ಆನೆಯಿಂದ ಮಾಲಾರ್ಪಣೆ: ಇನ್ನು ಕುಮಾರಸ್ವಾಮಿಯನ್ನು ತಡೆಯುವವರು ಯಾರು?
Recommended Video
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ ದೊರೆ ಆಗಮಿಸಿದಾಗ, ಅಲ್ಲಿ ಅಕ್ಷರಸಃ ಹಬ್ಬದ ವಾತಾವರಣ. ಚಿಕ್ಕವರು, ದೊಡ್ಡವರು ಎನ್ನದೇ, ಎಲ್ಲರೂ ನಾಡಿನ ಮುಖ್ಯಮಂತ್ರಿಯನ್ನು ನೋಡಲು ಆಗಮಿಸಿದ್ದರು.
ಹಳ್ಳಿಯ ಪ್ರತೀ ಮನೆಯ ಮುಂದೆ ತಳಿರು ತೋರಣ, ರಂಗೋಲಿ. ಉಜಳಂಬ ಗ್ರಾಮದವರಲ್ಲದೇ ಪಕ್ಕದ ಊರಿನವರೂ ತಂಡೋಪತಂಡವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕಣ್ತುಂಬಿಸಿಕೊಳ್ಳಲು ಬಂದಿದ್ದರು.
ಒಂದು ಕಡೆ ಡೊಳ್ಳು ಕುಣಿತ, ಭಜನೆ, ನಾನಾ ಕಲಾಪ್ರಕಾರದ ಮೆರವಣಿಗೆ, ಇನ್ನೊಂದೆಡೆ ಬಂದ ಜನರಿಗಾಗಿ ತಯಾರು ಮಾಡಲಾಗಿದ್ದ ಗೋದಿ ಹುಗ್ಗಿ, ಅನ್ನಸಾರು ಪರಿಮಳ. ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಉಜಳಂಬ ಗ್ರಾಮಕ್ಕೆ ಕರೆದುಕೊಂಡು ಬರಲಾಯಿತು.

ಉಜಳಂಬ ಗ್ರಾಮಕ್ಕೆ ಆಗಮಿಸದ ಕೂಡಲೇ, ಮೊದಲು ಕಲಬುರಗಿ ಜಿಲ್ಲೆಯ ಕಡಗಂಚಿ ಮಠದ ಆನೆ ಗಜಲಕ್ಷ್ಮೀ ಮುಖ್ಯಮಂತ್ರಿಗಳಿಗೆ ಮಾಲಾರ್ಪಣೆ ಮಾಡಿತು. ಈ ಆನೆಯಿಂದ ಹಾರ ಹಾಕಿಸಿಕೊಂಡರೆ ಅದಕ್ಕೆ ವಿಶೇಷ ಶಕ್ತಿಯಿದೆ ಎನ್ನುವುದು ಇಲ್ಲಿನ ಜನರ ನಂಬಿಕೆ.
ಮುಖ್ಯಮಂತ್ರಿಗಳಿಗೆ ಈ ಮಠದ ಆನೆ ಹಾರ ಹಾಕಿ ಸ್ವಾಗತಿಸುವುದು ಇದೇನು ಹೊಸದಲ್ಲ. ಹಿಂದೆ ಕೂಡಾ, ಎಸ್ ಎಂ ಕೃಷ್ಣ ಮತ್ತು ಸಿದ್ದರಾಮಯ್ಯನವರಿಗೆ ಆನೆ ಮಾಲಾರ್ಪಣೆ ಮಾಡಿತ್ತಂತೆ. ಅಲ್ಲಿಂದ, ಇಬ್ಬರೂ ಯಾವುದೇ ಆತಂಕವಿಲ್ಲದೇ, ತಮ್ಮ ಮುಖ್ಯಮಂತ್ರಿ ಅವಧಿಯನ್ನು ಮುಗಿಸಿದ್ದರಂತೆ!

ಹಿಂದಿನ ಇಬ್ಬರೂ ಮುಖ್ಯಮಂತ್ರಿಗಳಿಗೆ ಒಳ್ಳೆದಾದಂತೆ, ಕುಮಾರಸ್ವಾಮಿಗೂ ಒಳಿತಾಗಲಿ ಎನ್ನುವ ಕಾರಣಕ್ಕಾಗಿ ಈ ಆನೆಯನ್ನು ಕಲಬುರಗಿ ಕಡಗಂಚಿ ಮಠದಿಂದ ಕರೆಸಲಾಗಿತ್ತು ಎನ್ನುವುದು ವಿಶೇಷ.
ಉಜಳಂಬ ಗ್ರಾಮದ ಜನತೆ ತೋರಿದ ಪ್ರೀತಿ, ಆತಿಥ್ಯಕ್ಕೆ ಮನಸೋತೋ ಏನೋ ಮುಖ್ಯಮಂತ್ರಿಗಳು 32.10ಕೊಟಿ ರೂಪಾಯಿಯನ್ನು ವಿವಿಧ ಕಾಮಗಾರಿಗಳಿಗಾಗಿ ಘೋಷಿಸಿದರು. ಕೆಲವೊಂದಕ್ಕೆ ಆನ್ ದಿ ಸ್ಪಾಟ್ ಚಾಲನೆ ನೀಡಿದರು. ಅಲ್ಲಿಗೆ, ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಒಂದು ರೀತಿಯಲ್ಲಿ ಸಾರ್ಥಕತೆಯನ್ನು ಪಡೆಯಿತು.












Click it and Unblock the Notifications