ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ
CM Siddaramaiah: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬೆಳವಣಿಗೆಗಳು ಇಂದು ಮಹತ್ವದ ತಿರುವು ಪಡೆದುಕೊಂಡಿವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ 28) ಬೆಳಗ್ಗೆ ತಮ್ಮ ಕಾವೇರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಚಿವರ ಮಹತ್ವದ ಬ್ರೇಕ್ ಫಾಸ್ಟ್ ಸಭೆಯನ್ನು ಇಟ್ಟುಕೊಂಡಿದ್ದರು. ಈ ವೇಳೆ ತಾವೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಂಚಲನ ಸೃಷ್ಟಿಸಿದ ಸಿದ್ದರಾಮಯ್ಯ ಈ ದಿಢೀರ್ ನಿರ್ಧಾರ
ಸಿದ್ದರಾಮಯ್ಯ ಅವರ ಈ ದಿಢೀರ್ ಬೆಳವಣಿಗೆಯು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕಾವೇರಿ ನಿವಾಸದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.
ತಮ್ಮ ನಿರ್ಧಾರ ಘೋಷಿಸಿದ ಸಿದ್ದರಾಮಯ್ಯ
ಸಭೆಯಲ್ಲಿ ಸಿಎಂ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, 'ನಾನು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ,' ಎಂದು ಸಚಿವರಿಗೆ ತಿಳಿಸಿದರು. ಸಿಎಂ ಅವರ ಈ ದಿಢೀರ್ ನಿರ್ಧಾರದಿಂದ ಸಭೆಯಲ್ಲಿದ್ದ ಹಲವು ಸಚಿವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳ ಬಳಗ ಅಸಮಾಧನ ಹೊರಹಾಕಿದ್ದಾರೆ. 'ಸಿದ್ದರಾಮಯ್ಯ ಅವರು ದಿಢೀರ್ ಈ ನಿರ್ಧಾರ ತೆಗೆದುಕೊಂಡಿರುವುದು ಸರಿಲ್ಲ,' ಎಂದು ಅಭಿಮಾನಿಗಳು ಹೇಳಿದ್ದಾರೆ.
ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನವೇ ಮುಂದಿನ ಕಾನೂನು ಹಾಗೂ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಸುಮಾರು ಇಂದು ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಲಿರುವ ಅವರು ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಸಲ್ಲಿಸಲಿದ್ದಾರೆ ಎಂದು ಎಂದು ಮೂಲಗಳಿಂದ ತಿಳಿದುಬಂದಿದೆ.
ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ
ಮುಂದುವರೆದು ಈ ಸಭೆಯಲ್ಲಿ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇಷ್ಟು ದಿನಗಳ ಕಾಲ ಸರ್ಕಾರ ಮುನ್ನಡೆಸಲು ಮತ್ತು ಜನಪದ ಕಾರ್ಯಕ್ರಮಗಳನ್ನು ಜಾರಿಗೆ ತರಲು ತಮಗೆ ಬೆಂಬಲವಾಗಿ ನಿಂತ ಎಲ್ಲಾ ಸಚಿವರಿಗೂ ಹಾಗೂ ಶಾಸಕರಿಗೂ ಆತ್ಮೀಯವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ವೇಳೆ ಮುಂಬರುವ ದಿನಗಳಲ್ಲಿ ಪಕ್ಷ ಮತ್ತು ನಾಯಕತ್ವ ವಹಿಸಲಿರುವ ಮುಂದಿನ ಹೆಜ್ಜೆಗಳ ಕುರಿತು ಸಭೆಯಲ್ಲಿ ಕೆಲವು ಪ್ರಾಥಮಿಕ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಯವರ ರಾಜೀನಾಮೆ ಪ್ರಕ್ರಿಯೆಯು ಇದೀಗ ರಾಜ್ಯಪಾಲರ ಬೆಂಗಳೂರು ಆಗಮನದ ಮೇಲೆ ನಿಂತಿದೆ. ರಾಜ್ಯಪಾಲರು ಪ್ರಸ್ತುತ ಇಂದೋರ್‌ನಲ್ಲಿದ್ದು, ಅವರು ಮರಳಿದ ನಂತರವಷ್ಟೇ ಮುಂದಿನ ಅಧಿಕೃತ ಕ್ರಮಗಳು ಜರುಗಲಿವೆ. ರಾಜ್ಯಪಾಲರು ನಿನ್ನೆ ತಡರಾತ್ರಿ ಮುಂಬೈ ಮಾರ್ಗವಾಗಿ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದ್ದಾರೆ.
