48 ರಾಜಕಾರಣಿಗಳ Honeytrap ವಿಡಿಯೋ; 'ಹನಿಟ್ರ್ಯಾಪ್ ವಿಚಾರದ ಸಿಬಿಐ ತನಿಖೆಗೆ ಆಗ್ರಹ'
ಬೆಂಗಳೂರು, ಮಾರ್ಚ್ 21: ಸಚಿವರು ಸೇರಿ ಪ್ರಮುಖರ ಹನಿಟ್ರ್ಯಾಪ್ ವಿಚಾರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ. ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರಿಂದ ಇದರ ತನಿಖೆ ಸಾಧ್ಯವಿಲ್ಲ. ಎಸ್‍ಐಟಿಯಿಂದ ಇದು ಖಂಡಿತ ಅಸಾಧ್ಯ ಎಂದು ವಿಜಯೇಂದ್ರ ಅವರು ತಿಳಿಸಿದರು.
ಸದನ ನಡೆಯುವ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ಸಹಕಾರಿ ಸಚಿವರಾದ ರಾಜಣ್ಣ ಅವರು ಬಹಳ ಗಂಭೀರವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸಚಿವರ ಮೇಲೆ ಹನಿಟ್ರ್ಯಾಪ್ ಆಗಿದೆ. ಈ ವಿಚಾರ ಸಾಕಷ್ಟು ಸದ್ದು ಮಾಡುತ್ತಿತ್ತು ಎಂದರು. ಮತ್ತೊಬ್ಬ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಿಗ್ಗೆ ಅದನ್ನು ಪುಷ್ಟೀಕರಿಸುವ ಹೇಳಿಕೆ ಕೊಟ್ಟಿದ್ದಾರೆ. ಸಚಿವರಾದ ರಾಜಣ್ಣ ಅವರು, ಘಟನೆ ನಡೆದಿರುವುದು ಸತ್ಯ. 48-49 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂಬ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದು ಬಹಳ ನೋವಿನಿಂದ ಮಾತನಾಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ರಾಜಣ್ಣನವರೇ ಹೇಳಿದ್ದಾರೆ ಎಂದು ಗಮನ ಸೆಳೆದರು.

ಗೃಹ ಸಚಿವರು ಇದರ ಕುರಿತು ಮಾತನಾಡಿದ್ದಾರೆ. ಪಕ್ಷಾತೀತವಾಗಿ ಇದರ ಬಗ್ಗೆ ಮಾತನಾಡಿದ್ದಾರೆ. ಇದೊಂದು ಗಂಭೀರ ವಿಚಾರ ಎಂದು ವಿವರಿಸಿದರು. 48-49 ಜನರ ಮೇಲೆ ಹನಿಟ್ರ್ಯಾಪ್ ವಿಚಾರ ರಾಜ್ಯದ ಸದನದಲ್ಲಿ ಹಿಂದೆಂದೂ ಚರ್ಚೆ ಆಗಿರಲಿಲ್ಲ ಎಂದು ತಿಳಿಸಿದರು. ಹನಿಟ್ರ್ಯಾಪ್ ವಿಚಾರದಲ್ಲಿ ಇಷ್ಟೊಂದು ಶಕ್ತಿ ಇರುವವರು ಯಾರೆಂದು ರಾಜಣ್ಣ ಅವರೇ ತಿಳಿಸಬೇಕಾಗುತ್ತದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಯಾರ್ಯಾರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಉಲ್ಲೇಖಿಸುವುದಿಲ್ಲ. ಸ್ವತಃ ಒಬ್ಬ ಹಿರಿಯ ಸಚಿವರು ಇರುವ ವಿಷಯ ತಿಳಿಸಿದ್ದಾರೆ.
