Siddaramaiah: ಜಮ್ಮುವಿನಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಬೆಳಗಾವಿ, ಡಿಸೆಂಬರ್ 26: ಜಮ್ಮು ಕಾಶ್ಮೀರದಲ್ಲಿ ಅಪಘಾತಕ್ಕೆ ಈಡಾಗಿ ಹುತಾತ್ಮರಾದ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ಗೌರವ ಸಲ್ಲಿಸಿದರು. ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ಗೌರವ ಸಲ್ಲಿಸಿದರು.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ. ನಾಲ್ವರು ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ ಎಂದರು. ಸರಕಾರದಿಂದ ನಿಯಮಾನುಸಾರ ಹುತಾತ್ಮರ ಕುಟುಂಬಕ್ಕೆ ಸಲ್ಲಬೇಕಾದ ಸಕಲ ನೆರವನ್ನೂ ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ 'ಅಸ್ಮಿತೆ' ವ್ಯಾಪಾರಮೇಳ-2024
ದುಡಿಯುವ ವರ್ಗಗಳ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಯ ಮತ್ತೊಂದು ಕುರುಹಾಗಿ ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟವನ್ನು ಇಂದು (ಡಿ 26) ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ.
ಶ್ರಮಿಕ ವರ್ಗದ ಮಹಿಳಾ ಶಕ್ತಿಯನ್ನು ಆರ್ಥಿಕವಾಗಿ ಮೇಲೆತ್ತಬೇಕು ಎನ್ನುವ ಮುಖ್ಯ ಉದ್ದೇಶದೊಂದಿಗೆ ಹಲವಾರು ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳು ಹಾಗೂ ಖಾದಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಈ ಮೇಳವನ್ನು ಡಿಸೆಂಬರ್ 26 ರಿಂದ ಜನವರಿ 4 ರವರೆಗೆ ಆಯೋಜಿಸಲಾಗಿದೆ.
ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳು ಮಾರಾಟ ಮಾಡುತ್ತಿರುವುದರಿಂದ ಹೆಚ್ಚು ಹೆಚ್ಚು ಸಾರ್ವಜನಿಕರು ಈ ಮೇಳದ ಸದುಪಯೋಗವನ್ನು ಪಡೆದುಕೊಂಡು ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚಿನ ವಹಿವಾಟಿನೊಂದಿಗೆ ಅವರ ಆರ್ಥಿಕ ಸಬಲತೆಗೆ ಕೈ ಜೋಡಿಸಲಿದ್ದಾರೆ ಎಂಬ ನಿರೀಕ್ಷೆ ಹೊಂದಲಾಗಿದೆ. ಮಹಿಳೆಯರ ಉತ್ಪನ್ನಗಳ ಮಾರಾಟಕ್ಕೆ ಹಳ್ಳಿ ಸಂತೆ, ತಾಲ್ಲೂಕು ಮಟ್ಟದಲ್ಲಿ ಮಾಸಿಕ ಸಂತೆ, ಜಿಲ್ಲಾ ವಸ್ತು ಪ್ರದರ್ಶನ ಮಾರಾಟ ಮೇಳ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವ ಮೇಳಗಳನ್ನು ಆಯೋಜಿಸುವ ಮೂಲಕ ಮಾರುಕಟ್ಟೆ ಒದಗಿಸಲಾಗುತ್ತಿದೆ.












Click it and Unblock the Notifications