'ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊರಟ ಸಿದ್ದರಾಮಯ್ಯ'
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅಗತ್ಯ ಇಲ್ಲ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಭಾರಿ ವಿರೋಧ ಎದುರಿಸುವಂತಾಗಿದೆ. ಈ ಸುದ್ದಿಯನ್ನು ಪಾಕಿಸ್ತಾನ ಮಾಧ್ಯಮಗಳು ಕೂಡ ಹೈಲೈಟ್ ಮಾಡಿವೆ. ಇಡೀ ದೇಶ ಪಾಕಿಸ್ತಾನದ ವಿರುದ್ಧ ತೊಡೆ ತಟ್ಟಿದ್ದರೆ ಸಿದ್ದರಾಮಯ್ಯ ಅವರ ಹೇಳಿಕೆಯು ವಿವಾದ ಸೃಷ್ಟಿಸಿದೆ. ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಡೀ ದೇಶವೇ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಮಮ್ಮಲ ಮರುಗುತ್ತಿದೆ. ಪಾಕಿಸ್ತಾನದ ಚಿತಾವಣೆ, ಪಿತೂರಿಯ ಮುಖವಾಡಗಳೆನಿಸಿದ ರಣಹೇಡಿ ಉಗ್ರರ ಪೈಶಾಚಿಕ ವರ್ತನೆಯಿಂದ ಶತಕೋಟಿ ಭಾರತೀಯರು ಆಕ್ರೋಶಭರಿತರಾಗಿದ್ದಾರೆ.

ಈ ಸಮಯದಲ್ಲಿ ಭಾರತದ ಏಕತೆಗೆ ದನಿಗೂಡಿಸಬೇಕಾದ ಕಾಂಗ್ರೆಸ್‌ನವರು 'ಮೊಸರಲ್ಲಿ ಕಲ್ಲು ಹುಡುಕುವ ಕೀಳು ರಾಜಕೀಯ ಅಭಿರುಚಿಯ ಹೇಳಿಕೆಗಳನ್ನು ನೀಡುತ್ತಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಬ್ಬರು ಭದ್ರತಾ ವೈಫಲ್ಯವೆಂದು ಟೀಕಿಸುವುದು, ಮತ್ತೊಬ್ಬರು ಆರ್ಟಿಕಲ್ 370 ರದ್ದುಪಡಿಸಿದ ಪರಿಣಾಮ ಎಂದು ಹೇಳುವುದು, ರಾಜ್ಯದ ಸಚಿವರೊಬ್ಬರು ಬಿಜೆಪಿ ಮುಸ್ಲಿಮರನ್ನು ದ್ವೇಷಿಸಿದ್ದೇ ಘಟನೆಗೆ ಕಾರಣ ಎಂಬ ಅರ್ಥದಲ್ಲಿ ದ್ವೇಷ ಬಿತ್ತುವ ಬೇಜವಾಬ್ದಾರಿತನದ ಬಾಲಿಶ ಹೇಳಿಕೆ ನೀಡುವುದು ಮುಂದುವರೆದಿದೆ. ಇದು ಭಾರತದ ಏಕತೆ ಹಾಗೂ ಸುರಕ್ಷತೆಗೆ ಭಂಗ ತರುವ ನಡವಳಿಕೆಯಲ್ಲದೇ ಬೇರೇನೂ ಅಲ್ಲ ಎಂದು ಟೀಕಿಸಿದ್ದಾರೆ.

ಉಗ್ರರಿಗೆ ಆಶ್ರಯ ತಾಣವಾಗಿರುವ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಸುರಕ್ಷತೆಗಾಗಿ ದಿಟ್ಟ ಹೆಜ್ಜೆ ಇಡಲು ಹೊರಟಿರುವ ಕ್ರಮವನ್ನು'ತಾವು ಯುದ್ಧದ ಪರ ಅಲ್ಲ' ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುವ ಮೂಲಕ ಪಲಾಯನ ವಾದಿ ನಿಲುವು ಪ್ರಕಟಿಸಿ ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊರಟಿದ್ದಾರೆ ಎಂದು ದೂರಿದ್ದಾರೆ.
