Government employee; ಒಂಟಿ ಪೋಷಕರಾದರೆ ಪುರುಷರಿಗೂ ಶಿಶುಪಾಲನಾ ರಜೆ
ಬೆಂಗಳೂರು, ಜೂನ್ 12; ಒಂಟಿ ಪೋಷಕರಾಗಿರುವ ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ ಆದೇಶ ಹೊರಡಿಸಲಾಗಿದೆ. ಕೆಲವು ಷರತ್ತುಗಳೊಂದಿಗೆ ಈ ರಜೆಯನ್ನು ಮಂಜೂರು ಮಾಡಬಹುದಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-1) ಅಜಯ್ ಎಸ್. ಕೊರಡೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಆದೇಶ 21/6/2021 ಉಲ್ಲೇಖಿಸಿ ಈ ಕುರಿತು ಆದೇಶಿಸಲಾಗಿದೆ.

ಸರ್ಕಾರಿ ಆದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ ವಿವಾಹ ವಿಚ್ಛೇದಿತ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಮಕ್ಕಳ ಆರೈಕೆಗಾಗಿ ಶಿಶುಪಾಲನಾ ರಜೆಯ ಅವಶ್ಯಕತೆ ಇರುತ್ತದೆಂದು ತಿಳಿಸಲಾಗಿದೆ.
ಈ ರಜೆಯ ಸೌಲಭ್ಯವನ್ನು ಅಂತಹ ಪುರುಷ ಸರ್ಕಾರಿ ನೌಕರರಿಗೂ ಸಹ ವಿಸ್ತರಿಸಬೇಕೆಂದು ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿರುತ್ತವೆ. ಮೂಲತಃ ಶಿಶುಪಾಲನಾ ರಜೆಯ ಸೌಲಭ್ಯವನ್ನು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ವಿಸ್ತರಿಸಿದ್ದಾಗ್ಯೂ ಏಕಪೋಷಕರಾಗಿರುವ ಪುರುಷ ಸರ್ಕಾರಿ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸುವುದು ನ್ಯಾಯಸಮ್ಮತವಾಗುವುದನ್ನು ಪರಿಗಣಿಸಿ ಸರ್ಕಾರ ಶಿಶುಪಾಲನಾ ರಜೆಯ ಸೌಲಭ್ಯವನ್ನು ಕೆಲವು ಷರತ್ತುಗಳಿಗೊಳಪಟ್ಟು ಒಂಟಿ ಪೋಷಕರಾಗಿರುವ ಅವಿವಾಹಿತ/ ವಿವಾಹ ವಿಚ್ಛೇದಿತ/ ವಿಧುರ ಸರ್ಕಾರಿ ಪುರುಷ ನೌಕರರಿಗೂ ಸಹ ವಿಸ್ತರಿಸಲು ತೀರ್ಮಾನಿಸಿದೆ ಎಂದು ಹೇಳಿದೆ.
ಆದೇಶದ ವಿವರ; ಸರ್ಕಾರಿ ಆದೇಶದಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಸರ್ಕಾರವು ಒಂಟಿ ಪೋಷಕರಾಗಿರುವ ಅವಿವಾಹಿತ/ ವಿವಾಹ ವಿಚ್ಛೇದಿತ/ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ ಒಟ್ಟು 180 ದಿನಗಳಿಗೆ ಮೀರದಂತೆ ಶಿಶುಪಾಲನಾ ರಜೆಯ ಸೌಲಭ್ಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿದೆ.
ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವು ದಿನಾಂಕ 21/06/2021ರ ಸರ್ಕಾರಿ ಆದೇಶ ಸಂಖ್ಯೆ ಆಇ 4(ಇ) ಸೇನಿಸೇ 2021 ರಲ್ಲಿ ವಿಧಿಸಲಾಗಿರುವ ಷರತ್ತುಗಳನ್ನು ಸಂದರ್ಭಾನುಸಾರ ಅನ್ವಯಿಸಿಕೊಂಡು ಶಿಶುಪಾಲನಾ ರಜೆಯನ್ನು ಮಂಜೂರು ಮಾಡತಕ್ಕದ್ದು ಎಂದು ಹೇಳಿದೆ.
ಯಾವುದೇ ಸಂದರ್ಭದಲ್ಲಿ ಶಿಶುಪಾಲನಾ ರಜೆಯನ್ನು ಪಡೆದ ಅವಧಿಯಲ್ಲಿ ಸಂಬಂಧಿತ ಪುರುಷ ನೌಕರರು ವಿವಾಹ ಮಾಡಿಕೊಂಡಲ್ಲಿ ಆ ದಿನಾಂಕದಿಂದ ಶಿಶುಪಾಲನಾ ರಜೆಯು ತಾನಾಗಿಯೇ ರದ್ದುಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ಆದೇಶದ ಉಪಬಂಧಗಳನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯಲ್ಲಿ ಅಳವಡಿಸಲು ಪ್ರತ್ಯೇಕ ತಿದ್ದುಪಡಿಯನ್ನು ತರಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾತೃತ್ವ (ಹೆರಿಗೆ) ರಜೆ ಸೌಲಭ್ಯ; ಕಳೆದ ವಾರ ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ (Contract) ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾತೃತ್ವ (ಹೆರಿಗೆ) ರಜೆ ಸೌಲಭ್ಯವನ್ನು ವಿಸ್ತರಿಸುವ ಕುರಿತು ಆದೇಶವನ್ನು ಹೊರಡಿಸಿತ್ತು.
ಈ ಆದೇಶದಲ್ಲಿ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಾದ ನಿಗಮ, ಮಂಡಳಿ ಸ್ವಾಯತ್ತ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಹಿಳಾ ನೌಕರರಿಗೆ ಷರತ್ತುಗಳಿಗೊಳಪಟ್ಟು ಮಾತೃತ್ವ ರಜೆಯ ಸೌಲಭ್ಯವನ್ನು ವಿಸ್ತರಿಸಲು ಸಹಮತಿಸಿದೆ ಎಂದು ಹೇಳಿತ್ತು.
ಷರತ್ತುಗಳು; ಮಾತೃತ್ವ ರಜೆಯನ್ನು ರಜೆಯ ಪ್ರಾರಂಭದ ದಿನಾಂಕದಿಂದ ಗರಿಷ್ಠ 180 ದಿನಗಳವರೆಗೆ ಮಂಜೂರು ಮಾಡಬಹುದು. ಗರ್ಭಸ್ರಾವ ಅಥವಾ ಗರ್ಭಪಾತದಿಂದ ಗರ್ಭಧಾರಣೆಯು ಪರ್ಯಾವಸಾನಗೊಂಡ ಸಂದರ್ಭದಲ್ಲಿ ಮಾತೃತ್ವ ರಜೆಯು 6 ವಾರಗಳನ್ನು ಮೀರಬಾರದು.
ಇಂತಹ ರಜೆಗಾಗಿ ಸಲ್ಲಿಸಿದ ಅರ್ಜಿಯು ನೋಂದಾಯಿಕ ವೃತ್ತಿನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರದಿಂದ ಸಮರ್ಥಿಕವಾಗಿರಬೇಕು. ಮಾತೃತ್ವ ರಜೆಯ ಮೇಲೆ ತೆರಳುವ ನೌಕರರು ರಜೆಯ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ವೇತನವನ್ನು ರಜೆಯ ಅವಧಿಯಲ್ಲಿ ಪಡೆಯಲು ಅರ್ಹರಿರುತ್ತಾರೆ.
ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಗುತ್ತಿಗೆ ನೌಕರರಿಗೆ ಈ ಮಾತೃತ್ವ ರಜೆಯನ್ನು ಮಂಜೂರು ಮಾಡದಕ್ಕದ್ದಲ್ಲ, ಮಾತೃತ್ವ ರಜೆಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಿತ ಗುತ್ತಿಗೆ ಮಹಿಳಾ ನೌಕರರು ಈ ಕುರಿತು ಸ್ವಯಂ-ಘೋಷಣೆಯನ್ನು ಮಾತೃತ್ವ ರಜೆಯನ್ನು ಮಂಜೂರು ಮಾಡುವ ಅಧಿಕಾರಿಗೆ ಸಲ್ಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.












Click it and Unblock the Notifications