ಪಾತ್ರ ತೊಳೆದೆ, ಎಮ್ಮೆ ಕಾಯ್ದೆ: ಸಿಎಂ ಸಿದ್ದು ತೆರೆದಿಟ್ಟ ತನ್ನ ವಿದ್ಯಾರ್ಥಿ ಜೀವನ

Posted By:
Subscribe to Oneindia Kannada

ಆರೋಪ, ಪ್ರತ್ಯಾರೋಪ, ಪ್ರತಿಭಟನೆ, ಸಭಾತ್ಯಾಗ ಮುಂತಾದವುಗಳಿಗಷ್ಟೇ ಸೀಮಿತದಂತಾಗಿರುವ ವಿಧಾನಸಭಾ ಕಲಾಪ ಬುಧವಾರ (ಮಾ 30) ಅಪರೂಪಕ್ಕೆ ಎನ್ನುವಂತೆ ಗಂಭೀರ ಚರ್ಚೆಗೆ ಸಾಕ್ಷಿಯಾಯಿತು.

ತಾನು ವಿದ್ಯಾರ್ಥಿ ಜೀವನದಲ್ಲಿ ಪಟ್ಟ ಪರಿಶ್ರಮ, ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಪಡಬಾರದು ಎನ್ನುವ ಉದ್ದೇಶದಿಂದ ಕೆಲವೊಂದು ಯೋಜನೆಗಳನ್ನು ಜಾರಿಗೊಳಿಸಿದ್ದೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದಾರೆ. (ಅಡಕತ್ತರಿಯಲ್ಲಿ ಸಿಎಂ ಸಿದ್ದು)

ಪಾತ್ರೆ ತೊಳೆದಿದ್ದೇನೆ, ಎಮ್ಮೆ ಕಾಯುತ್ತಾ ಓದಿ, ರಾಜಕೀಯಕ್ಕೆ ಬಂದು ಹೋರಾಟ ನಡೆಸಿ ಮುಖ್ಯಮಂತ್ರಿಯಾದವನು ನಾನು, ಬಾಲ್ಯದಿಂದ ಚಿನ್ನದ ಸ್ಪೂನ್ ಬಾಯಿಗಿಟ್ಟುಕೊಂಡು ಬಂದವನಲ್ಲ ನಾನು ಎಂದು ಮುಖ್ಯಮಂತ್ರಿಗಳು ತನ್ನ ವಿದ್ಯಾರ್ಥಿ ಜೀವನದ ಬದುಕನ್ನು ಸದನದಲ್ಲಿ ತೆರೆದಿಟ್ಟರು.

ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಮುಖ್ಯಮಂತ್ರಿಗಳು, ಮುಂಬರುವ ಅಸೆಂಬ್ಲಿ ಚುನಾವಣೆಯನ್ನೂ ನಾವೇ ಗೆಲ್ಲುತ್ತೇವೆ, ನೀವು ಈಗ ಎಲ್ಲಿ ಕೂತಿದ್ದೀರೋ, ಅಲ್ಲೇ ಕೂತಿರುತ್ತೀರಿ ಎಂದು ಬಿಜೆಪಿಯವರನ್ನು ಕಿಚಾಯಿಸಿದರು. (ಸಿದ್ದು, ಸಚಿವರ ಪ್ರಯಾಣ ಭತ್ಯೆ 11 ಕೋಟಿ)

ಕೆಲವೊಂದು ಯೋಜನೆಯನ್ನು ಸರಕಾರ ಜಾರಿಗೆ ತಂದ ಹಿಂದೆ ಕೆಲವೊಂದು ನನ್ನ ವೈಯಕ್ತಿಕ ಕಷ್ಟಕಾರ್ಪಣ್ಯಗಳಿವೆ, ಅದು ಇಂದಿನ, ಮುಂದಿನ ಪೀಳಿಗೆಗಳಿಗೆ ಪುನರಾವರ್ತನೆ ಆಗುವುದು ಬೇಡ ಎನ್ನುವುದು ನನ್ನ ಉದ್ದೇಶ ಎನ್ನುತ್ತಾ ಸಿದ್ದರಾಮಯ್ಯ ತನ್ನ ವಿದ್ಯಾರ್ಥಿ ಜೀವನದ ಬಗ್ಗೆ ಹೇಳಲಾರಂಭಿಸಿದರು. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ನನ್ನಪ್ಪ ನನ್ನನ್ನು ಹಾಸ್ಟೆಲಿಗೆ ಹಾಕಿಲ್ಲ

ನನ್ನಪ್ಪ ನನ್ನನ್ನು ಹಾಸ್ಟೆಲಿಗೆ ಹಾಕಿಲ್ಲ

ಹಾಸ್ಟೆಲ್ ಗೆ ಹಾಕಿದರೆ ಕಷ್ಟದ ಬಗ್ಗೆ ಗೊತ್ತಾಗುವುದಿಲ್ಲ ಎಂದು ನನ್ನಪ್ಪ ಹಾಸ್ಟೇಲಿಗೆ ಹಾಕಿರಲಿಲ್ಲ. ಗೆಳೆಯರ ಜೊತೆ ರೂಂನಲ್ಲಿ ಇದ್ದವನು ನಾನು. ಮೂರು, ನಾಲ್ಕು ಸ್ನೇಹಿತರು ಒಟ್ಟಾಗಿ ರೂಂನಲ್ಲಿ ಇರುತ್ತಿದ್ದೆವು ಎಂದು ಮುಖ್ಯಮಂತ್ರಿಗಳು ಮೈಸೂರಿನ ವಿವಿಯಲ್ಲಿ ವಿಜ್ಞಾನ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಾನು ಪಾತ್ರ ತೊಳೆಯುತ್ತಿದ್ದೆ

ನಾನು ಪಾತ್ರ ತೊಳೆಯುತ್ತಿದ್ದೆ

ರೂಂನಲ್ಲಿ ಎಲ್ಲರೂ ಕೆಲಸ ಹಂಚಿಕೊಂಡು ವಿದ್ಯಾರ್ಥಿ ಜೀವನ ನಡೆಸಿಕೊಂಡು ಬಂದವರು. ಒಬ್ಬರು ಅಡುಗೆ ಮಾಡಿದರೆ, ಇನ್ನೊಬ್ಬರು ನೀರು ತರುತ್ತಿದ್ದರು. ಕೆಲವೊಮ್ಮೆ ಹೋಟೇಲ್ ನಿಂದ ಸಾಂಬಾರ್ ತರುತ್ತಿದ್ದೆವು. ನಾನು ಪಾತ್ರ ತೊಳೆಯುತ್ತಿದ್ದೆ ಎಂದು ಸಿದ್ದರಾಮಯ್ಯ, ತನ್ನ ವಿದ್ಯಾರ್ಥಿ ಜೀವನವನ್ನು ಸದನದಲ್ಲಿ ಮೆಲುಕು ಹಾಕಿಕೊಂಡಿದ್ದಾರೆ.

ಎಮ್ಮೆ ಕಾಯ್ತಾ ಇದ್ದೆ

ಎಮ್ಮೆ ಕಾಯ್ತಾ ಇದ್ದೆ

ಹಾಸ್ಟೆಲ್ ನಿಂದ ಊರಿಗೆ ಬಂದಾಗ ಎಮ್ಮೆ ಕಾಯುತ್ತಿದ್ದೆ. ಮನೆಯಲ್ಲಿ ಎಂಟರಿಂದ ಒಂಬತ್ತು ಎಮ್ಮೆಗಳಿದ್ದವು. ಈಗ ಒಂದೂ ಇಲ್ಲ ಬಿಡಿ.. ಎಮ್ಮೆಗಳಿಗೆ ಮೇವು, ನೀರು ಹಾಕುವ ಜವಾಬ್ದಾರಿಯನ್ನು ಅಪ್ಪ ನನಗೆ ವಹಿಸಿದ್ದರು. ನಾನೇನೂ ನನ್ನ ಸಹದ್ಯೋಗಿ ದೇಶಪಾಂಡೆ ರೀತಿಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದು ಬಂದವನಲ್ಲ - ಸಿದ್ದರಾಮಯ್ಯ.

ಆರ್ ವಿ ದೇಶಪಾಂಡೆ

ಆರ್ ವಿ ದೇಶಪಾಂಡೆ

ನಿಮ್ಮ ತಂದೆ ಲಾಯರ್, ಹಾಗಾಗಿ ನಿಮಗೆ ಈ ರೀತಿಯ ಕಷ್ಟಗಳು ಎದುರಾಗಲಿಲ್ಲ, ಹಾಸ್ಟೆಲ್ ನಲ್ಲೂ ಇದ್ದವರಲ್ಲ ಎಂದು ತನ್ನದೇ ಪಕ್ಷದ ಮತ್ತು ಇತ್ತೀಚೆಗೆ ನಡೆದ ಬಂಡವಾಳ ಹೂಡಿಕೆ ಸಮಾವೇಶ ಯಶಸ್ವಿಯಾಗಲು ಕಾರಣರಾದ ಆರ್ ವಿ ದೇಶಪಾಂಡೆಯವರತ್ತ ಕೈತೋರಿಸುತ್ತಾ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಅವರಪ್ಪ ದೊಡ್ಡ ಲ್ಯಾಂಡ್ ಲಾರ್ಡ್ ಕೂಡಾ ಆಗಿದ್ದರು ಬಿಡಿ ಎಂದು ಕಾಗೋಡು ತಿಮ್ಮಪ್ಪ ಧ್ವನಿ ಸೇರಿಸಿದರು.

