Bommai vs DK Shivakumar: ಮೇ 13ಕ್ಕೆ ಯಾರ ಡ್ಯಾಂನಲ್ಲಿ ಎಷ್ಟು ನೀರಿದೆ ಗೊತ್ತಾಗುತ್ತೆ: ಡಿಕೆಶಿ ಹೇಳಿಕೆಗೆ ಬೊಮ್ಮಾಯಿ ಕಿಡಿ
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ಕೂಡ ಹೆಚ್ಚಾಗುತ್ತಿದೆ. ಆರೋಪ ಪ್ರತ್ಯಾರೋಪಗಳು, ಸವಾಲು ಪ್ರತಿ ಸವಾಲು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಲಿಂಗಾಯತರನ್ನು ಡ್ಯಾಮ್‌ಗೆ ಹೋಲಿಸಿ ಮಾತನಾಡಿದ್ದಕ್ಕೆ ಸಿಎಂ ಬೊಮ್ಮಾಯಿ ಕೆರಳಿದ್ದು, ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಕೆಲವು ಬಿಜೆಪಿ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಡ್ಯಾಮ್‌ಗೆ ಹೋಲಿಕೆ ಮಾಡಿದ್ದರು. "ಡ್ಯಾಮ್ ಹೊಡೆದು ಹೋದರೆ ಹರಿದು ಹೋಗುವ ನೀರನ್ನು ನಿಲ್ಲಿಸಲಾಗದು, ಮತ್ತೆ ಹೊಸದಾಗಿ ಡ್ಯಾಮ್ ಕಟ್ಟಬೇಕು. ಡ್ಯಾಮ್‌ನಿಂದ ಹೊರಬಂದ ನೀರು ಸಮುದ್ರ ಸೇರಬೇಕು" ಎಂದು ಹೇಳಿದ್ದರು.

ಬಿಜೆಪಿಯನ್ನು ಡ್ಯಾಮ್‌ಗೆ ಹೋಲಿಕೆ ಮಾಡಿದ್ದ ಅವರು ಲಿಂಗಾಯತರನ್ನು ನೀರಿಗೆ ಹೋಲಿಕೆ ಮಾಡಿ ಕಾಂಗ್ರೆಸ್ ಸಮುದ್ರ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮೇ 13ರಂದು ಯಾರ ಡ್ಯಾಮ್‌ನಲ್ಲಿ ಎಷ್ಟು ನೀರಿದೆ ತಿಳಿಯುತ್ತೆ ಎಂದು ಸವಾಲು ಹಾಕಿದ್ದಾರೆ.
ಟ್ವೀಟ್ ಮಾಡಿರುವ ಅವರು, "ಡಿಕೆ ಶಿವಕುಮಾರ್ ಅವರೇ, ಲಿಂಗಾಯತ ಡ್ಯಾಮಿನ ಬಗ್ಗೆ ಮಾತನಾಡಿದ್ದೀರಿ. ಅದು ಎಷ್ಟು ಗಟ್ಟಿ ಇದೆ ಎನ್ನುವ ಅರಿವು ಕೂಡ ನಿಮಗಿಲ್ಲ. ನೀವು ಅದನ್ನು ಒಡೆಯುವ ಕನಸು ಕಾಣುತ್ತಿದ್ದೀರಿ. 2018ರಲ್ಲಿ ನಿಮ್ಮ ಸರ್ಕಾರ ಇದ್ದಾಗಲೇ ಇದನ್ನು ಒಡೆಯಲು ಸಾಧ್ಯವಾಗಲಿಲ್ಲ, ಈಗ ಇನ್ನೇನು ಮಾಡಲು ಸಾಧ್ಯ. ಮೊದಲು ಕಾಂಗ್ರೆಸ್‌ನ ಗುಂಡಿಯಲ್ಲಿ ನೀರಿಲ್ಲ, ಅದರ ಬಗ್ಗೆ ಚಿಂತೆ ಮಾಡಿ. ನಿಮ್ಮ ಹೇಳಿಕೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ. ಮೇ 13ರಂದು ಯಾರಾ ಯಾರ ಡ್ಯಾಮ್‌ನಲ್ಲಿ ಎಷ್ಟು ನೀರಿದೆ ಎನ್ನುದು ಗೊತ್ತಾಗುತ್ತದೆ. ನಿಮ್ಮ ಹೇಳಿಕೆಯಿಂದ ಲಿಂಗಾಯತ ಧರ್ಮವನ್ನು ಒಡೆಯುವ ನಿಮ್ಮ ಮತ್ತೊಂದು ಹುನ್ನಾರ ಬಯಲಾಗಿದೆ" ಎಂದು ತಿರುಗೇಟು ನೀಡಿದ್ದಾರೆ.
ಇಬ್ಬರ ಜಗಳದಲ್ಲಿ ಜೆಡಿಎಸ್‌ಗೆ ಲಾಭ?
ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ಮಾಡಲು ಭಾರಿ ಕಸರತ್ತು ಮಾಡಿತ್ತು. ಆದರೂ, ಕೆಲವು ನಾಯಕರು ಬಂಡಾಯವೆದ್ದು ಪಕ್ಷಾಂತರ ಮಾಡಿದ್ದಾರೆ. ಆದರೆ ಇದು ಹೆಚ್ಚಿನದಾಗಿ ಲಾಭವಾಗಿರುವುದು ಮಾತ್ರ ಜೆಡಿಎಸ್‌ಗೆ, ರಾಜ್ಯದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ 28 ಪ್ರಭಾವಿ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ರಾಜ್ಯದಲ್ಲಿ ಲಿಂಗಾಯತ ಮತಗಳನ್ನು ಹೆಚ್ಚಾಗಿ ಸೆಳೆಯುವ ಲೆಕ್ಕಾಚಾರದಲ್ಲಿದೆ. ಇದನ್ನು ಉಲ್ಲೇಖಿಸಿಯೇ ಡಿಕೆ ಶಿವಕುಮಾರ್ ಬಿಜೆಪಿ ಬಗ್ಗೆ ಮಾತನಾಡುವಾಗ ಹೇಳಿಕೆ ನೀಡಿದ್ದರು.












Click it and Unblock the Notifications