ಸಿಎಂ (ಕಾಮನ್ ಮ್ಯಾನ್) ಬೊಮ್ಮಾಯಿ ಮತ್ತೊಮ್ಮೆ ವಿಶಿಷ್ಟ ನಡೆ
ಬೆಂಗಳೂರು, ಮೇ 29: ನನ್ನ ಮಟ್ಟಿಗೆ ಸಿಎಂ ಅಂದರೆ ಕಾಮನ್ ಮ್ಯಾನ್ ಎಂದು ಅವಾಗಾವಾಗ ಹೇಳುತ್ತಿರುವ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಅದನ್ನು ಋಜುವಾತು ಪಡಿಸಿದ್ದಾರೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾಕಾರರನ್ನು ಯಾವುದೇ ಮುನ್ಸೂಚನೆಯಿಲ್ಲದೇ ಭೇಟಿಯಾಗಿದ್ದಾರೆ.
ಬೊಮ್ಮಾಯಿಯವರು ಪ್ರತಿಭಟನಾ ಸ್ಥಳಕ್ಕೇ ಭೇಟಿ ನೀಡಿ ಅಹವಾಲು ಸ್ವೀಕರಿಸುವುದು ಹೊಸದೇನಲ್ಲ. ಕಳೆದ ಫೆಬ್ರವರಿ ತಿಂಗಳಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಭಾರೀ ಪ್ರತಿಭಟನೆಯ ಸಂದರ್ಭದಲ್ಲಿ ಅಲ್ಲೇ ಮನವಿಯನ್ನು ಸ್ವೀಕರಿಸಿದ್ದರು. ಇದು ವ್ಯಾಪಕ ಪ್ರಶಂಸೆಗೆ ಒಳಾಗಾಗಿತ್ತು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿವಿಧ ಬೇಡಿಕೆಗಳ ಜಾರಿಗೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಶನಿವಾರ (ಮೇ 28) ಧರಣಿ ನಡೆಸುತ್ತಿದ್ದರು. ಪೂರ್ವ ನಿಗದಿತ ಕಾರ್ಯಕ್ರಮ ಮುಗಿಸಿ ನೇರವಾಗಿ ಅಲ್ಲಿಗೆ ಆಗಮಿಸಿದ ಬೊಮ್ಮಾಯಿ, ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರು.

ಇದಾದ ನಂತರ, ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುತ್ತಿರುವ ಅಭ್ಯರ್ಥಿಗಳನ್ನೂ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು. ಮುಖ್ಯಮಂತ್ರಿಗಳ ಈ ಭೇಟಿ ಅಭ್ಯರ್ಥಿಗಳಲ್ಲಿ ಹೊಸ ಭರವಸೆಯನ್ನಂತೂ ಮೂಡಿಸಿದೆ.
"ಪಿಎಸ್ಐ ವಿಚಾರ ಸಿಐಡಿ ಅಂಗಳದಲ್ಲಿದೆ, ಈ ಸಂದರ್ಭದಲ್ಲಿ ನಾನು ಏನೂ ಭರವಸೆಯನ್ನು ನೀಡಲು ಸಾಧ್ಯವಿಲ್ಲ. ತನಿಖೆ ಮುಗಿಯುವವರೆಗೆ ನೀವು ಸಮಾಧಾನದಿಂದ ಇರಬೇಕು"ಎಂದು ಅಭ್ಯರ್ಥಿಗಳನ್ನು ಉದ್ದೇಶಿಸಿ ಸಿಎಂ ಬೊಮ್ಮಾಯಿ ಹೇಳಿದರು.

ಇನ್ನು ಸ್ವಾಮೀಜಿಗಳ ಭೇಟಿಯ ನಂತರ, "ಪೂಜ್ಯ ಶ್ರೀಗಳು ಸಮಾಜದ ಸೇವೆಗೆ ತಮ್ಮನ್ನು ತೊಡಗಿಸಿಕೊಂಡವರು. ಸಮುದಾಯದ ಬೇಡಿಕೆಯ ವಿಚಾರದ ಬಗ್ಗೆ ನ್ಯಾ. ನಾಗಮೋಹನ್ ದಾಸ್ ವರದಿ ಕೊಟ್ಟಿದ್ದಾರೆ. ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಅಸೆಂಬ್ಲಿಯಲ್ಲಿ ಈಗಾಗಲೇ ಹೇಳಿದ್ದೇನೆ. ಆದಾಗ್ಯೂ, ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುತ್ತೇವೆ. ಶ್ರೀಗಳ ಆಶೀರ್ವಾದದಿಂದ ಸಮಾಜಕ್ಕೆ ಒಳ್ಳೆಯದಾಗಬೇಕು" ಎಂದು ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.












Click it and Unblock the Notifications