ಕಾಗೋಡು ಮಧ್ಯಪ್ರವೇಶ

ಕಾಗೋಡು ಮಧ್ಯಪ್ರವೇಶ

ಮುಖ್ಯಮಂತ್ರಿಗಳು ತನ್ನ ವಿದ್ಯಾರ್ಥಿ ಜೀವನದ ಬಗ್ಗೆ ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮೈಸೂರಿನಲ್ಲಿ ಕುರುಬರಿಗಾಗಿ ಹಾಸ್ಟೆಲ್ ಇತ್ತಲ್ವಾ, ನೀವ್ಯಾಕೆ ಅಲ್ಲಿಗೆ ಸೇರಿಲ್ಲಾ ಎಂದು ಮುಖ್ಯಮಂತ್ರಿಗಳನ್ನು ಕಿಚಾಯಿಸಿದರು.

ಸಿದ್ದರಾಮಯ್ಯ ಉತ್ತರ

ಸಿದ್ದರಾಮಯ್ಯ ಉತ್ತರ

ಅದೇ ಸ್ವಾಮಿ ನಾನು ಹೇಳಿದ್ದು, ನಮ್ಮಪ್ಪ ಹಾಸ್ಟೆಲ್ ಸೇರಿಸಿಲ್ಲ. ಕುಡಿಯೋಕೆ ಮಜ್ಜಿಗೆ ಸಿಕ್ತಾ ಇರ್ಲಿಲ್ಲಾ, ಮಕ್ಕಳಿಗೆ ಹಾಲು ಸಿಗುವುದಂತೂ ದೂರದ ಮಾತಾಗಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅನುಭವಿಸುವ ಕಷ್ಟ ಏನು ಎಂಬುದನ್ನು ಸ್ವತಃ ಅನುಭವಿಸಿದ್ದೇನೆ. ನನ್ನ ಅನುಭವದ ಹಿನ್ನೆಲೆಯಲ್ಲಿ, ಅದಕ್ಕಾಗಿಯೇ ವಿದ್ಯಾಸಿರಿ, ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದು ಎಂದು ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದಾರೆ.

ಕಡಗೋಲೂ ಇಲ್ಲ, ಬೀಸು ಕಲ್ಲೂ ಇಲ್ಲ

ಕಡಗೋಲೂ ಇಲ್ಲ, ಬೀಸು ಕಲ್ಲೂ ಇಲ್ಲ

ಮನೆಗಳಲ್ಲೀಗ ಮಜ್ಜಿಗೆ ಕಡಿಯಲಿಕ್ಕೆ ಕಡಗೋಲು ಇಲ್ಲ, ಬೀಸುವ ಕಲ್ಲು, ಒನಕೆ ಯಾವುದೂ ಇಲ್ಲ, ಏನಂತೀರಾ ಉಮಾಶ್ರೀ ಎಂದು ಸಚಿವರತ್ತ ತಿರುಗಿ ಕೇಳಿದಾಗ, ಉತ್ತರಿಸಿದ ಉಮಾಶ್ರೀ ‘ನಾನೂ ಕೂಡಾ ರಾಗಿ ಬೀಸಿರುವೆ, ನನ್ನ ತಾಯಿ ಬೀಸುವ ಕಲ್ಲಿನ ಮುಂದೆ ಕೂರಿಸುತ್ತಿದ್ದಳು. ಆದರೆ, ಹಿಟ್ಟಿನ ಕೋಲೊಂದನ್ನು ಬಿಟ್ಟು ಉಳಿದೆಲ್ಲವೂ ಬಹುತೇಕ ಮನೆಗಳಿಂದ ಕಾಣೆಯಾಗಿವೆ ಸರ್' ಎಂದು ಅವರು ಉತ್ತರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah explained the difficulties he faced during his student life in Mysuru. He was talking in Karnataka Assembly budget session 2016.
Please Wait while comments are loading...