ಇದು ಮುಖ್ಯಮಂತ್ರಿಗಳ ಗಮನಕ್ಕೂ ಹೋಗಿದೆ. ಬೇರೆ ಬೇರೆ ಪಕ್ಷಗಳ ರಾಷ್ಟ್ರೀಯ ನಾಯಕರ ಹನಿಟ್ರ್ಯಾಪ್ ಕುರಿತಂತೆ ಸ್ವತಃ ರಾಜಣ್ಣ ಅವರು ಹೇಳಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಅವರೇ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು. ಮುನಿರತ್ನ ಅವರ ಮೇಲೆ ಆರೋಪ ಬಂದಿತ್ತು. ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಆಗಿದೆ. ಅವರು ಕೂಡ ಪ್ರಕರಣದ ಹಿನ್ನೆಲೆಯಲ್ಲಿ ತೇಜೋವಧೆಗೆ ಒಳಗಾಗಿದ್ದಾರೆ. ಅಂದಿನಿಂದ ಅವರು ಇದರ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಇವತ್ತು ಕೂಡ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ದರಿದ್ರ, ಜನವಿರೋಧಿ, ಕೆಟ್ಟ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ನಾಡಿನ ಜನತೆಗೆ ಕೊಟ್ಟ ಏಕೈಕ ಗ್ಯಾರಂಟಿ ಎಂದರೆ ಅದು ಬೆಲೆ ಏರಿಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಬೆಲೆ ಏರಿಕೆಯ ಗ್ಯಾರಂಟಿಯನ್ನು ಈ ರಾಜ್ಯ ಸರಕಾರ ಸರಿಯಾಗಿ ಅನುಷ್ಠಾನಕ್ಕೆ ತರುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ವಿಫಲವಾಗಿದೆ. ಬೆಲೆ ಏರಿಕೆಯಿಂದ ನಾಡಿನ ಸಾಮಾನ್ಯ ಜನರು, ಬಡವರು, ರೈತರು ಸೇರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ ಎಂದು ತಿಳಿಸಿದರು.
ಇವರ ಹುಳುಕನ್ನು ಮುಚ್ಚಿ ಹಾಕಲು ಪದೇಪದೇ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ಕಡೆ ಪುಕ್ಕಟೆ ವಿದ್ಯುತ್ ಎನ್ನುತ್ತಾರೆ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. 3 ಫೇಸ್ ವಿದ್ಯುತ್ತನ್ನು 7 ತಾಸು ಕೊಡಲು ಸರಕಾರಕ್ಕೆ ಆಗುತ್ತಿಲ್ಲ. ಮತ್ತೊಂದು ಕಡೆ ಪಿಡಬ್ಲ್ಯುಡಿ ಮತ್ತಿತರ ಇಲಾಖೆಗಳು 6500 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಜನರಿಗೆ ಬರೆ ಎಳೆಯುವ ಸರಕಾರದ ಕ್ರಮ ಅಕ್ಷಮ್ಯ ಅಪರಾಧ. ಇದನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.
ಸ್ಮಾರ್ಟ್ ಮೀಟರ್, ವಿದ್ಯುತ್ ದರ ಏರಿಕೆ, ಮೆಟ್ರೋ ದರ ಮತ್ತಿತರ ಬೆಲೆ ಏರಿಕೆ ಮತ್ತಿತರ ವಿಚಾರವನ್ನು ಚರ್ಚಿಸಲು ಸರಕಾರಕ್ಕೆ ಪುರುಸೊತ್ತಿಲ್ಲ; ಅಲ್ಪಸಂಖ್ಯಾತರ ಓಲೈಕೆ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಮೇಕೆ ದಾಟು ಎಂದು ತಿಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಏನ್ಮಾಡಿದ್ದಾರೆಂದು ಡಿ.ಕೆ.ಶಿವಕುಮಾರರನ್ನು ಪ್ರಶ್ನಿಸಬೇಕಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅಧಿಕಾರದ ಮದ, ಭ್ರಮೆ ಇವರ ನೆತ್ತಿಗೇರಿದೆ. ಹೇಳಿ ಕೇಳಿ ಡಿ.ಕೆ.ಶಿವಕುಮಾರ್ ಅವರು ದೇಶದ ಎರಡನೇ ಅತಿ ಶ್ರೀಮಂತ ಶಾಸಕ ಎಂದು ವ್ಯಂಗ್ಯವಾಡಿದರು.












Click it and Unblock the Notifications