ಏನ್ರೀ ಮೀಡಿಯಾ ಎಂದ ಸಿದ್ದರಾಮಯ್ಯ... ಕೆಲವು ಸುದ್ದಿ ವಾಹಿನಿಗಳ ಬಗ್ಗೆ ಅಸಮಾಧಾನ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕೆಲವೊಂದು ಸುದ್ದಿ ವಾಹಿನಿಗಳ ಬಗ್ಗೆ ಮಾತನಾಡಿದ್ದಾರೆ. ಏನ್ರೀ ಆ ಮೀಡಿಯಾ ಎಂಬರ್ಥದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಈ ಮೂಲಕ ಅವರು ಕೆಲವೊಂದು ಸುದ್ದಿ ವಾಹಿನಗಳ ಬಗ್ಗೆ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ "ಪತ್ರಿಕಾ ದಿನಾಚರಣೆ-2025" ಹಾಗೂ "ನಿಜ ಸುದ್ದಿಗಾಗಿ ಸಮರ" ಸಂವಾದದಲ್ಲಿ ಅವರು ಮಾತನಾಡಿದ್ದಾರೆ. ಸುದ್ದಿ ವಾಹಿನಿ ಹಾಗೂ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಅವರು ಹೇಳಿದ್ದೇನು ಎನ್ನುವುದನ್ನು ನೋಡೋಣ.
ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಎಂದು ಅರ್ಥವಲ್ಲವೇ? ಊಹಾ ಪತ್ರಿಕೋದ್ಯಮವು ಪತ್ರಿಕೋದ್ಯಮ ಮತ್ತು ಸಮಾಜ ಎರಡಕ್ಕೂ ಅಪಾಯ. ಹೀಗಾಗಿ ಪತ್ರಿಕೋದ್ಯಮವು ಇದರಿಂದ ಹೊರಗೆ ಬರಬೇಕಿದೆ ಎಂದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಯಾವುದೇ ಚಾನಲ್ ಗಳು ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಮಾಡಿ ಪ್ರಶ್ನೆ ಮಾಡುವವನಲ್ಲ.
ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ, ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ. ಜನರನ್ನು ಮೌಡ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ? ಈ ಬಗ್ಗೆ ನೀವೆಲ್ಲರೂ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ.
ಮುಂದುವರಿದು ನಾನು ಇಂದು ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಮಾಧ್ಯಮ ಸಂಜೀವಿನಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಪತ್ರಕರ್ತರಿಗೆ ಅನುಕೂಲ ಒದಗಿಸಿದ್ದೇನೆ. ನಮ್ಮ ಪರವಾಗಿ ಬರೆಯಲಿ ಎನ್ನುವ ಕಾರಣದಿಂದ ಇವನ್ನು ಜಾರಿ ಮಾಡಿರುವುದಲ್ಲ. ನೀವೆಲ್ಲ ಸತ್ಯ ಬರೆಯಿರಿ, ಜನರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಇರಬೇಕು ಎಂಬುದು ನಮ್ಮ ಆಶಯ.
ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಎಚ್ಚರಿಸುವ, ಸ್ವಾತಂತ್ರ್ಯ ಹೋರಾಟದ ಪರವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು. ಇಂದು ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸಬೇಕು.
ಸಂವಿಧಾನದ ಮೌಲ್ಯಗಳು ಮತ್ತು ಸತ್ಯವನ್ನು ಮರೆಮಾಚುವ ಕೆಲಸ ಆಗಬಾರದು. ಎಲ್ಲ ಜನರಿಗೂ ಸಮಾನ ಅವಕಾಶ ಮತ್ತು ಜಾತಿ-ವರ್ಗ ರಹಿತ ಸಮಾಜ ಸೃಷ್ಟಿಯಾಗಬೇಕು ಎನ್ನುವುದು ಸಂವಿಧಾನದ ಮೌಲ್ಯ. ಇದನ್ನು ಎತ್ತಿ ಹಿಡಿಯುವುದು ಪತ್ರಿಕಾ ವೃತ್ತಿಯ ಜವಾಬ್ದಾರಿ. ದ್ವೇಷದ, ಪ್ರೀತಿಯಿಲ್ಲದ ಸಮಾಜ ಸೃಷ್ಟಿಸುವ ಪ್ರಯತ್ನಕ್ಕೆ ಮಾಧ್ಯಮಗಳು ಬೆಂಬಲಿಸಬಾರದು. ನನ್ನ ಮಾತುಗಳನ್ನು ಕೇವಲ ಪಕ್ಷದ ಚೌಕಟ್ಟಿನಲ್ಲಿ ಮಾತ್ರ ನೋಡದೆ ಸಮಾಜ ಮುಖಿಯಾಗಿ ಕೂಡ ನೋಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ನಟ ದರ್ಶನ್ ಅವರು ಏನ್ರೀ ಮೀಡಿಯಾ ಎಂದು ಹೇಳಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದಿಷ್ಟವಾಗಿ ಕೆಲವು ಸುದ್ದಿ ವಾಹಿನಿ & ಮಾಧ್ಯಮಗಳ ಕಾರ್ಯವೈಖರಿಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.












Click it and Unblock the Notifications