ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನದಿ ಕಾವೇರಿ ತೀರ್ಥೋದ್ಭವದ ಪೌರಾಣಿಕ ಹಿನ್ನೆಲೆ

By ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381 ಕಿ.ಮೀ. ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದರೊಂದಿಗೆ ತಾನು ಹರಿದಲೆಲ್ಲಾ ಪವಿತ್ರಕ್ಷೇತ್ರಗಳನ್ನು ಸೃಷ್ಟಿಸಿ, ಲಕ್ಷಾಂತರ ಮಂದಿಯ ಪಾಲಿಗೆ ಅನ್ನದಾತೆಯಾಗಿರುವ ಕಾವೇರಿ ತಲಕಾವೇರಿಯಲ್ಲಿ ಹೇಗೆ ಅವತರಿಸಿದಳು ಎಂಬುವುದರ ಕುರಿತು ಸ್ಕಂದ ಪುರಾಣದಲ್ಲಿ ಕಥೆಯಿರುವುದನ್ನು ನಾವು ಕಾಣಬಹುದು.

ಅದು ಪೌರಾಣಿಕ ಯುಗದ ದಿನಗಳು. ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ ಕವೇರನೆಂಬ ಮುನಿ ವಾಸವಾಗಿದ್ದನು. ಅವನಿಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆವುಂಟಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡತೊಡಗಿದನು. ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ದತ್ತು ಮಗಳಾಗಿ ನೀಡಿದನು. ಲೋಪಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು. ಹೀಗೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು.

Cauvery teertodbhava in Bhagamandala : Mythological story

ಒಂದು ದಿನ ಅಗಸ್ತ್ಯ ಮುನಿಗಳು ಕವೇರನ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಆಗ ಕಾವೇರಿ ನನಗೆ ಜನಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು ನನ್ನನ್ನು ನೀವು ಉಪೇಕ್ಷಿಸಿ ಎಲ್ಲೂ ಹೋಗಬಾರದು ಹಾಗೊಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಹೇಳುತ್ತಾಳೆ. ಕಾವೇರಿಯ ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನು ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾರೆ.

ಕಾವೇರಿಗೆ ಕೊಟ್ಟ ಮಾತಿನಂತೆ ಅಗಸ್ತ್ಯ ಮುನಿಗಳು ತಮ್ಮ ಆಶ್ರಮದಲ್ಲಿ ಕಾವೇರಿಯೊಂದಿಗೆ ಆನಂದದಿಂದ ದಿನ ಕಳೆಯುತ್ತಿರುತ್ತಾರೆ. ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದೆಂದುಕೊಳ್ಳುತ್ತಾರೆ. ಆದರೆ ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ.

ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದನ್ನು ಕಂಡು ಆಕೆಗೆ ಪತಿಯ ಮೇಲೆ ಕೋಪಬರುತ್ತದೆ. ಅಲ್ಲದೆ ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯವೆಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರುತ್ತಾಳೆ. ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿಯುತ್ತಾಳೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ಭಕ್ತರಿಗೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾ ಬಂದಿದ್ದಾಳೆ.

ತೀರ್ಥೋದ್ಭವದಂದು ದೂರದೂರುಗಳಿಂದ ಆಗಮಿಸುವ ಭಕ್ತರು ಕಾವೇರಿಯ ಪವಿತ್ರ ಜಲತೀರ್ಥವನ್ನು ಮನೆಗೆ ಕೊಂಡೊಯ್ದು ಪೂಜಿಸುತ್ತಾರೆ. ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದ್ದು, ಈ ಸ್ನಾನಕೊಳದಲ್ಲಿ ನೂತನವಾಗಿ ವಿವಾಹವಾದವರು ಕೈಕೈ ಹಿಡಿದುಕೊಂಡು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲವನ್ನು ಹಾಕಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ.

English summary
Cauvery teertodbhava to occure on 17th Saturday midnight, in Bhagamandala in Coorg district. Arrangements have been done by the district administrator for the protection of devoteers who throng to see this auspicious occasion. By the way, do you know how Cauvery river took birth?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X