ಲರು ಒಗ್ಗಟ್ಟಿನಿಂದ ಹೋರಾಟ ಮಾಡಿದ್ವಿ. ನಮ್ಮ ಐತಿಹಾಸಿಕ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಆ ಮೂಲಕ ಅಧಿಸೂಚನೆಯನ್ನು ರದ್ದು ಮಾಡಿದೆ. ಭೂಮಿಯನ್ನು ಬಲವಂತವಾಗಿ ಯಾರೇ ಕಸಿಯಲು ಬಂದರೂ ಅವರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.
ಭೂಮಿಯನ್ನು ಬಲಾತ್ಕಾರವಾಗಿ ಕಿತ್ತುಕೊಳ್ಳೋದಕ್ಕೆ ನಮ್ಮ ವಿರೋಧ ಇದೆ. ಜನ ಚಳವಳಿ ಪರಂಪರೆಯಾಗಿದೆ. ಸಾವಿರಾರು ಮನಸ್ಸುಗಳು ಒಟ್ಟಾಗಿವೆ. ಭೂಮಿ ಉಳಿಸಿಕೊಳ್ಳಲು ಮಹಿಳೆಯರು ಮಾಡಿದ ಹೋರಾಟ. ಎಲ್ಲಾ ವಿಚಾರದಲ್ಲೂ ಇಷ್ಟೇ ಹೋರಾಟ ನಡೆಯಲಿದೆ ಎಂದು ಹೇಳಿದ್ದಾರೆ.












Click it and Unblock the Notifications