DK Shivakumar: ಚನ್ನಪಟ್ಟಣ ಚುನಾವಣೆಗೆ ನಾನೇ ಅಭ್ಯರ್ಥಿ- ಡಿಕೆ ಶಿವಕುಮಾರ್ ಸ್ಪಷ್ಟನೆ
ಮೈಸೂರು ಅಕ್ಟೋಬರ್ 13: ಮುಂಬರುವ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ರಾಜಕೀಯ ಪಕ್ಷಗಳ ತಯಾರಿ ಜೋರಾಗಿದೆ. ಕಾಂಗ್ರೆಸ್‌ನಿಂದ ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಿಂದ ಯಾರು ಬೇಕಾದರೂ ನಿಲ್ಲಲಿ. ಆದರೆ ಚನ್ನಪಟ್ಟಣದಲ್ಲಿ ನಾವು ವ್ಯಕ್ತಿ ಮೇಲೆ ಚುನಾವಣೆ ಮಾಡಲ್ಲ. ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ಮಾಡಲು ಹೊರಟಿದ್ದೇವೆ. ಚನ್ನಪಟ್ಟಣದಿಂದ ನಾನೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಹೌದು... ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಆದರೆ ಈ ಸಂಬಂಧ ನಿರಂತರ ಸಭೆಗಳನ್ನು ನಡೆಸಲಾಗುತ್ತಿದೆ. ಇತ್ತ ಕಾಂಗ್ರೆಸ್ ಕೂಡ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಸಾಕಷ್ಟು ತಯಾರಿಯನ್ನ ನಡೆಸಿದೆ.

ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ' ಎಂಪಿ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಹಿನ್ನಡೆ ಆಗಿತ್ತು. ಎಂಎಲ್‌ಎ ಚುನಾವಣೆಯಲ್ಲಿಯೂ ಹೆಚ್ಚು ಹಿನ್ನಡೆಯಾಗಿತ್ತು. ಈಗ ನಮ್ಮ ಬೇಸ್ ಸ್ಟ್ರಾಂಗ್ ಮಾಡುತ್ತಿದ್ದೇವೆ. ಜನ ಓಟ್ ಹಾಕಿ ಗೆಲ್ಲಿಸುತ್ತಾರೆಂಬ ನಂಬಿಕೆ ನನಗಿದೆ' ಎಂದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಮಾತನಾಡಿದ ಅವರು, 'ಇನ್ನೂ ಹತ್ತು ವರ್ಷ ಅವರೇ ಸಿಎಂ ಆಗಿ ಇರುತ್ತಾರೆ. ಬಿಜೆಪಿಯವರು ಇನ್ನೂ ಹತ್ತು ವರ್ಷ ಇದೇ ರೀತಿ ಹೇಳ್ತಾನೇ ಇರ್ತಾರೆ' ಎಂದರು. ಇನ್ನೂ ಬಾಬಾ ಸಿದ್ದಿಕಿ ಬಗ್ಗೆ ಮಾತನಾಡಿ, ' ಬಾಬಾ ಸಿದ್ದಿಕಿ ಅವರು ನಮಗೂ ಆತ್ಮೀಯರು. ನಮ್ಮ ಪಕ್ಷದಲ್ಲಿ ಇದ್ದವರು. ಮಂತ್ರಿ ಸಹ ಆಗಿದ್ದರು. ಈ ಘಟನೆ ಮುಂಬೈ ಕಾನೂನು ವ್ಯವಸ್ಥೆ ಹಾಳಾಗಿದೆ ಎನ್ನುವುದನ್ನು ತೋರಿಸುತ್ತದೆ. ಮುಂದೆ ಚುನಾವಣೆ ಟೈಂ ಸಹ ಇದೆ. ಆದ್ದರಿಂದ ಶಾಂತಿ ಕಾಪಾಡಬೇಕಾಗಿದೆ. ಈ ಘಟನೆ ಖಂಡನೀಯ' ಎಂದರು.
ಇನ್ನೂ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಅವರ ಪಕ್ಷದಲ್ಲಿ ಯಾರು ನಿಲ್ತಾರೆ ಅನ್ನೋದು ನಮಗೆ ಬೇಡ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಾನು ಈ ಬಗ್ಗೆ ಮಾತನಾಡಲ್ಲ. ಅವರು ಬಿಜೆಪಿ ಅಭ್ಯರ್ಥಿಯನ್ನಾದರೂ ಮಾಡಿಕೊಳ್ಳಲಿ, ಜೆಡಿಎಸ್ ಅಭ್ಯರ್ಥಿಯನ್ನಾದರೂ ಮಾಡಿಕೊಳ್ಳಲಿ' ಎಂದರು.
ಮೈತ್ರಿ ಪಕ್ಷದಿಂದ ಅಭ್ಯರ್ಥಿ ಯಾರು?
ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿಖರವಾಗಿಲ್ಲ. ಈ ಬಗ್ಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, 'ಉಪಚುನಾವಣೆಯಲ್ಲಿ ಕೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡುವ ಕುರಿತು ಈ ಕ್ಷಣದವರೆಗೆ ಯಾವುದೇ ಒಪ್ಪಂದ ಆಗಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಎರಡು ಸಲ ಗೆದ್ದಿದೆ. ಹಾಗಾಗಿ, ಕಾರ್ಯಕರ್ತರ ಒಮ್ಮತವಿಲ್ಲದೆ ನಾನು ಟಿಕೆಟ್ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ನಿಖಿಲ್ ಸ್ಪರ್ಧೆ ಬಗ್ಗೆಯೂ ತೀರ್ಮಾನಿಸಿಲ್ಲ' ಎಂದು ಅವರು ಹೇಳಿದರು.
ಇನ್ನೂ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಾ ಚುನಾವಣೆಗೆ ಕಾರ್ಯಕರ್ತರನ್ನು ಅಣಿಗೊಳಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಮುಖಂಡರು ಚನ್ನಪಟ್ಟಣದಲ್ಲಿ ಸಭೆ ನಡೆಸಿ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡುವಂತೆ ತಮ್ಮ ಪಕ್ಷದ ನಾಯಕರನ್ನು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.












Click it and Unblock the Notifications