ಭಾರತ ಎಂದೂ ಯುದ್ಧ ದಾಹವನ್ನು ಪ್ರದರ್ಶಿಸಿಲ್ಲ, ಇತಿಹಾಸವನ್ನು ಅವಲೋಕಿಸಿದಾಗಲೆಲ್ಲ ಪಾಕಿಸ್ತಾನ ಕಾಲು ಕೆರೆದು ಭಾರತವನ್ನು ಕೆಣಕಿದ ಪರಿಣಾಮವೇ ಯುದ್ಧ ನಡೆದಿದೆ. ಅದು ಸ್ವಾತಂತ್ರ್ಯಾ ನಂತರದ ಪಾಕಿಸ್ತಾನ ಯುದ್ಧಗಳಿಂದ ಹಿಡಿದು ಎರಡೂ ರಾಷ್ಟ್ರಗಳ ನಡುವೆ ಸ್ನೇಹದ ಬೆಸುಗೆ ಬೆಸೆಯಲು ಹೊರಟ ಅಜಾತ ಶತ್ರು ನೇತಾರನೆಂದೇ ಬಣ್ಣಿಸಲ್ಪಟ್ಟ ಅಂದಿನ ಪ್ರಧಾನಿ ವಾಜಪೇಯಿ ಅವರ ನಂಬಿಕೆಗೆ ದ್ರೋಹವೆಸಗಿ ಕಾರ್ಗಿಲ್ ಯುದ್ಧ ನಡೆದ ಘಟನೆಯಾಗಬಹುದು. ಉದ್ದಕ್ಕೂ ಪಾಕಿಸ್ತಾನ ಭಾರತವನ್ನು ಕೆಣಕುತ್ತಾ ಬಂದಿದೆ ಆಕ್ರಮಣ ಮಾಡಲು ಬಂದು ಪೆಟ್ಟನ್ನೂ ತಿಂದು ಹಿಮ್ಮೆಟ್ಟಿದೆ, ಸೋಲಿನ ರುಚಿಯನ್ನೂ ಅನುಭವಿಸಿದೆ ಎಂದು ನೆನಪಿಸಿದ್ದಾರೆ.
ಈ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದ ಸಮಯದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶ ಪಡೆಸಿಕೊಳ್ಳುವ ಅವಕಾಶವಿತ್ತು. ಆದರೆ, ಆ ನಿಟ್ಟಿನಲ್ಲಿ ಇಂದಿರಾ ಗಾಂಧಿಯವರು ಬದ್ಧತೆ-ದಿಟ್ಟತೆ ತೋರದಿರುವುದು ಇತಿಹಾಸದ ಪುಟಗಳಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿರುವುದನ್ನು ಮುಖ್ಯಮಂತ್ರಿಗಳು ಒಮ್ಮೆ ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ಪ್ರಕಾರ ಎಷ್ಟೇ ನಮಗೆ ಉಪಟಳ ನೀಡಿದರೂ, ನಮ್ಮ ಜನರ ಮಾರಣಹೋಮ ಆದರೂ, ನಮ್ಮ ಸೈನಿಕರು ಸಾಲು ಸಾಲಾಗಿ ಪ್ರಾಣ ತೆತ್ತರೂ ಭಾರತ ಯುದ್ಧ ಮಾಡದೇ ಶಾಂತಿ ಮಂತ್ರ ಪಠಿಸಬೇಕೇ? ಯುದ್ಧ ಭಾರತದ ಆದ್ಯತೆಯಲ್ಲ ಎಂಬುದು ಎಷ್ಟು ಮುಖ್ಯವೋ ರಾಷ್ಟ್ರದ ಸುರಕ್ಷತೆ, ಭಾರತೀಯರ ಅಮೂಲ್ಯ ಜೀವಗಳ ರಕ್ಷಣೆ ಅದಕ್ಕಿಂತಲೂ ಮುಖ್ಯ ಎಂಬುದು ಕೇಂದ್ರ ಸರ್ಕಾರದ ಪರಮ ಧ್ಯೇಯವಾಗಿದೆ, ಇದಕ್ಕೆ ಸಮಗ್ರ ಭಾರತೀಯರೆಲ್ಲರ ಒಕ್ಕೊರಲಿನ ಬೆಂಬಲವೂ ದೇಶದಾದ್ಯಂತ ಮೊಳಗುತ್ತಿದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಪ್ರಾಣ ತೆತ್ತ ಅಮಾಯಕ ಜೀವಗಳ ಆತ್ಮಕ್ಕೆ ಶಾಂತಿ ನೀಡಲು, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು, ಮುಂದೆಂದೂ ಭಾರತ ಹಾಗೂ ಭಾರತೀಯರ ಮೇಲೆ ಚಿತಾವಣೆ, ಆಕ್ರಮಣಗಳು ನಡೆಯದಿರಲು ಭಾರತ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸಬೇಕಾಗಿರುವುದು ಅಪ್ಪಟ ದೇಶಪ್ರೇಮಿ ಮುಖ್ಯಮಂತ್ರಿಗಳ ಆದ್ಯತೆಯಾಗಬೇಕಾಗಿರುವುದು ಕರುನಾಡಿನ ಜನರ ನಿರೀಕ್ಷೆ ಹಾಗೂ ಒತ್ತಾಯವಾಗಿದೆ. ಇದನ್ನು ಮಾನ್ಯ ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ದೇಶದ ಸುರಕ್ಷತೆಯ ವಿಷಯದಲ್ಲಿ ರಾಜಕೀಯ ಪ್ರೇರಿತ ಟೊಳ್ಳು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದಕ್ಕೂ ಯೋಗ್ಯತೆ ಬೇಕು!
ಪಾಕಿಸ್ತಾನದ ಕುರಿತ ನಿಮ್ಮ ಸಹಾನುಭೂತಿ ಹೇಳಿಕೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧದ ನಿಮ್ಮ ದ್ವೇಷದ ಮಾತುಗಳು ಜನರ ಮನದಲ್ಲಿ ನೀವು ರಾಷ್ಟ್ರ ನಿಷ್ಠರೋ? ಪಾಕಿ ಮನಸ್ಥಿತಿಯ ವಕ್ತಾರರೋ ಎಂಬ ಅನುಮಾನ ಮೂಡಿಸುತ್ತಿದೆ. ಸದ್ಯ ಪಾಕ್‌ನಲ್ಲಿ ನಿಮ್ಮ ಹೇಳಿಕೆ ಆಧರಿಸಿ ಅಲ್ಲಿನ ಸುದ್ದಿವಾಹಿನಿಗಳು ನಿಮ್ಮನ್ನು ವೈಭವೀಕರಿಸುತ್ತಿರುವ ಪರಿ ನೋಡಿದರೆ ನಿಮ್ಮ ಅಜೆಂಡಾ ಏನು ಅನ್ನುವುದು ಜನರಿಗೆ ಅರ್ಥವಾಗುತ್ತಿದೆ ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಸಮರ್ಪಣೆಯ ಸಂಕಲ್ಪ ಹೊತ್ತ ಲಕ್ಷಾಂತರ ದೇಶಭಕ್ತ ಕಾರ್ಯಕರ್ತರ ಪಡೆ ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಪೂರೈಸಿ, ವಿಶ್ವಮಾನ್ಯತೆ ಪಡೆದ ಭಾರತದ ಹೆಮ್ಮೆಯ ಸಂಘಟನೆ. ಅಂತಹ ಸಂಘದ ಕುರಿತು ಮಾತನಾಡುವುದಕ್ಕೂ ಯೋಗ್ಯತೆ ಬೇಕು. ಆ ಯೋಗ್ಯತೆ ಖಂಡಿತವಾಗಿಯೂ ನಿಮಗಿಲ್ಲ. ಏಕೆಂದರೆ ನೀವು ಯಾವ ಸಂಘಟನೆಯ ಹಿನ್ನೆಲೆಯಿಂದ ಸಾರ್ವಜನಿಕ ಜೀವನ ಪ್ರವೇಶಿಸಿದವರೇ ಅಲ್ಲ. ರಾಜಕಾರಣಕ್ಕೆ ಬರುವ ಮೊದಲು ನೀವು ಯಾವ ಹೋರಾಟಗಳಲ್ಲೂ ಭಾಗವಹಿಸಿಲ್ಲ, ಇದ್ದರೆ ದಾಖಲೆ ಬಿಡುಗಡೆ ಮಾಡಿ. ಹೋರಾಟದ ಗಂಧ-ಗಾಳಿ ಅರಿಯದ ನಿಮಗೆ ಇನ್ನೊಬ್ಬರ ಹೋರಾಟದ ಕುರಿತು ಪ್ರಶ್ನಿಸುವ ಯಾವ ನೈತಿಕತೆಯಿದೆ? ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾತಂತ್ರ್ಯದ ಪರಿಕಲ್ಪನೆಯನ್ನೂ ಒಳಗೊಂಡಂತೆ ನೈಜ ಭಾರತೀಯತೆಯನ್ನು ಉಳಿಸುವುದಕ್ಕಾಗಿ ತ್ಯಾಗ, ಬಲಿದಾನಗೈದ ಇತಿಹಾಸದ ಹಿನ್ನೆಲೆ ಇರುವ ಮಹಾನ್ ಸಂಘಟನೆ, ರಾಷ್ಟ್ರಪ್ರೇಮಕ್ಕಾಗಿ ಜನ್ಮತಾಳಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡುವುದಕ್ಕೆ ಮೊದಲು ಇತಿಹಾಸ ತಿಳಿದುಕೊಳ್ಳಬೇಕು. ಎಂದೂ ಹೋರಾಟ, ಸಂಘಟನೆ, ಪಕ್ಷ ಕಟ್ಟಿದ ಹಿನ್ನಲೆ ಇರದ ನಿಮಗೆ ಇನ್ನೊಬ್ಬರು ಕಟ್ಟಿದ ಕೋಟೆ ಮೆಟ್ಟಿ ಅಧಿಕಾರ ಸವಿದ ಅನುಭವವೊಂದೇ ನಿಮ್ಮ ಸಾಧನೆಯಾಗಿದೆ ಎಂಬುದನ್ನು ಮೂಲ ಕಾಂಗ್ರೆಸ್ಸಿಗರು ಆಗಾಗ ನೋವಿನಿಂದ ಹೇಳಿಕೊಳ್ಳುತ್ತಿರುತ್ತಾರೆ.
ದೇಶದ ಜನತೆ ಉಗ್ರರ ಅಟ್ಟಹಾಸದ ವಿರುದ್ಧ ಆಕ್ರೋಶಿತರಾಗಿದ್ದಾರೆ. ಇಂತಹ ಸಮಯದಲ್ಲಿ ನಿಮ್ಮ ಹೇಳಿಕೆಗಳು ಬೆಂಕಿಗೆ ತುಪ್ಪ ಸುರಿಯಬಾರದು. ಸ್ಥಾನದ ಜವಾಬ್ದಾರಿಯಲ್ಲಿ ಜನರ ಭಾವನೆಗೆ ಸ್ಪಂದಿಸುವ ಮಾತನಾಡಬೇಕೇ ಹೊರತು ಸ್ವಪ್ರತಿಷ್ಠೆ ಮೆರೆಯಬಾರದು ಎಂಬುದು ಈ ನಾಡಿನ ಜನರ ಅಭಿಮತ ಎಂದು ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications