ಸಂಪುಟ ವಿಸ್ತರಣೆ ಯಾವಾಗ? ಸಿಎಂ ಹೇಳಿದ್ದೇನು? ಸಚಿವಾಕಾಂಕ್ಷಿಗಳು ಯಾರು?
ಬೆಂಗಳೂರು, ಅಕ್ಟೋಬರ್ 2: ವಿಧಾನಸಭಾ ಚುನಾವಣೆ ಕೆಲವೇ ತಿಂಗಳು ಉಳಿದಿದ್ದು, ರಾಜ್ಯ ರಾಜಕೀಯದ ತಾಪಮಾನ ಏರಿಕೆ ಆಗುತ್ತಿದೆ. ಆಡಳಿತಾರೂಢ ಬಿಜೆಪಿ ಸರಕಾರ ಅಧಿಕಾರ ಉಳಿಸಿಕೊಳ್ಳುವ ದೊಡ್ಡ ಸವಾಲು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಸಂಪುಟ ಪುನಾರಚನೆ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ.
ಜನಪ್ರಿಯವಲ್ಲದ ಮತ್ತು ದಕ್ಷವಾಗಿ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ಕೊಡಬೇಕೆಂಬ ವಾದ ಇದೆ. ಹೈಕಮಾಂಡ್ ಕೂಡ ಇದೇ ಚಿಂತನೆಯಲ್ಲಿ ಇದೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಬಹಳ ದಿನಗಳಿಂದ ಕೇಳಿಬಂದಿತ್ತು. ಸಚಿವಾಕಾಂಕ್ಷಿಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಈ ಬಗ್ಗೆ ವಿಜಯಪುರಲ್ಲಿ ಮೊನ್ನೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಂಪುಟ ವಿಸ್ತರಣೆ ಸಾಧ್ಯತೆಯನ್ನು ತೆರೆದಿಟ್ಟಿದ್ದರು. ಸಂಪುಟ ವಿಸ್ತರಣೆಗೆ ಕೇಂದ್ರ ನಾಯಕರ ಒಪ್ಪಿಗೆ ಪಡೆಯಲು ದೆಹಲಿಗೆ ಹೋಗುವುದಾಗಿ ಅವರು ಸ್ಪಷ್ಟಪಡಿಸಿದರು. ಮೂಲಗಳ ಪ್ರಕಾರ, ಇಂದು ಭಾನುವಾರ ಸಂಜೆ ಅಥವಾ ಸೋಮವಾರ ಬೆಳಗ್ಗೆ ಸಿಎಂ ಬೊಮ್ಮಾಯಿ ಅವರು ದೆಹಲಿಗೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ.

ಇದೇ ವೇಳೆ, ಇಂದು ಭಾನುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಇಬ್ಬರೂ ಭೇಟಿಯಾಗಿ ಇದೇ ವಿಚಾರವಾಗಿ ಚರ್ಚೆ ನಡೆಸಿದ್ದು ತಿಳಿದುಬಂದಿದೆ. ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಅವಕಾಶ ಕೊಡಬಹುದು ಎಂದು ಯಡಿಯೂರಪ್ಪ ಅವರ ಸಲಹೆಯನ್ನು ಸಿಎಂ ಪಡೆದುಕೊಂಡರೆನ್ನಲಾಗಿದೆ.
ಕೆಲ ವರದಿಗಳ ಪ್ರಕಾರ, ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಸಂಪುಟ ಪುನಾರಚನೆಯನ್ನೇ ಕೈಗೊಳ್ಳಬೇಕೆಂಬ ಗೊಂದಲ ಸಿಎಂ ಅವರಲ್ಲಿದೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಬಿಜೆಪಿ ವರಿಷ್ಠರು ಹೂಂ ಎಂದರೆ ಮುಂದಿನ ವಾರದೊಳಗೆ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟವರು
* ರಮೇಶ್ ಜಾರಕಿಹೊಳಿ
* ಕೆಎಸ್ ಈಶ್ವರಪ್ಪ
* ಎಂಪಿ ರೇಣುಕಾಚಾರ್ಯ
* ರಾಜುಗೌಡ
* ಎಸ್ ಎ ರಾಮದಾಸ್
* ಅಪ್ಪಚ್ಚು ರಂಜನ್
* ಪಿ ರಾಜೀವ್
* ಎಂಪಿ ಕುಮಾರಸ್ವಾಮಿ
* ಜಿಎಚ್ ತಿಪ್ಪಾರೆಡ್ಡಿ
* ಕೆ ಪೂರ್ಣಿಮಾ ಶ್ರೀನಿವಾಸ್
* ದತ್ತಾತ್ರೇಯ ಪಾಟೀಲ ರೇವೂರ
* ಎನ್ ಮಹೇಶ್
* ಸಿ ಪಿ ಯೋಗೇಶ್ವರ್
* ಅರವಿಂದ್ ಬೆಲ್ಲದ
ಎರಡು ಹಂತದಲ್ಲಿ ಸಂಪುಟ ವಿಸ್ತರಣೆ ಮಾಡುವ ನಿರೀಕ್ಷೆ ಇದೆ. ಹಿಂದುಳಿದ ವರ್ಗಗಳ ಮತಗಳನ್ನು ಹಿಡಿದಿಟ್ಟುಕೊಳ್ಳಲು ಮೊದಲಿಗೆ ರಮೇಶ್ ಜಾರಕಿಹೊಳಿ ಮತ್ತು ಕೆ ಎಸ್ ಈಶ್ವರಪ್ಪ ಸೇರಿ 3-5 ಮಂದಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಸುಳಿವು ನೀಡಿದ್ದಾರೆ.
ಇದೇ ವೇಳೆ, ದಕ್ಷವಾಗಿ ಕೆಲಸ ಮಾಡದ ಸಚಿವರನ್ನು ಬದಲಾಯಿಸಿ ಸಂಪುಟ ಪುನಾರಚನೆ ಮಾಡಬಹುದು ಎಂಬ ಸುದ್ದಿಯೂ ಇದೆ. ಆದರೆ, ಬಿಜೆಪಿಯ ಒಂದು ಮೂಲದ ಪ್ರಕಾರ ಸಂಪುಟ ಪುನಾರಚನೆಯ ಆಲೋಚನೆ ವರಿಷ್ಠರ ಮನಸಿನಲ್ಲಿ ಇಲ್ಲ ಎಂದೆನ್ನಲಾಗಿದೆ. ನಳೀನ್ ಕುಮಾರ್ ಕಟೀಲ್ ಕೂಡ ಇತ್ತೀಚೆಗೆ ಇದೇ ಧಾಟಿಯಲ್ಲಿ ಮಾತನಾಡಿದ್ದರು.
ಸಿಎಂ ಬಳಿ ಹೆಚ್ಚುವರಿ ಖಾತೆಗಳು
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಎಂಟು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಅವರ ಮೇಲೆ ಅಪರಿಮಿತ ಒತ್ತಡವೂ ಇದೆ. ಹಣಕಾಸು, ಗುಪ್ತಚರ, ಸಂಸದೀಯ ವ್ಯವಾರ, ಡಿಪಿಎಆರ್, ಬೆಂಗಳೂರು ನಗರಾಭಿವೃದ್ಧಿ ಖಾತೆಗಳ ಜೊತೆಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ, ಅರಣ್ಯ ಮತ್ತು ಆಹಾರ ನಾಗರಿಕ ಪೂರೈಕೆ ಖಾತೆಗಳ ಹೆಚ್ಚುವರಿ ಜವಾಬ್ದಾರಿ ಸಿಎಂ ಮೇಲಿದೆ.
ಅರಣ್ಯ, ಆಹಾರ, ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಉಮೇಶ್ ಕತ್ತಿ ಅಕಾಲಿಕವಾಗಿ ಮೃತಪಟ್ಟಿದ್ದರಿಂದ ಅವರ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇನ್ನು ಈಶ್ವರಪ್ಪ ರಾಜೀನಾಮೆ ಬಳಿಕ ಅವರ ಪಂಚಾಯತ್ ರಾಜ್ ಮತ್ತು ಗ್ರಾಮೀನಾಭಿವೃದ್ಧಿ ಖಾತೆಯೂ ಸಿಎಂ ಬಳಿಯೇ ಇದೆ. ಈಶ್ವರಪ್ಪಗೆ ಮತ್ತೆ ಅದೇ ಖಾತೆಯನ್ನು ಮರಳಿ ಕೊಡುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications