ಆತ್ಮಸಾಕ್ಷಿಯ ನ್ಯಾಯಾಲಯವೇ ಮಿಗಿಲಾದದ್ದು: ಸಿಎಂ ಮಾತಿನ ಅರ್ಥವೇನು?
ಎಲ್ಲಾ ನ್ಯಾಯಾಲಯಗಳಿಗಿಂತ ಆತ್ಮ ಸಾಕ್ಷಿಯ ನ್ಯಾಯಾಲಯ ಮಿಗಿಲಾದದ್ದು. ಆದ್ದರಿಂದ ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ಗಾಂಧಿಯವರಿಗೆ ನಾವು ಸಲ್ಲಿಸುವ ದೊಡ್ಡ ಗೌರವ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಮತ್ತು ಸ್ವಚ್ಚತಾ ಆಂದೋಲನಾ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ಮಹಾತ್ಮ ಗಾಂಧಿ ಅವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ. ಗ್ರಾಮಗಳ ಉದ್ಧಾರ ಆಗದೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ನಾವು ಗ್ರಾಮಗಳ ಪ್ರಗತಿಗೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಹಾತ್ಮ ಗಾಂಧಿ ಅವರು ಮೊದಲು ಇಡೀ ಗ್ರಾಮೀಣ ಭಾರತವನ್ನು ಸುತ್ತಾಡಿ ನಮ್ಮ ಜನರ ಬದುಕು ಮತ್ತು ಬವಣೆಯನ್ನು ಅರ್ಥ ಮಾಡಿಕೊಂಡು, ಬಳಿಕ ಅದಕ್ಕೆ ತಕ್ಕಂತೆ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದರು. ಸ್ವತಃ ಜೈಲು ಸೇರಿ ಹೋರಾಟ ಮುಂದುವರೆಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದು ನೆನೆದರು.
ಗಾಂಧೀಜಿಯವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ.. ಎಂದು ಕರೆ ನೀಡಿ 1947ರಲ್ಲಿ ಬ್ರಿಟಿಷರು ಭಾರತದಿಂದ ಹೋಗುವಂತೆ ಮಾಡಿದರು. ಸ್ವಾತಂತ್ರ್ಯ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ಈಡೇರಿಸುವ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳೂ ಕೂಡ ಬಡವರಿಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸಿಕೊಡುವುದಾಗಿದೆ ಎಂದು ಸ್ಮರಿಸಿದರು.

ಕೋಮುವಾದ, ಸರ್ವಾಧಿಕಾರ ಮತ್ತು ಹಿಂಸೆಯಿಂದ ಕೂಡಿರುವ ಜಗತ್ತಿನಲ್ಲಿ ಸತ್ಯ, ಶಾಂತಿ ಮತ್ತು ಅಹಿಂಸೆಯ ಸಾಕಾರಮೂರ್ತಿಯಾಗಿದ್ದ ಮಹಾತ್ಮ ಗಾಂಧೀಜಿಯವರು ಮಾತ್ರ ನಮ್ಮ ಕೈಹಿಡಿದು ಮುನ್ನಡೆಸಬಲ್ಲರು. ಸತ್ಯದ ಸತ್ವ ಪರೀಕ್ಷೆಯನ್ನು ಎದುರಿಸುತ್ತಿರುವ ಈಗಿನ ನನ್ನ ಹೋರಾಟಕ್ಕೆ ಕೂಡಾ ಬಾಪುವಿನ ಬದುಕು ಮತ್ತು ಚಿಂತನೆಗಳೇ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿದೆ ಎಂದರು.
ಬಳಿಕ ಕಿತ್ತೂರು ವಿಜಯೋತ್ಸವದ ಜ್ಯೋತಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಸ್ವಾಭಿಮಾನ, ನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರು ರಾಣಿ ಚನ್ನಮ್ಮ. ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ ಈಕೆ. ಸಂಗೊಳ್ಳಿ ರಾಯಣ್ಣ ಕೂಡ ರಾಣಿ ಚನ್ನಮ್ಮ ಅವರ ಸೈನ್ಯದಲ್ಲಿದ್ದರು. ಬ್ರಿಟೀಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಇವರು ಎಂದು ಶ್ಲಾಘಿಸಿದರು.
ಕಿತ್ತೂರಿನಲ್ಲಿ ಆಚರಿಸಲ್ಪಡುತ್ತಿರುವ ಕಿತ್ತೂರು ಉತ್ಸವಕ್ಕೆ ಮತ್ತು ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರ ಸಕಲ ನೆರವನ್ನು ನೀಡುತ್ತಿದೆ. ಅಗತ್ಯ ಅನುದಾನವನ್ನೂ ನೀಡುತ್ತಿದೆ. ಈ ವಿಜಯ ಜ್ಯೋತಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಹಾದು ಹೋಗಲಿದೆ ಎಂಬುದು ವಿಶೇಷ ಸಂಗತಿ ಎಂದರು.
ಇಂದು ಮಹಾತ್ಮ ಗಾಂಧಿಯವರ ಜಯಂತಿ. ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನುಮದಿನವೂ ಹೌದು. ಗಾಂಧಿ ನಡಿಗೆ ಮೂಲಕ ಗಾಂಧಿ ತತ್ವಾದರ್ಶಗಳು ಇವತ್ತಿನ ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications