ದೈಹಿಕ ಪರೀಕ್ಷೆಯಲ್ಲಿ ಸ್ಟಿರಾಯ್ಡ್ ಬಳಸಿದ ಪಿಎಸ್‌ಐ ಅಭ್ಯರ್ಥಿಗಳು
ಬೆಂಗಳೂರು, ಮೇ 8: ಪಿಎಸ್‌ಐ ನೇಮಕಾತಿ ಹಗರಣವನ್ನು ಕುರಿತು ಸಿಐಡಿ ತನಿಖೆಯನ್ನು ನಡೆಸುತ್ತಿದೆ. ಸಿಐಡಿ ತನಿಖೆಯ ವೇಳೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ಎಸಗಲು ಯಾವೆಲ್ಲಾ ತಂತ್ರಗಳನ್ನು ಉಪಯೋಗಿಸಿದ್ದರು. ಮೊದಲ ಪತ್ರಿಕೆಯಲ್ಲಿ ಹೋಗಿದ್ದ ಅಂಕಗಳನ್ನು ಎರಡನೇ ಪತ್ರಿಕೆಯಲ್ಲಿ ಗಳಿಸಿದ್ದು ಹೇಗೆ ಎಂಬುದರ ಬಗ್ಗೆಯೆಲ್ಲಾ ತನಿಖೆಗೆ ಇಳಿದಿತ್ತು.
ರಾಜಕೀಯ ಕಾರಣ, ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಅಕ್ರಮ, ಬ್ಲೂಟೂತ್ ಮಹಿಮೆ, ಸಿಬ್ಬಂದಿಯ ಸಹಕಾರ ಹೀಗೆ ಹಲವು ವಿಚಾರ ಸಹ ಬಹಿರಂಗವಾಗುತ್ತ ತನಿಖೆ ಸಾಗುತ್ತಿದೆ. ಪರೀಕ್ಷೆಯ ಅಕ್ರಮಕ್ಕಾಗಿ 50 ರಿಂದ 80 ಲಕ್ಷ ಹಣದ ಜೊತೆಗೆ ಸಿಕ್ಕಾಪಟ್ಟೆ ಬುದ್ದಿಯನ್ನು ಖರ್ಚು ಮಾಡಿರೋ ಆರೋಪಿಗಳು ದೈಹಿಕ ಪರೀಕ್ಷೆ ಪಾಸ್ ಆಗಲು ಯಾವ ಐಡಿಯಾ ಮಾಡಿದ್ದರು ಎಂಬುದನ್ನು ತನಿಖೆ ನಡೆಸದ ವೇಳೆ ಸ್ಫೋಟಕ ಮಾಹಿತಿ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿದೆ.
ದೈಹಿಕ ಪರೀಕ್ಷೆ ಪಾಸ್ ಆಗಲು ಸ್ಟಿರಾಯ್ಡ್ ಬಳಕೆ..!
ಪೊಲೀಸ್ ಇಲಾಖೆಯಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಳ್ಳಬೇಕಾದರೆ ಅರ್ಜಿ ಸಲ್ಲಿಸಿದ ಬಳಿಕ ಮೊದಲು ದೈಹಿಕ ಪರೀಕ್ಷೆಗಳಲ್ಲಿ ಪಾಸ್ ಆಗಬೇಕು. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರವೇ ಲಿಖಿತ ಪರೀಕ್ಷೆಗೆ ಅವಕಾಶವಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಆಯ್ಕೆ ಪಟ್ಟಿಯಲ್ಲಿ ಹೆಸರು ಬಂದರೇ ಹುದ್ದೆ ಖಚಿತವಾಗುತ್ತದೆ.

ಅಂದರೆ ಪೊಲೀಸ್ ಇಲಾಖೆಯಲ್ಲಿ ಹುದ್ದೆಯನ್ನುಗಳಿಸಬೇಕು ಎಂದಾದರೇ ದೈಹಿಕ ಮತ್ತು ಲಿಖಿತ ಪರೀಕ್ಷೆ ಎರಡು ಮುಖ್ಯವೇ. ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆಯನ್ನು ನಡೆಸುತ್ತಿರೋ ಸಿಐಡಿ ಅಧಿಕಾರಿಗಳಿಗೆ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದ್ದು ಲಿಖಿತ ಪರೀಕ್ಷೆಯಲ್ಲಿ ಎಸಗಿರುವ ಕೆಲವು ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಭಯದಿಂದ ಸ್ಟಿರಾಯ್ಡ್ ಬಳಸಿದ್ದರು.
ಆ ಮೂಲಕ ಅಕ್ರಮವಾಗಿಯೇ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು ಎಂಬುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ. ಕ್ರೀಡೆ ಸ್ಟಿರಾಯ್ಡ್ ಬಳಕೆಯಿಂದ ದೇಹದ ಸಮರ್ಥ್ಯ ವೃದ್ದಿಯಾಗಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಕಾರಿಯಾಗುತ್ತದೆ. ಹೀಗಾಗಿಯೇ ಸಿಐಡಿ ಅಧಿಕಾರಿಗಳು ಕೆಲವು ಅನುಮಾನಿತ ಅಭ್ಯರ್ಥಿಗಳನ್ನು ಸ್ಟಿರಾಯ್ಡ್ ವಿಚಾರದಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.

ಒಎಂಆರ್ ಸಲ್ಲಿಸದ 94 ಅಭ್ಯರ್ಥಿಗಳಿಗೆ ಕಂಟಕ..!
ಪಿಎಸ್ ಐ ಹುದ್ದೆಯ ಲಿಖಿತ ಪರೀಕ್ಷೆಯನ್ನು ಸುಮಾರು 54ಸಾವಿರ ಅಭ್ಯರ್ಥಿಗಳು ಬರೆದಿದ್ದರು. ಈ ಅಭ್ಯರ್ಥಿಗಳ ಪೈಕಿ 545 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಸಿಐಡಿ ಅಧಿಕಾರಿಗಳು ಪಿಎಸ್ ಐ ಹಗರಣವನ್ನುತನಿಖೆಗೆ ಕೈಗೆತ್ತಿಕೊಂಡಾಗಲೇ ಎಲ್ಲಾ ಅಭ್ಯರ್ಥಿಗಳಿಗೂ ನೊಟೀಸ್ ನೀಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿತ್ತು. ಇನ್ನು ಪರೀಕ್ಷೆಯ ದೃಷ್ಟಿಯಿಂದ ಅನುಮಾನಿತ ಅಭ್ಯರ್ಥಿಗಳ ಒಎಂಆರ್ ನಕಲು ಕಾಪಿಯನ್ನು ತರುವಂತೆಯೂ ಈ ಪೈಕಿ ಒಎಂಆರ್ ತಂದಿದ್ದ 243 ಅಭ್ಯರ್ಥಿಗಳ ನಕಲು ಪ್ರತಿಯನನ್ನು ಮತ್ತು ಬೇರೆ ಆಯಾಮದಲ್ಲಿ ತನಿಖೆ ನಡೆಸಿದ ಸಂದರ್ಭದಲ್ಲಿ ಯಾವುದೇ ಅನುಮಾನವಿರದೇ ಉತ್ತೀರ್ಣರಾಗಿರುವುದು ಖಚಿತವಾಗಿದೆ.
ಇನ್ನು 94 ಅಭ್ಯರ್ಥಿಗಳು ಒಎಂಆರ್ ಪ್ರತಿಯನ್ನು ಸಲ್ಲಿಸಿಲ್ಲ. ಒಎಂಆರ್ ಸಲ್ಲಿಸದ ಅಭ್ಯರ್ಥಿಗಳ ಮೇಲೆ ಅನುಮಾನ ಹೆಚ್ಚಾಗಿದೆ, ಇವರಿಗೆ ಮತ್ತೊಮ್ಮೆ ತನಿಖೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗದೆ. ಈ ಅಭ್ಯರ್ಥಿಗಳು ತನಿಖೆಗೆ ಹಾಜರಾಗಿ ಒಎಂಆರ್ ಸಲ್ಲಿಸದಿದ್ದರೇ ಎರಡು ದಿನ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಇನ್ನು ಕರ್ನಾಟಕ ಸರ್ಕಾರ ಪಿಎಸ್ ಐ ಹುದ್ದೆಯ ಪರೀಕ್ಷೆಯ ಸಂದರ್ಭದಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷೆ ರದ್ದು ಪಡಿಸಿದೆ. ಅಭ್ಯರ್ಥಿಗಳು ಸ್ಟಿರಾಯ್ಡ್ ಬಳಸಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೇ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಸಾವಿರಾರು ಆಕಾಂಕ್ಷಿಗಳ ಅನ್ಯಾಯವೆಸಗಿದಂತೆ. ಪರೀಕ್ಷೆಯನ್ನು ರದ್ದು ಪಡಿಸಿದಂತೆ ದೈಹಿಕ ಪರೀಕ್ಷೆಯನ್ನು ರದ್ದು ಮಾಡಿ ಹೊಸದಾಗಿ ನೋಟಿಫಿಕೇಷನ್ ಮಾಡಿ ಮೊದಲಿಂದ ಪಾರದರ್ಶಕವಾಗಿ ಪಿಎಸ್ ಐ ಗಳ ನೇಮಕಾತಿ ನಡೆಸಬೇಕು ಎಂಬ ಮಾತು ಕೇಳಿಬರ್ತಿದೆ.












Click it and Unblock the Notifications