ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಸಿಗದ ಸಹಕಾರ: ಡಿ.ಕೆ. ಶಿವಕುಮಾರ್ ಬೇಸರ
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಈ ಯೋಜನೆಗೆ ಅಧಿಸೂಚನೆ ಹೊರಡಿಸುತ್ತಿಲ್ಲ. ನೆರೆ ರಾಜ್ಯಗಳು ದಾವೆಗಳ ಮೂಲಕ ಯೋಜನೆ ಜಾರಿಗೆ ಅಡಚಣೆ ಉಂಟು ಮಾಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಚುನಾವಣೆ ಪ್ರಚಾರದ ವೇಳೆ ನಾನು ಹೇಳಿದ್ದೆ. ಈ ಕೈಗೆ ಅಧಿಕಾರ ಸಿಕ್ಕಿದ ಕಾರಣಕ್ಕೆ ಇಂದು ದೊಡ್ಡ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ನಿಮ್ಮ ಜಿಲ್ಲೆಯಲ್ಲಿ ಕೃಷ್ಣ ಜಲಭಾಗ್ಯ ನಿಗಮದಲ್ಲಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆದ್ಯತೆ ನೀಡಲಾಗಿದೆ. ನಾನು ಸಚಿವನಾದ ಬಳಿಕ 3,700 ಕೋಟಿ ಕೆಲಸವನ್ನು ಈ ಜಿಲ್ಲೆಗೆ ಮಂಜೂರು ಮಾಡಿದ್ದೇವೆ.

1.19 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸಲ್ಲಿಸಲಾಗಿದೆ. ಯುಕೆಪಿ 3ನೇ ಹಂತದಲ್ಲಿ ನಿಮಗೆ 80 ಟಿಎಂಸಿ ನೀರು ಲಭ್ಯವಾಗುತ್ತದೆ. ಈ ಯೋಜನೆಗೆ ಅಧಿಸೂಚನೆ ಹೊರಡಿಸಿ ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ. ನೆರೆ ರಾಜ್ಯಗಳು ನಮ್ಮ ಮೇಲೆ ದಾವೆ ಹೂಡಿ ಅಡ್ಡಪಡಿಸುತ್ತಿವೆ. ಆದರೂ ಕೆರೆಗಳನ್ನು ತುಂಬಿಸುವ ಮೂಲಕ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಭಾಗದಲ್ಲಿ 21 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇತ್ತೀಚೆಗೆ ಈ ಭಾಗದ ನಮ್ಮ ಶಾಸಕರ ಒತ್ತಡದ ಮೇರೆಗೆ ನಾನು ಹಾಗೂ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಯುಕೆಪಿ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ್ದೇವೆ. ಕಳೆದ ಬೊಮ್ಮಾಯಿ ಅವರ ಸರ್ಕಾರ ಈ ಭಾಗದ ರೈತರಿಗೆ 20-25 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಲು ನಿರ್ಧರಿಸಿತ್ತು. 1,33,867 ಎಕರೆ ಮುಳುಗಡೆಯಾಗಲಿದ್ದು, ನಮ್ಮ ಸರ್ಕಾರ ಪ್ರತಿ ಎಕರೆಗೆ 30-40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 70 ಸಾವಿರ ಕೋಟಿ ವಿತರಣೆ ಮಾಡಲಾಗುವುದು. ಇನ್ನು ಕಾಲುವೆ ಭೂ ಸಂತ್ರಸ್ಥರಿಗೆ 25-30 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತಂದು, ರೈತರಿಗೆ ಶಕ್ತಿ ತುಂಬಲು ಈ ಕೃಷ್ಣ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದೇವೆ ಎಂದರು.
ಈ ಭಾಗದ ಅನೇಕ ರೈತರು ನ್ಯಾಯಾಲಯದ ಮೇಟ್ಟಿಲೇರಿದ್ದು, 29 ಸಾವಿರ ಪ್ರಕರಣಗಳು ಇವೆ. ಅಲ್ಲಿ ನಿಮಗೆ ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಭಾವಿಸಿದ್ದೀರಿ. ಅದು ಸಾಧ್ಯವಿಲ್ಲ. ಕೋಟಿಗಟ್ಟಲೆ ಪರಿಹಾರ ನೀಡಬೇಕಾದರೆ, ಯಾವುದೇ ಸರ್ಕಾರ ಈ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಒಪ್ಪಿತ ಭೂಸ್ವಾಧೀನ ಪ್ರಕ್ರಿಯೆ ಮಾಡಬೇಕು ಎಂದು ನಿಮ್ಮ ನಾಯಕರ ಒತ್ತಡದ ಮೇರೆಗೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಬಿದ್ದರೂ ನಾವು ಈ ತೀರ್ಮಾನ ಮಾಡಿದ್ದೇವೆ. ನೀವೆಲ್ಲರೂ ಸರ್ಕಾರದ ಪರಿಹಾರ ಪಡೆದು ಭೂಮಿಯನ್ನು ನೀಡಬೇಕು ಎಂದು ಮನವಿ ಮಾಡಿದರು.
ನಿಂಬೆ ನಾಡಿಗೆ ನನ್ನನ್ನು ಕರೆಸಿರುವುದಕ್ಕೆ ಬಹಳ ಸಂತೋಷವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಹಾಗೂ ಗೋಲಗುಂಬಜ್ ಮಾದರಿ ಸ್ಮರಣಿಕೆ ನೀಡಿ ನನಗೆ ಇಂದು ಸನ್ಮಾನಿಸಲಾಗಿದೆ. ಎಲ್ಲಾ ಜಾತಿ, ಸಮುದಾಯ, ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿರುವುದೇ ಈ ಸರ್ಕಾರದ ಶಕ್ತಿ. ಬುದ್ಧಿ ಇದ್ದವರು ಯುದ್ಧ ಗೆಲ್ಲುತ್ತಾರೆ. ಗುಣ ಇದ್ದವರು ಹೃದಯವನ್ನು ಗೆಲ್ಲುತ್ತಾರೆ. ತಾಳ್ಮೆ ಇದ್ದವರು ಜಗತ್ತನ್ನೇ ಗೆಲ್ಲುತ್ತಾರೆ ಎಂದು ಹೇಳಿದರು.
ಸರ್ವಜ್ಞ ಅವರು ತಮ್ಮ ವಚನದಲ್ಲಿ ನಿಂಬೆಗಿಂತ ಶ್ರೇಷ್ಠ ಹುಳಿ ಬೇರೊಂದಿಲ್ಲ, ದುಂಬಿಗಿಂತ ಶ್ರೇಷ್ಠ ಕಪ್ಪು ಬಣ್ಣ ಬೇರೊಂದಿಲ್ಲ, ಶಿವನಿಗಿಂತ ದೊಡ್ಡ ದೇವರಿಲ್ಲ, ಅದೇ ರೀತಿ ಮನುಷ್ಯನಲ್ಲಿ ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ ಎಂದು ಬಣ್ಣಿಸಿದ್ದಾರೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಅದೇ ರೀತಿ ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ಅದೇ ರೀತಿ ಬಿಜಾಪುರ ಹಾಗೂ ಬಾಗಲಕೋಟೆಯಲ್ಲಿ ಹತ್ತು ಶಾಸಕರನ್ನು ನೀಡಿ ಈ ಬಲಿಷ್ಠವಾದ ಗ್ಯಾರಂಟಿ ಸರ್ಕಾರವನ್ನು ನೀಡಿರುವ ನಿಮಗೆ ಕೋಟಿ ನಮನಗಳನ್ನು ಅರ್ಪಿಸುತ್ತೇನೆ ಎಂದರು.












Click it and Unblock the Notifications