1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ, 4,000 ಲ್ಯಾಪ್‌ಟಾಪ್ ವಿತರಣೆ
ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ, 4,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದರು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಸಾವಿರ ಮಂದಿ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಕ್ಕೆ ಒಂದೇ ಹಂತದಲ್ಲಿ ಆದೇಶ ಹೊರಡಿಸಲಾಗಿದೆ. ಒಂದು ಪೈಸೆಯೂ ಲಂಚಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ನೇಮಕ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ನಿಟ್ಟಿನಲ್ಲಿ 4,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲೇ ಏಕಕಾಲಕ್ಕೆ ಒಂದು ಸಾವಿರ ಜನರ ನೇಮಕವಾಗಿದೆ. ಇದೊಂದು ದಾಖಲೆ ಎಂದೇ ಹೇಳಬಹುದು. ಈ ಹಿಂದೆ ಪಿಯುಸಿ ಅಂಕದ ಆಧಾರದಲ್ಲಿ ಆಯಾ ಜಿಲ್ಲೆಯಲ್ಲಿ ಸೀಮಿತ ಸ್ಥಾನಗಳಿಗೆ ನೇಮಕಾತಿ ನಡೆಯುತ್ತಿತ್ತು. ಆದರೆ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಜಿಲ್ಲೆಗಳಲ್ಲಿ ಪಾರದರ್ಶಕವಾಗಿಲ್ಲ ಎಂಬ ದೂರಿತ್ತು. ಇದಕ್ಕಾಗಿ ನಮ್ಮ ಸರ್ಕಾರ ಇಡೀ ರಾಜ್ಯದಲ್ಲಿ ಒಂದೇ ಬಾರಿ ಪಾರದರ್ಶಕವಾಗಿ ನೇಮಕಾತಿ ನಡೆಯಬೇಕು, ಎಲ್ಲ ಜಿಲ್ಲೆಯವರಿಗೂ ಸಮಾನ ಸವಕಾಶ ಸಿಗಬೇಕೆಂದು ಕ್ರಮ ವಹಿಸಿತ್ತು ಎಂದಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಒಂದೇ ಬಾರಿ ಅರ್ಜಿ ಕರೆಯಲಾಯಿತು, ಒಂದೇ ಬಾರಿ ಪರೀಕ್ಷೆ ನಡೆಸಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇಮಕಾತಿ ನಡೆದಿದೆ. ಈ ಹುದ್ದೆಗೆ 6,33,916 ಮಂದಿ ಅರ್ಜಿ ಸಲ್ಲಿಸಿದ್ದರು. ಭಾಗಶಃ ಕರ್ನಾಟಕ ಬೇರೆ ಯಾವುದೇ ನೇಮಕಾತಿಗೆ ಇಷ್ಟು ಅರ್ಜಿ ಬಂದಿರಲಿಲ್ಲ. ಇಲ್ಲಿ ಕೆಲಸ ಗಿಟ್ಟಿಸಿದವರು ಎಷ್ಟು ಪುಣ್ಯವಂತರು ಎಂದರೆ ಅರ್ಜಿ ಸಲ್ಲಿಸಿದವರ ಪೈಕಿ ಕೆಲವೇ ಮಂದಿ ಮಾತ್ರ ಆಯ್ಕೆಯಾಗಿದ್ದಾರೆ ಎಂದಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ ಕೆಲಸಕ್ಕೆ ಶಿಫಾರಸು ಮಾಡುವಂತೆ ಹಲವು ಮಂದಿ ನನ್ನ ಬಳಿ ಬಂದಿದ್ದರು. ಆದರೆ, ನಾನೇ ಮನಸ್ಸು ಮಾಡಿದರೂ ಶಿಫಾರಸು ಮಾಡಲು ಸಾಧ್ಯವಾಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯ ಉತ್ತರ ಪತ್ರಿಕೆ ತಿದ್ದುವುದು ಸೇರಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲದೆ ಪರೀಕ್ಷೆ ನಡೆಸಲಾಗಿದೆ. ಇಲ್ಲಿ ಕೆಲಸ ಪಡೆದವರು ಹುದ್ದೆಗಾಗಿ ಒಂದು ಪೈಸೆಯೂ ಯಾರಿಗೂ ಲಂಚ ನೀಡಿಲ್ಲ, ಈ ಬಗ್ಗೆ ಈವರೆಗೆ ಒಂದೂ ತಕರಾರು ಬಂದಿಲ್ಲ. ನಾವು ಕೂಡ ಒಂದು ಪೈಸೆ ಲಂಚ ಇಲ್ಲದೆ ಈ ಹುದ್ದೆ ನೀಡಿದ್ದೇವೆ ಎಂದು ಹೇಳಲು ಸಂತಸವಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.

