ಚನ್ನಪಟ್ಟಣದಲ್ಲಿ ರೇವತಿ ಭರ್ಜರಿ ಪ್ರಚಾರ: ನಿಖಿಲ್ ಅಣ್ಣಗೆ ಗೆಲುವು ನಿಶ್ಚಿತ ಎಂದ ವಿದ್ಯಾರ್ಥಿಗಳು
ರಾಮನಗರ, ನವೆಂಬರ್ 11: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಲು ಈ ಬಾರಿ ನಿಖಿಲ್ ಧರ್ಮಪತ್ನಿ ರೇವತಿ ನಿಖಿಲ್ ಕುಮಾರಸ್ವಾಮಿ ಸಹ ಚುನಾವಣಾ ಕಣಕ್ಕಿಳಿದಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಭವಾನಿ ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಮಾತ್ರ ಅಭ್ಯರ್ಥಿ ಆಗುವುದರ ಜೊತೆಗೆ ರಾಜಕೀಯ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದರು. ಇದೀಗ ದೇವೇಗೌಡರ ಕುಟುಂಬದ ಇನ್ನೊಬ್ಬ ಸೊಸೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು ಇದೇ ಮೊದಲ ಬಾರಿ ರೇವತಿ ನಿಖಿಲ್ ಸಹ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಅವರ ಧರ್ಮಪತ್ನಿ ರೇವತಿ ನಿಖಿಲ್ ಕುಮಾರಸ್ವಾಮಿ ಅವರು ಪಟ್ಟಣದಲ್ಲಿ ಪ್ರಚಾರ ನಡೆಸಿದರು.

ಸೋಮವಾರ ಬೆಳ್ಳಂಬೆಳಗ್ಗೆಯೇ ರೇವತಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೀಪ ಅವರು ನಿಖಿಲ್ ಅವರ ಪರವಾಗಿ ಮತ ಕೇಳಿದರು. ಈ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು, ಪಟ್ಟಣದ ಸಾರ್ವಜನಿಕರನ್ನು ಭೇಟಿಯಾದ ರೇವತಿ ಅವರು, ಕರಪತ್ರಗಳನ್ನು ನೀಡಿ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.
ಸೆಲ್ಫಿ ತೆಗೆದುಕೊಂಡ ವಿದ್ಯಾರ್ಥಿನಿಯರು
ರೇವತಿ ನಿಖಿಲ್ ಕುಮಾರಸ್ವಾಮಿ ರೈಲ್ವೆ ನಿಲ್ದಾಣದ ಬಳಿ ಟೀ ಸವಿದು ಪ್ರಚಾರ ಮಾಡಿದರು. ಅಲ್ಲಿನ ಸ್ಥಳೀಯರಿಗೆ ಕರಪತ್ರ ನೀಡಿ ನಿಖಿಲ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಪ್ರಚಾರದ ವೇಳೆ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು. ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡರು, ವಿದ್ಯಾರ್ಥಿಗಳು ಸಹ ರೇವತಿ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.

ಈ ವೇಳೆ ವಿದ್ಯಾರ್ಥಿಗಳು, 'ನಿಖಿಲ್ ಅಣ್ಣಗೆ ನೂರಕ್ಕೆ ನೂರರಷ್ಟು ಗೆಲುವು ನಿಶ್ಚಿತ. ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆಗೆ ಹೋಗುತ್ತಾರೆ. ಯುವ ಪೀಳಿಗೆಗೆ ನಿಖಿಲ್ ಅಣ್ಣ ಅಂತವರು ರಾಜಕೀಯದಲ್ಲಿ ಇರಬೇಕು. ವಿಧಾನಸಭೆಯಲ್ಲಿ ಅವರು ಯುವ ಸಮುದಾಯದ ಪರವಾಗಿ ಕೆಲಸ ಮಾಡುತ್ತಾರೆ' ಎಂದು ಭರವಸೆ ವ್ಯಕ್ತಪಡಿಸಿದರು.
ಇನ್ನು ಈ ಬಾರಿ ಚನ್ನಪಟ್ಟಣ ಚುನಾವಣೆಯ ಗೆಲುವಿನ ಪಣತೊಟ್ಟಿರುವ ದೇವೇ ಗೌಡರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿ ಹಳ್ಳಿಯ ಬೂತ್‌ಗೆ ತಲುಪಲು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ, ಅನಿತಾ ಕುಮಾರಸ್ವಾಮಿ ಪ್ರತ್ಯೇಕವಾಗಿ ಪ್ರತಿ ಹೋಬಳಿಯಲ್ಲಿ ಪ್ರಚಾರ ನಡೆಸಿದ್ದಾರೆ.












Click it and Unblock the Notifications