ದೆಹಲಿಯಲ್ಲಿ ಖರ್ಗೆ-ಸಿದ್ದರಾಮಯ್ಯ ಮಹತ್ವದ ಚರ್ಚೆ, ಏನೆಲ್ಲ ತೀರ್ಮಾನ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀಡುಬಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ದಲಿತ ಸಚಿವ ಕೆಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಯತ್ನದ ವಿಚಾರಗಳು ಕಾವು ಪಡೆದುಕೊಂಡಿರುವ ಹೊತ್ತಲ್ಲೇ ಇವರ ಭೇಟಿಯು ಕುತೂಹಲ ಮೂಡಿಸಿದೆ.
ಹನಿಟ್ರ್ಯಾಪ್ ವಿಚಾರವು ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ಮುಜುಗರ ತಂದಿದೆ. ಕಾಂಗ್ರೆಸ್ ಪಕ್ಷದ ಸಚಿವರಾದ ಕೆಎನ್ ರಾಜಣ್ಣ ಅವರೇ ಖುದ್ದಾಗಿ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು ಸರಿಯಲ್ಲ ಎಂದು ಹೈಕಮಾಂಡ್ ನಾಯಕರು ಕೆಂಡವಾಗಿದ್ದಾರೆ. ಇದು ಒಂದು ರೀತಿಯ ತಮ್ಮ ಹಳ್ಳವನ್ನ ತಾವೇ ತೋಡಿಕೊಂಡು, ವಿಪಕ್ಷಗಳ ಕೈಗೆ ಅಸ್ತ್ರ ನೀಡಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿರುವುದರಿಂದ ಇದರ ಬಗ್ಗೆ ಹೈಕಮಾಂಡ್ ನಾಯಕರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಪಡೆಯುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿರುವ ಸಿದ್ದರಾಮಯ್ಯ ಅವರು ಮುಖ್ಯವಾಗಿ ಈ ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಾಗಿಯೂ ಗಂಭೀರ ಚರ್ಚೆ ನಡೆದಿದ್ದು, ಮುಂದೆ ಈ ಸ್ಥಾನವನ್ನು ಯಾರಿಗೆ ನೀಡಬೇಕು? ಯಾವ ನಾಯಕ ಈ ಸ್ಥಾನಕ್ಕೆ ಸೂಕ್ತ ಎಂಬ ಬಗ್ಗೆಯೂ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಿದ್ದರಾಮಯ್ಯ ಅವರು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬಣದ ನಾಯಕ ಹೆಸರನ್ನೇ ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿರುವ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯರಕ್ಷ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಬಗ್ಗೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ಯಾವುದೇ ಬದಲಾವಣೆ ಬೇಡ, ಈಗಿರುವಂತೆಯೇ ಮುಂದುವರಿಸಿಕೊಂಡು ಹೋಗಲು ಹೈಕಮಾಂಡ್ ಸಲಹೆ ನೀಡಿದೆ ಎಂದು ಮೂಲಗಳು ಹೇಳಿವೆ.

ಸದನದಲ್ಲೇ ರಾಜಣ್ಣ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿರುವ ವಿಚಾರಕ್ಕೆ ರಾಹುಲ್ ಗಾಂಧಿಯವರು ಕೋಪಗೊಂಡಿದ್ದಾರೆ ಎನ್ನಲಾಗಿದೆ. ಪಕ್ಷದ ಆಂತರಿಕ ವಿಚಾರವನ್ನು ನಾಲ್ಕು ಗೋಡೆಗಳ ಮಧ್ಯೆ ಇತ್ಯರ್ಥಪಡಿಸಬೇಕಿತ್ತು. ಆದರೆ ಸದನದಲ್ಲೇ ಪಕ್ಷಕ್ಕೆ ಮುಜುಗರ ಆಗುವ ವಿಚಾರವನ್ನು ಪ್ರಸ್ತಾಪಿಸಲಾಗಿದೆ ಎಂದು ರಾಹುಲ್ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಸೂಕ್ಷ್ಮವಾಗಿ ನಿಭಾಯಿಸುವ ಭರವಸೆಯೂ ನೀಡಿದ್ದಾರಂತೆ.












Click it and Unblock the Notifications