ಕರ್ನಾಟಕದಲ್ಲಿ ಮತ್ತೆ ಎರಡು ಹೊಸ ಜಿಲ್ಲೆಗಳು ಉದಯ? ಆ ಜಿಲ್ಲೆಗಳು ಯಾವುವು?
ಬೆಂಗಳೂರು, ಫೆಬ್ರವರಿ 14: ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸುವ ನಿರೀಕ್ಷೆ ಇದೆ. ಬೆಳಗಾವಿ ಭಾಗದ ವಿವಿಧ ಸಂಘಟನೆಗಳು ಮತ್ತು ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸುವ ಸಾಧ್ಯತೆಗಳು ಕೇಳಿ ಬರುತ್ತಿವೆ.
ಹೌದು, ಫೆಬ್ರವರಿ 16 ರಂದು(ಶುಕ್ರವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದು, ಈ ವೇಳೆ ಚಿಕ್ಕೋಡಿ ಮತ್ತು ಗೋಕಾಕವನ್ನು ಹೊಸ ಜಿಲ್ಲೆಗಳೆಂದು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಜೆಟ್ ಮಂಡನೆ ವೇಳೆ ಚಿಕ್ಕೋಡಿ ಮತ್ತು ಗೋಕಾಕವನ್ನು ಹೊಸ ಜಿಲ್ಲೆಗಳೆಂದು ಘೋಷಿಸಬಹುದು. ಬಜೆಟ್ ಮಂಡನೆಗೂ ಮುನ್ನ ಈ ಬಗ್ಗೆ ಎಲ್ಲ ವಿವರಗಳನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ.
ಚಿಕ್ಕೋಡಿ ಹಾಗೂ ಗೋಕಾಕ ತಾಲೂಕನ್ನು ಹೊಸ ಜಿಲ್ಲೆಗಳನ್ನಾಗಿ ಮಾಡಬೇಕೆಂದು ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಮುಖಂಡರು ಒತ್ತಾಯಿಸುತ್ತಲೇ ಬಂದಿದ್ದು, ಆಡಳಿತಾತ್ಮಕ ಉದ್ದೇಶದಿಂದ ಬೈಲಹೊಂಗಲ ಮತ್ತು ಅಥಣಿಯ ಎರಡು ತಾಲೂಕುಗಳನ್ನು ಹೊಸ ಜಿಲ್ಲೆಗಳನ್ನಾಗಿ ಘೋಷಿಸುವಂತೆ ಮುಖಂಡರು ಒತ್ತಾಯಿಸಿದ್ದಾರೆ.
1997 ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಚಿಕ್ಕೋಡಿ ಮತ್ತು ಗೋಕಾಕವನ್ನು ಹೊಸ ಜಿಲ್ಲೆಗಳಾಗಿ ಘೋಷಿಸಲು ಬಹುತೇಕ ಅಧಿಸೂಚನೆಯನ್ನು ಹೊರಡಿಸಿದರು, ಆದರೆ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಮರಾಠಿ ಪ್ರಾಬಲ್ಯವನ್ನು ತಡೆಯಲು ವಿವಿಧ ಕನ್ನಡ ಸಂಘಟನೆಗಳ ಒತ್ತಡದಿಂದಾಗಿ ಮಾಡಲಿಲ್ಲ.
ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಸರ್ಕಾರ ಆಡಳಿತ ಅನುಕೂಲಕ್ಕಾಗಿ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು. ಚಿಕ್ಕೋಡಿ ಮತ್ತು ಗೋಕಾಕ್ ತಾಲೂಕುಗಳನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಅಗತ್ಯವಿರುವ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಚಿಕ್ಕೋಡಿ, ಗೋಕಾಕ್ ಭಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರು ಕೂಡ ಎರಡು ತಾಲೂಕುಗಳನ್ನು ಹೊಸ ಜಿಲ್ಲೆಗಳನ್ನಾಗಿ ಘೋಷಿಸಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.
ಕುಂದ ನಗರ ಬೆಳಗಾವಿ ಜಿಲ್ಲೆಯೂ ಬರೋಬ್ಬರಿ 15 ತಾಲೂಕುಗಳು, 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇನ್ನೂ ದಶಕಗಳಿಂದಲೂ ಚಿಕ್ಕೋಡಿ, ಗೋಕಾಕ್, ಬೈಲಹೊಂಗಲ ಮತ್ತು ಅಥಣಿ ಜಿಲ್ಲೆಗಳನ್ನು ರಚಿಸುವಂತೆ ನಿರಂತರ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆ ಸ್ಥಳೀಯ ಜಿಲ್ಲಾ ಹೋರಾಟ ಸಮಿತಿ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿದ್ದು, ನಿಗದಿತ ಸಮಯದಲ್ಲಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರ ಆದೇಶಿಸಲಾಗಿದೆ.












Click it and Unblock the Notifications