ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: KPSC ಕಚೇರಿ ಮೇಲೆ ಸಿಐಡಿ ದಿಢೀರ್ ದಾಳಿ, ಮಹತ್ವದ ಕಡತಗಳು ವಶ

ಬೆಂಗಳೂರು: ರಾಜ್ಯದಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿರುವ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಕೇಂದ್ರ ಕಚೇರಿ ಮೇಲೆ ರಾಜ್ಯ ಅಪರಾಧ ತನಿಖಾ ಇಲಾಖೆ ಅಂದರೆ ಸಿಐಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ತನಿಖಾ ತಂಡ, ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ಪೈಲ್‌ಗಳು ಹಾಗೂ ನೂರಾರು ಅಭ್ಯರ್ಥಿಗಳ ಒಎಂಆರ್ ಉತ್ತರ ಪತ್ರಿಕೆಗಳನ್ನ ಜಪ್ತಿ ಮಾಡಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಯನ್ನ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಕೆಪಿಎಸ್‌ಸಿ ಕಚೇರಿಗೆ ತೆರಳಿ ಕಡತಗಳ ಪರಿಶೀಲನೆ ಆರಂಭಿಸಿದರು.

KPSC

ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಘವೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಇಬ್ಬರು ಡಿವೈಎಸ್‌ಪಿಗಳ ನೇತೃತ್ವದ ತನಿಖಾ ತಂಡವು ಮಧ್ಯಾಹ್ನದವರೆಗೂ ಕಚೇರಿಯ ವಿವಿಧ ವಿಭಾಗಗಳಲ್ಲಿ ಶೋಧ ಕಾರ್ಯ ನಡೆಸಿತು. ನೇಮಕಾತಿ ಪರೀಕ್ಷೆಯ ಪ್ರಕ್ರಿಯೆಗಳು ನಡೆದ ವಿಭಾಗಗಳು , ಅಧಿಕಾರಿಗಳ ಕೊಠಡಿಗಳು ಹಾಗೂ ಗೌಪ್ಯ ಶಾಖೆಗಳಲ್ಲಿ ದಾಖಲೆಗಳನ್ನ ಕೂಲಂಕಷವಾಗಿ ಅಧಿಕಾರಿಗಳು ಪರಿಶೀಲಿಸಿದ್ದಾರೆ.

329 ಅಭ್ಯರ್ಥಿಗಳ ಒಎಂಆರ್ ಶೀಟ್ ಜಪ್ತಿ: ಎಫ್‌ಎಸ್ಎಲ್ ಪರೀಕ್ಷೆಗೆ ರವಾನೆ

ದಾಳಿಯ ವೇಳೆ ತನಿಖಾ ತಂಡವು ಒಟ್ಟು 329 ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳು, ನೇಮಕಾತಿಗೆ ಸಂಬಂಧಿಸಿದ ಕಡತಗಳು ಹಾಗೂ ಆಯೋಗದ ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನ ವಶಕ್ಕೆ ಪಡೆದುಕೊಂಡಿದೆ. ವಶಪಡಿಸಿಕೊಳ್ಳಲಾದ ಒಎಂಆರ್ ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನ ಹೆಚ್ಚಿಸಲು ತಿದ್ದುಪಡಿ ಮಾಡಲಾಗಿದೆಯೇ ಅಥವಾ ನಕಲಿ ಉತ್ತರ ಪತ್ರಿಕೆಗಳನ್ನ ಸೃಷ್ಟಿಸಲಾಗಿದೆಯೇ ಎಂಬುದನ್ನ ಪತ್ತೆಹಚ್ಚಲು ಎಲ್ಲ ತಾಂತ್ರಿಕ ದಾಖಲೆಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ( ಎಫ್‌ಎಸ್ಎಲ್‌ ) ಕಳುಹಿಸಲಾಗಿದೆ. ಎಫ್‌ಎಸ್ಎಲ್ ತಜ್ಞರ ವರದಿ ಕೈಸೇರಿದ ನಂತರ ನೇಮಕಾತಿ ಅಕ್ರಮದ ನಿಜ ಸ್ವರೂಪ ಬಹಿರಂಗವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಕೆಪಿಎಸ್‌ಸಿ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಸಂಬಂಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ( FIR ) ದಾಖಲಾಗಿದ್ದವು.

ಪ್ರಕರಣದ ಗಂಭೀರತೆಯನ್ನ ಪರಿಗಣಿಸಿದ ರಾಜ್ಯ ಸರ್ಕಾರವು ಸಮಗ್ರ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ನೀಡಿತ್ತು. ತನಿಖೆ ಆರಂಭಿಸಿದ್ದ ಸಿಐಡಿ ಅಧಿಕಾರಿಗಳು , ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಒದಗಿಸುವಂತೆ ಕೆಪಿಎಸ್‌ಸಿಗೆ ಈ ಹಿಂದೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಹಾಗೂ ಸಾಕ್ಷ್ಯಗಳನ್ನ ನಾಶ ಮಾಡುವುದನ್ನ ತಡೆಯುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ.

ಪ್ರಾಥಮಿಕ ಹಂತದಲ್ಲಿ ವಶಪಡಿಸಿಕೊಂಡಿರುವ ಕಡತಗಳು ಮತ್ತು ಒಎಂಆರ್ ಶೀಟ್‌ಗಳನ್ನ ಸಿಐಡಿ ತನಿಖಾ ತಂಡವು ಪರಿಶೀಲಿಸುತ್ತಿದೆ. ಎಫ್‌ಎಸ್ಎಲ್ ವರದಿ ಹಾಗೂ ಪ್ರಾಥಮಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇರುವ ಕೆಪಿಎಸ್‌ಸಿ ಅಧಿಕಾರಿಗಳು , ಸಿಬ್ಬಂದಿ ಹಾಗೂ ಅನುಮಾನಾಸ್ಪದ ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿಐಡಿ ಸಿದ್ಧತೆ ನಡೆಸಿದೆ. ಮುಂಬರುವ ದಿನಗಳಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖರ ವಿಚಾರಣೆ ನಡೆಯುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+