
Karnataka Rains : ವಾಯುಭಾರ ಕುಸಿತ: ಕರ್ನಾಟಕದ ಹಲವೆಡೆ ಡಿ.8 ರಿಂದ ಮಳೆ
ಬೆಂಗಳೂರು, ಡಿಸೆಂಬರ್ 04: ಬದಲಾದ ಹವಾಮಾನದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲಡೆ ಜೋರು ಮಳೆ ಭೀತಿ ಉಂಟಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಡಿ.8ರಿಂದ ಮಳೆ ಆರ್ಭಟಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಭಾನುವಾರ 5.8 ಕೀಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದೆ. ಇದರ ಪ್ರಭಾದಿಂದ ಸೋಮವಾರ ಈಶಾನ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಲಿದೆ. ಈ ವೈಪರಿತ್ಯವು ಪಶ್ಚಿಮ ವಾಯುವ್ಯ ದಿಕ್ಕಿನ ಮೂಲಕ ಸಾಗಿ ಡಿಸೆಂಬರ್ 7ರಂದು ವಾಯುಭಾರ ಕುಸಿತವಾಗಿ ಇನ್ನಷ್ಟು ತೀವ್ರಗೊಳ್ಳುತ್ತದೆ. ಅಲ್ಲಿಂದ ಆಗ್ನೇಯ ಭಾಗದತ್ತ ಚಲಿಸಿ ಡಿಸೆಂಬರ್ 8 ರಂದು ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ ಕರಾವಳಿ ಭಾಗಕ್ಕೆ ಬಂದಪ್ಪಳಿಸಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಪ್ರಸಾದ್ ಮಾಹಿತಿ ನೀಡಿದರು.
Karnataka Rains : ಕರ್ನಾಟಕದಲ್ಲಿ ಹಿಂಗಾರು ಚುರುಕು, ಭಾರಿ ಮಳೆ ಸಂಭವ
ದಕ್ಷಿಣ ಒಳನಾಡಿಗೆ ವ್ಯಾಪಕ ಮಳೆ
ಈ ಹವಾಮಾನದಲ್ಲಿ ಉಂಟಾದ ಬದಲಾವಣೆಗಳ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಡಿಸೆಂಬರ್ 8, 9 ಮತ್ತು 10ರಂದು ಗುಡುಗು ಸಹಿತ ವ್ಯಾಪಕ ಮಳೆ ಬೀಳುವ ನಿರೀಕ್ಷೆ ಇದೆ. ಡಿ.8ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಹಗುರ ಮಳೆ ಜೊತೆಜೊತೆಗೆ ಒಣ ಹವೆಯು ಮುಂದುವರಿಯಲಿದೆ.
ಇದರೊಂದಿಗೆ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದಿನಿಂದ (ಭಾನುವಾರ) ಮೂರು ದಿನ ಹಗುರದಿಂದ ಸಾಧಾರಣ ಮಳೆ ಆಗಲಿದೆ. ನಂತರ ಒಣಹವೆ ನಿರ್ಮಾಣವಾಗಲಿದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡಿನ ಭಾಗದಲ್ಲಿ ಮುಂದಿನ ಐದು ದಿನವು ಒಣಹವೆ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ರಾಜ್ಯದಲ್ಲಿ ಅತಿ ಕನಿಷ್ಠ ಉಷ್ಣಾಂಶ ಕಳೆದ 24ಗಂಟೆಯಲ್ಲಿ ದಾವಣಗೆರೆಯಲ್ಲಿ 13ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ರೀತಿ ರಾಜ್ಯದ ಗರಿಷ್ಠ ತಾಪಮಾನ ಗೋಕರ್ಣ ಹಾಗೂ ಕಾರವಾರದಲ್ಲಿ ತಲಾ 35.6ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಮುಂದಿನ ಎರಡು ದಿನ ವಾತಾವರಣದಲ್ಲಿ ಅತೀ ಚಳಿ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲ ಎನ್ನಲಾಗಿದೆ.