ನಾನು ಸಿಎಂ ಅವರ ಕೈಯಿಂದಲೇ ಎಲ್ಲ ಅಧಿಕಾರಿಗಳಿಗೂ ವಿಧಾನಸೌಧದಲ್ಲೇ ಆದೇಶ ಪ್ರತಿ ನೀಡಬೇಕು ಎಂದು ಹೇಳಿ ಸಿದ್ದರಾಮಯ್ಯನವರನ್ನು ಒಪ್ಪಿಸಿದೆ. ಮೊದಲ ಬಾರಿಗೆ ಸಾವಿರ ಜನ ಸರ್ಕಾರಿ ಸೇವೆಗೆ ಕಾಲಿಡುತ್ತಿದ್ದಾರೆ. ಅವರು ಮೊದಲ ಸಲ ವಿಧಾನಸೌಧಕ್ಕೆ ಕಾಲಿಟ್ಟರೆ, ಅವರಿಗೆ ವಿಧಾನಸೌಧ ಕಟ್ಟಿದ ಆಶಯ ಅರ್ಥವಾಗುತ್ತದೆ. ಆಗಲಾದರೂ ಅವರು ಜನಪರ ಕೆಲಸ ಮಾಡುತ್ತಾರೆ ಎಂಬ ಉದ್ದೇಶದಿಂದಲೇ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.
ಪ್ರಮಾಣಿಕತೆಯಿಂದ ಋಣ ತೀರಿಸಿ
ವಿಧಾನಸೌಧದಲ್ಲಿ ಆದೇಶ ಪ್ರತಿ ಸ್ವೀಕರಿಸುತ್ತಿರುವ ಹೊಸ ಉದ್ಯೋಗಿಗಳಿಗೆ ಈ ಸಂದರ್ಭದಲ್ಲಿ ಅರಿವು ಇರಬೇಕು ಎಂಬ ಕಾರಣಕ್ಕೆ ಆದೇಶ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಅವರ ಕೈಯಿಂದ ನೀಡಲಾಗುತ್ತಿದೆ. ಬಹುತೇಕರು ಸರ್ಕಾರಿ ಕೆಲಸ ಗಿಟ್ಟಿಸಿದ ಕುಟುಂಬದ ಮೊದಲಿಗರು ಎಂದು ಭಾವಿಸಿದ್ದೇನೆ. ಈ ಹುದ್ದೆಗೆ ನೀವು ಋಣ ತೀರಿಸಬೇಕು ಎಂದಿದ್ದರೆ ಜನರ ಪ್ರಮಾಣಿಕ ಸೇವೆ ಮಾಡುವ ಮೂಲಕ ಈ ಋಣ ತೀರಿಸಿ ಎಂದು ಕೃಷ್ಣಬೈರೇಗೌಡ ಕಿವಿಮಾತು ಹೇಳಿದ್ದಾರೆ.

4000 ಲ್ಯಾಪ್‌ಟಾಪ್ ವಿತರಣೆ
ಇದೇ ಕಾರ್ಯಕ್ರಮದಲ್ಲಿ ನಾಲ್ಕು ಸಾವಿರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ದಿನ ಬೆಳಗಾದರೆ ಗ್ರಾಮ ಆಡಳಿತ ಅಧಿಕಾರಿಗಳು ತಾಲ್ಲೂಕು ಕಚೇರಿಗಳಿಗೆ ಟಪಾಲು ಕೊಡೋದು, ತೆಗೆದುಕೊಳ್ಳುವುದೇ ಕೆಲಸವಾಗಿದೆ. ಕೆಲಸ ಮಾಡುವುದನ್ನು ಬಿಟ್ಟು ಓಡಾಟದಲ್ಲೇ ಸಮಯ ವ್ಯರ್ಥವಾಗುತ್ತಿದೆ. ಈ ಟಪಾಲು ವ್ಯವಸ್ಥೆ ಸುಮಾರು 200 ವರ್ಷಗಳಷ್ಟು ಹಳೆಯದು. ಈ ಅನಗತ್ಯ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಟಪಾಲು ವ್ಯವಸ್ಥೆಯಿಂದ ಕೆಲಸ ವಿಳಂಬವಾಗುತ್ತೆ. ಇದರಿಂದ ಅರ್ಜಿ ನೀಡಿದ ಜನ ಪರದಾಡಬೇಕಾಗಿದೆ. ಅಧಿಕಾರಿಗಳು ಕೆಲಸ ಮಾಡಲಿಲ್ಲ ಎಂದರೆ ಕಚೇರಿಗೆ ಅಲೆಯುವ ಜನರಿಗೂ ಭಾರಿ ಸಂಕಷ್ಟ ತಪ್ಪಲ್ಲ. ಈ ಎಲ್ಲ ಸಮಸ್ಯೆಗಳಿಗೂ ಬ್ರೇಕ್ ಹಾಕುವ ಉದ್ದೇಶದಿಂದ ಎಲ್ಲ ಕೆಲಸಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ಗ್ರಾಮ ಲೆಕ್ಕಾಧಿಕಾರಿಯಿಂದ ಸಚಿವರವರೆಗೆ ಎಲ್ಲ ದಾಖಲೆ ಡಿಜಿಟಲ್ ರೂಪದಲ್ಲೇ ಇರಲಿ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ನಾವು 4000 ಲ್ಯಾಪ್‌ಟಾಪ್ ಕೇಳಿದ್ದೆವು. ಆದರೆ ಕ್ಯಾಬಿನೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು 6,000 ಲ್ಯಾಪ್‌ಟಾಪ್‌ಗಳಿಗೆ ಅನುಮೋದನೆ ನೀಡಿದ್ದಾರೆ. ಈ ಸಾಲಿಗೆ ರಾಜ್ಯದ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು. ಎಲ್ಲ ಕಡತ ವಿಲೇವಾರಿ ಆನ್‌ಲೈನ್ ಮೂಲಕವೇ ಪಾರದರ್ಶಕವಾಗಿ ಕೆಲಸ ನಡೆಯಬೇಕು. ಕೆಲಸದ ವಿಳಂಬ ಸೇರಿದಂತೆ ದಾಖಲೆಗಳು ಕಳೆದು ಹೋಗದಂತೆ ನೋಡಿಕೊಳ್ಳುವುದು ಈ ಡಿಜಿಟಲೀಕರಣದ ಉದ್ದೇಶ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಸಲ ಒಂದೇ ಹಂತದಲ್ಲಿ ಒಂದು ಸಾವಿರ ಜನರನ್ನು ಗ್ರಾಮ ಆಡಳಿತ ಅಧಿಕಾರಿಗಳಾಗಿ ನೇಮಕಾತಿ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಒಂದು ಪೈಸೆ ಕೂಡ ಲಂಚಕ್ಕೆ ಆಸ್ಪದವಿಲ್ಲದೆ, ಎಲ್ಲರಿಗೂ ಕೆಲಸ ನೀಡಿರುವುದು ಕಂದಾಯ ಇಲಾಖೆಯ ಹಾಗೂ ಸರ್ಕಾರದ ಹೆಚ್ಚುಗಾರಿಕೆ. ಜೊತೆಗೆ 4,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಮೂಲಕ ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡಲಾಗಿದೆ ಎಂದಿದ್ದಾರೆ. ಕಂದಾಯ ಇಲಾಖೆಯ ಅಭಿಶಿಕ್ಷಣ ತರಬೇತಿ ಮತ್ತು ಕ್ರೋಮ್ ಬುಕ್ (ಲ್ಯಾಪ್‌ಟಾಪ್) ವಿತರಿಸಿ, ಬಳಿಕ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.












Click it and Unblock the Notifications