ಮೂಲಗಳ ಪ್ರಕಾರ ರಾಜ್ಯಪಾಲರ ಪತ್ನಿಯವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಈ ತುರ್ತು ಪ್ರಯಾಣ ಕೈಗೊಳ್ಳಬೇಕಾಯಿತು. ಇನ್ನು ರಾಜ್ಯದ ಮುಖ್ಯಮಂತ್ರಿಗಳ ನಿರ್ಧಾರ ಜಾರಿಗೆ ಬರಲು ಮತ್ತು ರಾಜೀನಾಮೆ ಪತ್ರ ಸಲ್ಲಿಕೆಯಾಗಲು ರಾಜ್ಯಪಾಲರು ರಾಜಭವನಕ್ಕೆ ಮರಳುವವರೆಗೆ ಕಾಯುವುದು ಅನಿವಾರ್ಯವಾಗಿದೆ. ರಾಜಕೀಯ ಬಿಕ್ಕಟ್ಟಿನ ನಡುವೆಯೇ ವೈಯಕ್ತಿಕ ಕಾರಣಗಳಿಗಾಗಿ ರಾಜ್ಯಪಾಲರು ಹೊರರಾಜ್ಯಕ್ಕೆ ತೆರಳಿರುವುದು ಪ್ರಸ್ತುತ ರಾಜಕೀಯ ಪ್ರಕ್ರಿಯೆಗಳಿಗೆ ಅಲ್ಪ ವಿರಾಮ ನೀಡಿದಂತಾಗಿದೆ. ಅವರು ಹಿಂತಿರುಗಿದ ಕೂಡಲೇ ರಾಜ್ಯ ರಾಜಕಾರಣದ ಮುಂದಿನ ಚಿತ್ರಣ ಸ್ಪಷ್ಟವಾಗಲಿದ ಎನ್ನಲಾಗುತ್ತಿದೆ
ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಘೋಷಣೆ ಮಾಡುತ್ತಿದ್ದಂತೆ ಇದೀಗ ರಾಜ್ಯದ ಮುಂದಿನ ಸಿಎಂ ಯಾರು ಹಾಗೂ ಹೈಕಮಾಂಡ್‌ನ ಮುಂದಿನ ನಡೆ ಏನು ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಎದ್ದಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿ ಡಿ.ಕೆ.ಶಿವಕುಮಾರ್ ಹೆಸರು ಜೋರಾಗಿ ಕೇಳಿಬರುತ್ತಿದೆ.
ಜಿ.ಪರಮೇಶ್ವರ್ ಹೇಳಿದ್ದೇನು?
ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ದಟ್ಟವಾಗುತ್ತಿರುವ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಪ್ರಮುಖ ನಾಯಕರೊಂದಿಗೆ ಬ್ರೇಕ್‌ಫಾಸ್ಟ್ ಸಭೆ ಕರೆದಿದ್ದರು. ಅವರು ಶೀಘ್ರದಲ್ಲೇ ರಾಜೀನಾಮೆ ನೀಡುವ ಸಾಧ್ಯತೆ ಇರುವುದರಿಂದ ಈವರೆಗೆ ತಮಗೆ ಸಹಕಾರ ನೀಡಿದ ಎಲ್ಲಾ ನಾಯಕರಿಗೆ ಕೃತಜ್ಞತೆ ಸಲ್ಲಿಸಲು ಈ ಸಭೆಯನ್ನು ಆಯೋಜಿಸಿದ್ದರು," ಎಂದು ಎಂದು ಪರಮೇಶ್ವರ್ ಅವರು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್‌ಗೆ ಸಿಎಂ ಪಟ್ಟ ಸಾಧ್ಯತೆ
ಮೂಲಗಳ ಪ್ರಕಾರ ಈ ಸಭೆಯ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಸಾಧ್ಯತೆಯಿದೆ. ಅವರ ನಂತರ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಮನಾರ್ಹ ವಿಷಯವೆಂದರೆ ಸಂಭವನೀಯ ರಾಜೀನಾಮೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಡಿ.ಕೆ.ಶಿವಕುಮಾರ್ ಬೆಂಬಲಿಗರಿಂದ ಸಿಹಿ ಹಂಚಿಕೆ
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮುನ್ಸೂಚನೆ ಸಿಗುತ್ತಿದ್ದಂತೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಸಂಭ್ರಮದಲ್ಲಿ ತೊಡಗಿದ್ದಾರೆ. ಡಿ.ಕೆ.ಶಿ ಅವರ ನಿವಾಸದ ಮುಂದೆ ಜಮಾಯಿಸಿದ ಬೆಂಬಲಿಗರು ಅವರ ಪರ ಘೋಷಣೆಗಳನ್ನು ಕೂಗುತ್ತಾ ಪರಸ್ಪರ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ರಾಜ್ಯಪಾಲರ ಭೇಟಿಗೆ ಸಮಯ ನಿಗದಿಯಾಗಿಲ್ಲ
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲು ಇನ್ನೂ ಸಮಯ ಕೇಳಿಲ್ಲ. ಪ್ರಸ್ತುತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಸ್ವಗ್ರಾಮವಾದ ಮಧ್ಯಪ್ರದೇಶದ ಇಂದೋರ್‌ನಲ್ಲಿದ್ದಾರೆ ಎಂದು ರಾಜಭವನದ ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಈ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications