ಚನ್ನಪಟ್ಟಣ ಉಪ ಚುನಾವಣೆ: ಡಿ.ಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ, ಕುಟುಂಬದಿಂದ ಸ್ಪರ್ಧೆ ಏನಂದ್ರು
ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಹೆಚ್ಚಾಗ್ತಿದೆ. ಮುಡಾ, ವಾಲ್ಮೀಕಿ ಹಗರಣ ಹಾಗೂ ಇದೀಗ ಹಳೇಹುಬ್ಬಳ್ಳಿ ಪ್ರಕರಣ ಹಿಂಪಡೆದಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಎದುರಾಗಿದೆ. ಈ ನಡುವೆ ರಾಜ್ಯದಲ್ಲಿ ಉಪ ಚುನಾವಣೆ ದಿನಾಂಕ ನಿಗದಿ ಸಮೀಪವಾಗುತ್ತಿದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದರೂ, ಚನ್ನಪಟ್ಟಣ ಉಪ ಚುನಾವಣೆ ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯತ್ತಿದ್ದರೂ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಎಲ್ಲ ಪಕ್ಷಗಳಿಗೂ ಹಲವು ಕಾರಣಗಳಿಂದ ಜಿದ್ದಾಜಿದ್ದಿನ ಕಣವಾಗಿ ಬದಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ಇತ್ತೀಚಿನ ದಿನಗಳಲ್ಲಿ ಭಾರೀ ವಾಕ್ಸಮರ ನಡೆಯುತ್ತಿತ್ತು. ಅದು ಇದೀಗ ಹೊಸ ಹಂತವನ್ನು ತಲುಪಿದೆ. ಈ ಕ್ಷೇತ್ರದಲ್ಲಿ ಪಕ್ಷಗಳಿಗಿಂತಲೂ ರಾಜಕೀಯ ನಾಯಕರ ಪ್ರತಿಷ್ಠೆಯ ಪ್ರಶ್ನೆಯೂ ಎದುರಾಗಿದೆ.

ಚನ್ನಪಟ್ಟಣ ಉಪಚುನಾವಣೆಯ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೊಸ ಹೇಳಿಕೆಗಳನ್ನು ಕೊಡುತ್ತಲ್ಲೇ ಇದ್ದಾರೆ. ಇದೀಗ ಚನ್ನಪಟ್ಟಣದಲ್ಲಿ ರಾಜ್ಯ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಅತ್ಯಂತ ಕಡಿಮೆ ಮತದಾನವಾಗಿತ್ತು. ಹೀಗಾಗಿ, ಚನ್ನಪಟ್ಟಣ ಉಪ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಮುಂದುವರಿದು ವಿರೋಧ ಪಕ್ಷಗಳು ಯಾರನ್ನಾದರೂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ. ಇದು ವ್ಯಕ್ತಿಯ ಮೇಲೆ ನಡೆಯುತ್ತಿರುವ ಚುನಾವಣೆಯಲ್ಲ. ಪಕ್ಷ ಹಾಗೂ ಸಿದ್ಧಾಂತದ ಮೇಲೆ ಈ ಚುನಾವಣೆ ನಡೆಯುತ್ತಿದೆ. ಇನ್ನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡಲಿದ್ದೇನೆ ಎಂದು ಪುನರುಚ್ಚರಿಸಿದ ಅವರು. ಇದರಲ್ಲಿ ಯಾವುದೇ ಅನುಮಾನ ಇಲ್ಲ. ನನ್ನ ಕುಟುಂಬದಿಂದ ಯಾರೂ ಸಹ ಈ ಚುನಾವಣೆಯಲ್ಲಿ ಕಣಕ್ಕೆ ಇಳಿಯುವುದಿಲ್ಲ ಎಂದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕಣದಲ್ಲಿ ಸ್ಪರ್ಧಿಸಿದ್ದ ಮಾಜಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ತಮ್ಮ ಡಿ.ಕೆ ಸುರೇಶ್ ಅವರೇ ಈ ಬಾರಿಯ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಪ್ರಾರಂಭದಲ್ಲಿ ಇದೇ ಚರ್ಚೆ ರಾಜಕೀಯ ವಲಯದಲ್ಲೂ ನಡೆದಿತ್ತು. ತಮ್ಮನ ಸೋಲಿಗೆ ಡಿ.ಕೆ ಶಿವಕುಮಾರ್ ಅವರು ಜೆಡಿಎಸ್ ವಿರುದ್ಧ ಈ ಮೂಲಕ ಸೇಡ ತೀರಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಈಗ ನಾನೇ ಸ್ಪರ್ಧಿ ಎಂದು ಡಿ.ಕೆ ಶಿವಕುಮಾರ್ ಅವರು ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ.
ಮೂರು ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಉಪ ಚುನಾವಣೆ ನಡೆಯಲಿದೆ. ಅದರಲ್ಲಿ ಪ್ರಮುಖವಾಗಿ ಚನ್ನಪಟ್ಟಣ ಇದ್ದರೆ. ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲೂ ಉಪ ಚುನಾವಣೆ ನಡೆಯಲಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿದ್ದ ಶಾಸಕರು ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ, ಈ ಮೂರು ಕ್ಷೇತ್ರಗಳ ಶಾಸಕ ಸ್ಥಾನ ತೆರವಾಗಿದ್ದು, ಉಪ ಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳಲ್ಲಿ ಚನ್ನಪಟ್ಟಣ ದಕ್ಷಿಣ ಕರ್ನಾಟಕದಲ್ಲಿ ಇದ್ದರೆ, ಉತ್ತರ ಕರ್ನಾಟಕದ ಶಿಗ್ಗಾವಿ ಹಾಗೂ ಸಂಡೂರಿನಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.












Click it and Unblock the Notifications