ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ ಸವಾಲ್
ಬೆಂಗಳೂರು, ಮಾರ್ಚ್ 04: 2013-2018 ರ ಅವಧಿಯಲ್ಲಾಗಲೀ, ಎರಡನೇ ಬಾರಿ ಸಿಎಂ ಆಗಿರುವ ಅವಧಿಯಲ್ಲಾಗಲೀ LOC ಗೆ ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿಯವರ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.
ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ 4 ಸಾವಿರ ಕೋಟಿ ರೂಪಾಯಿಯ ಕಾಮಗಾರಿಯನ್ನು ಪ್ಯಾಕೇಜ್ ಇಲ್ಲದೆ ನೀಡಲು ಲೋಕೋಪಯೋಗಿ ಸಚಿವರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪ್ಯಾಕೇಜ್ ಪದ್ದತಿ ರದ್ದುಗೊಳಿಸುವುದು, ಬಾಕಿ ಮೊತ್ತವನ್ನು ಪಾವತಿಸುವುದು ಸೇರಿದಂತೆ ಗುತ್ತಿಗೆದಾರರು ಮುಂದಿಟ್ಟ ಎಲ್ಲಾ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಇನ್ನೂ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಬಜೆಟ್ ನಲ್ಲೇ ಘೋಷಿಸಿದರು. ಆದರೆ ಇವತ್ತಿನವರೆಗೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಎಷ್ಟೇ ಅಸಹಕಾರ ಕೊಟ್ಟರೂ ಗುತ್ತಿಗೆದಾರರ ಅಷ್ಟೂ ಹಣವನ್ನು ನಾವೇ ಹಂತ ಹಂತವಾಗಿ ಪಾವತಿಸುತ್ತೇವೆ ಎಂದು ಹೇಳಿದರು.
ಬರ ನಿರ್ವಹಣೆ ಪರಿಶೀಲನೆ: ನಾಳೆ ಸಿಎಂ ವಿಡಿಯೋ ಸಂವಾದ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 5 ರಂದು ಬೆಳಿಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಮತ್ತಿತರ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಈ ವಿಡಿಯೋ ಸಂವಾದದಲ್ಲಿ ಎಲ್ಲ ಜಿಲ್ಲೆಗಳ "ಕುಡಿಯುವ ನೀರು, ಬರ ನಿರ್ವಹಣೆ, ಜಾನುವಾರು ಮೇವು, ಉದ್ಯೋಗ ಹಾಗೂ ಕೃಷಿ" ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.












Click it and Unblock the Notifications