ಸಂಪುಟ ಸರ್ಜರಿ ಗ್ಯಾರಂಟಿ; ಸಚಿವರಲ್ಲಿ ಶುರುವಾಯ್ತು ತಳಮಳ: ಯಾರಿಗೆಲ್ಲಾ ಮಂತ್ರಿಗಿರಿ ಕೈ ತಪ್ಪಬಹುದು?
ಬೆಂಗಳೂರು, ಮೇ 21: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಟಾರ್ಗೆಟ್ ನಂತೆ 20 ಕ್ಷೇತ್ರಗಳನ್ನ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ, ನಿರೀಕ್ಷೆಯಂತೆ ಕ್ಷೇತ್ರಗಳನ್ನ ಗೆಲ್ಲುವುದು ಕಷ್ಟವಾಗಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸಂಪುಟ ಸರ್ಜರಿಯ ಗುಸು ಗುಸು ಕೇಳಿ ಬರುತ್ತಿದೆ.
ಹೌದು, ರಾಜ್ಯದಲ್ಲಿ 1999ರ ಬಳಿಕ ನಡೆದ ಯಾವ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಎರಡಂಕಿ ತಲುಪಿಲ್ಲ. ಹೀಗಾಗಿ ಲೋಕಸಭಾ ಚುನಾವಣೆ ಫಲಿತಾಂಶ ಆಧರಿಸಿ ಸಿದ್ದರಾಮಯ್ಯ ಸಂಪುಟ ಸರ್ಜರಿಗೆ ಮುಹೂರ್ತ ನಿಗದಿಪಡಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಲೋಕ ಅಖಾಡಕ್ಕೆ ತೆರೆ ಬೀಳುವ ಮುನ್ನವೇ ರಾಜ್ಯದಲ್ಲಿ ಸಂಪುಟ ಪುನಾರಚನೆ ಕುರಿತ ಚರ್ಚೆ ಸಾಕಷ್ಟು ಚರ್ಚೆಗಳು ಆರಂಭವಾಗಿದೆ.

ಈ ಬಾರಿ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬ ವಿಶ್ವಾಸದಲ್ಲಿರುವ ಕಾಂಗ್ರೆಸ್ ನಾಯಕರು ಈ ಬಾರಿ ಡಬಲ್ ಡಿಜಿಟ್‌ನ ಬಗ್ಗೆ ಪಕ್ಷ ಆಶಾಭಾವನೆಯನ್ನ ಹೊಂದಿದ್ದಾರೆ. ಪಂಚ ಗ್ಯಾರಂಟಿಗಳು ಕೈಹಿಡಿದರೆ ಹೆಚ್ಚಿನ ಸೀಟು ಬರಬಹುದು ಎಂಬ ನಿರೀಕ್ಷೆಯಲ್ಲೂ ಕಾಂಗ್ರೆಸ್ ಪಕ್ಷವಿದೆ.
ಒಂದು ವೇಳೆ ಒಂದಂಕಿಗೆ ಕಾಂಗ್ರೆಸ್ ನ ಗಳಿಕೆ ಸೀಮಿತವಾದರೆ ನಿರಾಸೆಯಾಗಲಿದೆ. ಹೀಗೆ ಏನೇ ಫಲಿತಾಂಶ ಬಂದರೂ ಸಂಪುಟ ಪುನಾರಚಿಸಬೇಕು. ಜೂನ್ 4ರ ಬಳಿಕ ಈ ನಿಟ್ಟಿನ ಸೂತ್ರವನ್ನು ಅಂತಿಮಗೊಳಿಸಲಾಗುವುದು ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ.
ಕುಟುಂಬಸ್ಥರಿಗೆ ಮಣೆ ಹಾಕಿದ್ದ ಹೈಕಮಾಂಡ್
ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆಯಿಂದಾಗಿ ಸಚಿವರ ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡುವ ಮೂಲಕ ಕಣಕ್ಕಿಳಿಸಿತ್ತು. ಈ ವಿಚಾರವಾಗಿ ಕೈ ಪಾಳಯದಲ್ಲಿ ತೀವ್ರ ವಿರೋಧ ಹಾಗೂ ಕುಟುಂಬ ರಾಜಕಾರಣದ ಆರೋಪಗಳು ಕೇಳಿ ಬಂದರು, ಇದನ್ನ ಪಕ್ಷ ಸವಾಲಾಗಿಯೇ ಸ್ವೀಕರಿಸಿತ್ತು. ಇನ್ನೂ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಗಳನ್ನ ಗೆಲ್ಲಸಿಕೊಂಡು ಬರುವ ಹೊಣೆಯನ್ನ ಮಂತ್ರಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿತ್ತು.
ಇತ್ತ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಟಾಸ್ಕ್ ವಿಫಲವಾದರೇ ಮಂತ್ರಿಗಿರಿಯೂ ಕೈ ತಪ್ಪಬಹುದು ಎಂಬ ಚರ್ಚೆಯನ್ನು ಸಹ ಕೈ ಹೈಕಮಾಂಡ್ ಮುಂದೆ ಇಟ್ಟಿತ್ತು. ಅಲ್ಲದೇ ಅಂತಹ ಸಂದರ್ಭ ಸೃಷ್ಟಿಯಾದರೇ ಸಚಿವರುಗಳು ತಮ್ಮ ಮಂತ್ರಿಗಿರಿಯ ಪದತ್ಯಾಗಕ್ಕೂ ಸಿದ್ಧರಾಗಿರಬೇಕಾಗುತ್ತದೆ ಎಂದು ತಿಳಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಹೀಗಾಗಿ ಹೊಣೆಗಾರಿಕೆ ಹೊತ್ತಿರುವ ಸಚಿವರುಗಳು ಜಾಗ ಖಾಲಿ ಮಾಡಬೇಕಾಗುತ್ತದೋ ಅಥವಾ ಹೆಚ್ಚಿನ ಜವಾಬ್ದಾರಿಗೆ ಅರ್ಹರಾಗುತ್ತಾರೋ ಎಂಬುದಕ್ಕೆ ಚುನಾವಣೆ ಫಲಿತಾಂಶದಿಂದ ಉತ್ತರ ಸಿಗಲಿದೆ ಎನ್ನಲಾಗಿದೆ. ಈ ಚುನಾವಣೆಯಲ್ಲಿ ಕೈ ಹೈಕಮಾಂಡ್ ಹಾಕಿರುವ ಟಾರ್ಗೆಟ್ ತಲುಪಿದರೇ ಸಚಿವರ ಮಂತ್ರಿಗಿರಿಯಲ್ಲಿ ಮುಂದುವರೆಯಬಹುದು. ಈ ಚುನಾವಣೆಯ ಸೋಲು ಮತ್ತು ಗೆಲುವು ಮಂತ್ರಿಗಳ ಭವಿಷ್ಯವನ್ನೂ ನಿರ್ಧರಿಸಲಿದೆ. ಇದು ಹೈಕಮಾಂಡ್ ಮಟ್ಟದಲ್ಲೇ ನಿರ್ಧಾರ ಆಗಿದೆ.
ಚುನಾವಣೆ ಫಲಿತಾಂಶವೇನೇ ಬಂದರೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಯಾವೆಲ್ಲ ಕಸರತ್ತು ಮಾಡಬಹುದು ಎಂಬ ಬಗ್ಗೆ ಮಂತ್ರಿಗಳು ತಾಲೀಮು ನಡೆಸುತ್ತಿದ್ದಾರೆ. ಒಂದು ಕಡೆ ನಿರೀಕ್ಷೆಯಂತೆ ಕ್ಷೇತ್ರಗಳನ್ನ ಗೆಲ್ಲದಿದ್ದರೇ ಹೈಕಮಾಂಡ್ ಸೂಚನೆಯಂತೆ ಮಂತ್ರಿ ಗಿರಿ ಬಿಟ್ಟುಕೊಡಬೇಕಾ ಎಂಬ ತಳಮಗಳ ಸಚಿವರುಗಳಲ್ಲಿ ಶುರುವಾಗಿದೆ. ಇತ್ತ ಸಚಿವ ಸಂಪುಟದಿಂದ ಈ ಹಿಂದೆ ವಂಚಿತರಾದ ಶಾಸಕರಿಗೆ ಚುನಾವಣಾ ಫಲಿತಾಂಶ ನಂತರ ಸಂಪುಟ ಪುನಾರಚನೆಯಾದರೆ ತಮಗೆ ಅದೃಷ್ಟ ಒಲಿಯಬಹುದು ಎಂಬ ಲೆಕ್ಕಾಚಾರದಲ್ಲಿ ಆಕಾಂಕ್ಷಿಗಳಿದ್ದಾರೆ.
ಈ ಎರಡು ಸೂತ್ರಗಳಲ್ಲಿ ಸಂಪುಟ ಸರ್ಜರಿ ಹೈಕಮಾಂಡ್ ಪ್ಲಾನ್?
1. ಕಾಂಗ್ರೆಸ್‌ಗೆ 10ಕ್ಕಿಂತ ಹೆಚ್ಚು ಸ್ಥಾನಗಳನ್ನ ಲೋಕಸಭಾ ಚುನಾವಣೆಯ ಫಲಿತಾಂಶ ಬಂದರೆ ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆಯಾಗಬಹುದು. ಇಂಥ ಸಂದರ್ಭದಲ್ಲಿಅಸಮರ್ಥ, ಅದಕ್ಷ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಬಹುದು ಎನ್ನಲಾಗಿದೆ.
2. ಒಂದು ವೇಳೆ ಕಾಂಗ್ರೆಸ್‌ಗೆ 10ಕ್ಕಿಂತ ಕಡಿಮೆ ಬಂದರೆ ಸಂಪುಟಕ್ಕೆ ಮೇಜರ್ ಸರ್ಜರಿಗೆ ಹೈಕಮಾಂಡ್ ಮುಂದಾಗಬಹುದು. ಮಕ್ಕಳು, ಕುಟುಂಬ ಸದಸ್ಯರನ್ನು ಸ್ಪರ್ಧೆಗಿಳಿಸಿದ ಸಚಿವರಿಗೆ ಇದರ ನೇರ ಬಿಸಿ ತಟ್ಟಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications