ಕಾರಾಗೃಹಗಳ ಮೇಲೆ 24 ಗಂಟೆಯೂ ನಿಗಾ: ಗಾಂಧಿನಗರದಲ್ಲಿ ಹೊಸ ಕಮಾಂಡ್ ಸೆಂಟರ್ ಆರಂಭ
ಬೆಂಗಳೂರು: ರಾಜ್ಯದ ಕಾರಾಗೃಹ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಸುಧಾರಣೆಯತ್ತ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಕಾರಾಗೃಹ 'ಸೆಂಟ್ರಲ್ ಕಮಾಂಡ್ ಸೆಂಟರ್' ಅನ್ನು ಗೃಹ ಸಚಿವ ಜಿ.ಪರಮೇಶ್ವರ್ ಉದ್ಘಾಟಿಸಿದ್ದು, ಈ ಕೇಂದ್ರದ ಮೂಲಕ ರಾಜ್ಯದ ಎಲ್ಲ ಪ್ರಮುಖ ಕಾರಾಗೃಹಗಳ ಮೇಲೆ ನಿಗಾವಹಿಸುವ ವ್ಯವಸ್ಥೆ ಜಾರಿಗೆ ಬಂದಿದೆ.
ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಿ.ಪರಮೇಶ್ವರ್, ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕೈದಿಗಳ ಸುಧಾರಣೆ ಹಾಗೂ ಪುನರ್ವಸತಿಗಾಗಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಸಿದ್ಧಪಡಿಸಲಾದ ಕೈಪಿಡಿಯನ್ನು ಸಹ ಬಿಡುಗಡೆ ಮಾಡಿದರು. ಇದರಿಂದ ಕೈದಿಗಳಲ್ಲಿ ಶಿಸ್ತು, ಕೌಶಲ್ಯಾಭಿವೃದ್ಧಿ ಮತ್ತು ಸಮಾಜಮುಖಿ ಬದಲಾವಣೆ ತರಲು ಕೈಗೊಂಡಿರುವ ಕ್ರಮಗಳಿಗೆ ಮತ್ತಷ್ಟು ಬಲ ಸಿಗಲಿದೆ ಎಂದರು.

1,076 ಕ್ಯಾಮೆರಾಗಳಿಗೆ ಸಂಪರ್ಕ
ಸೆಂಟ್ರಲ್ ಕಮಾಂಡ್ ಸೆಂಟರ್‌ಗೆ ರಾಜ್ಯದ ಪ್ರಮುಖ ಕಾರಾಗೃಹಗಳಲ್ಲಿ ಅಳವಡಿಸಲಾದ ಒಟ್ಟು 1,076 ಸಿಸಿಟಿವಿ ಕ್ಯಾಮೆರಾಗಳನ್ನು ಸಂಪರ್ಕಿಸಲಾಗಿದೆ. ಇದರ ಮೂಲಕ ಕಾರಾಗೃಹಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ದಿನದ 24 ಗಂಟೆಯೂ ನಿಗಾ ವಹಿಸಲು ಸಾಧ್ಯವಾಗಲಿದೆ. ಜೈಲುಗಳಲ್ಲಿ ನಿಷೇಧಿತ ವಸ್ತುಗಳ ಸರಬರಾಜು, ಕಾನೂನುಬಾಹಿರ ಚಟುವಟಿಕೆಗಳು, ಕೈದಿಗಳ ಚಲನವಲನ ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಯ ಮೇಲೂ ನಿರಂತರ ಮೇಲ್ವಿಚಾರಣೆ ನಡೆಯಲಿದೆ ಎಂದು ವಿವರಿಸಿದರು.
ತಾಲ್ಲೂಕು ಜೈಲುಗಳಿಗೂ ವಿಸ್ತರಣೆ
ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಜೈಲುಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನೂ ಈ ಕಮಾಂಡ್ ಸೆಂಟರ್‌ಗೆ ಸಂಪರ್ಕಿಸುವ ಯೋಜನೆ ರೂಪಿಸಲಾಗಿದೆ. ಇದು ಕಾರಾಗೃಹ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ರೂಪಿಸಲು ಸಹಕಾರಿಯಾಗಲಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾರಾಗೃಹಗಳಲ್ಲಿ ಸುಧಾರಣಾ ಕ್ರಮಗಳನ್ನು ಮುಂದುವರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲ ಕಾರಾಗೃಹಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ರಾಜ್ಯ ಸರ್ಕಾರ ಹಾಗೂ ಕಾರಾಗೃಹ ಇಲಾಖೆಗೆ ಭಾರೀ ಮುಜುಗರ ಉಂಟುಮಾಡಿದ್ದವು. ಜೈಲುಗಳ ಒಳಗಡೆ ಕೈದಿಗಳಿಗೆ ವಿಶೇಷ ಸೌಲಭ್ಯ, ಆಹಾರ, ಮೊಬೈಲ್ ಬಳಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸರ್ಕಾರದ ಮೇಲೆ ತೀವ್ರ ಟೀಕೆ ವ್ಯಕ್ತವಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕಾರಾಗೃಹಗಳಲ್ಲಿ ಪಾರದರ್ಶಕತೆ, ಶಿಸ್ತು ಹಾಗೂ ಕಾನೂನುಬದ್ಧ ವ್ಯವಸ್ಥೆ ಕಾಪಾಡುವ ಉದ್ದೇಶದಿಂದಲೇ ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನೂತನವಾಗಿ 'ಸೆಂಟ್ರಲ್ ಕಮಾಂಡ್ ಸೆಂಟರ್' ಅನ್ನು ಉದ್ಘಾಟಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಪೊಲೀಸ್ ಉಪ ಮಹಾನಿರೀಕ್ಷಕ ಜಿನೇಂದ್ರ ಖಣಗಾವಿ, ಪೊಲೀಸ್ ಅಧೀಕ್ಷಕ ಅಂಶು ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications