ಸಿ–ವಿಜಲ್ ಅಪ್ಲಿಕೇಶನ್; ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣು
ಬೆಂಗಳೂರು, ಏಪ್ರಿಲ್ 14; ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಚುನಾವಣೆಗೆ ವೇಳಾಪಟ್ಟಿ ಪ್ರಕಟ ಮಾಡಿದೆ. ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಮಾರ್ಚ್ 29ರಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ವಿವಿಧ ಜಿಲ್ಲೆಗಳಲ್ಲಿ ಚುನಾವಣಾ ಅಕ್ರಮಗಳು ಪತ್ತೆಯಾಗುತ್ತಿವೆ. ಚುನಾವಣಾ ಅಕ್ರಮಗಳನ್ನು ಪತ್ತೆ ಹಚ್ಚಲು ಸಿ-ವಿಜಲ್ ಅಪ್ಲಿಕೇಶನ್ ಸಹಕಾರಿಯಾಗಿದೆ.
ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಮುಖ್ಯ ಉದ್ದೇಶವಾಗಿದೆ. ಚುನಾವಣಾ ಸಮಯದಲ್ಲಿ ನಡೆಯುವ ಹಲವು ಅಕ್ರಮಗಳನ್ನು ತಡೆಯುವುದು ಆಯೋಗಕ್ಕೂ ಸವಾಲಾಗಿದೆ. ಆದ್ದರಿಂದ ಜನರ ಸಹಕಾರವನ್ನು ಕೇಳಲಾಗಿದೆ. ಇಂತಹ ಅಕ್ರಮಗಳನ್ನು ತಡೆಯಲು ಹಾಗು ಇವುಗಳ ಕುರಿತು ಮಾಹಿತಿ ನೀಡಲು ಜನರು ಸಿ-ವಿಜಲ್ ಅಪ್ಲಿಕೇಶನ್ ಬಳಕೆ ಮಾಡಬಹುದಾಗಿದೆ. ದೂರು ಕೊಟ್ಟವರ ವಿವರಗಳು ಗೌಪ್ಯವಾಗಿ ಉಳಿಯುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ಅಕ್ರಮ ನಡೆಸುವವರ ವಿರುದ್ಧ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಸಿ-ವಿಜಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಮತದಾರಿಗೆ ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುವಂತೆ ವಿವಿಧ ರೀತಿಯ ಅಮಿಷ ವೊಡ್ಡುವುದು. ಹಣ ವಿತರಣೆ, ಉಡುಗೊರೆಗಳ ಹಂಚಿಕೆ, ಕೂಪನ್ ವಿತರಣೆ, ಮದ್ಯ ವಿತರಣೆ, ಅನುಮತಿಯಿಲ್ಲದ ಪೋಸ್ಟರ್ ಗಳು ಮತ್ತು ಬ್ಯಾನರ್, ಬಂದೂಕುಗಳ ಪ್ರದರ್ಶನ ಹಾಗೂ ಬೆದರಿಕೆ, ಆಸ್ತಿ ವಿರೂಪ, ಧಾರ್ಮಿಕ ಅಥವಾ ಕೋಮು ಭಾಷಣಗಳು/ ಸಂದೇಶಗಳು, ಮತಗಟ್ಟೆಯ 200 ಮೀ ಪ್ರದೇಶದಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಮತದಾನ ದಿನದಂದು ವಾಹನಗಳಲ್ಲಿ ಮತದಾರರ ಸಾಗಣೆ ಮುಂತಾದವು ಅಕ್ರಮದ ವ್ಯಾಪ್ತಿಗೆ ಬರುತ್ತವೆ.
ಸರಳವಾಗಿ ಜನರು ದೂರು ನೀಡಬಹುದು; ಚುನಾವಣಾ ಸಮಯದಲ್ಲಿ ಯಾವುದೇ ರೀತಿಯ ಬೆದರಿಕೆ, ಆಮಿಷ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಜನರು ತಮ್ಮ ಮೊಬೈಲ್ ಮೂಲಕವೇ ಸಿ-ವಿಜಲ್ ಅಪ್ಲಿಕೇಶನ್ ಮೂಲಕ ದೂರು ದಾಖಲು ಮಾಡಬಹುದಾಗಿದೆ. ದೂರು ದಾಖಲಾದ ತಕ್ಷಣ ದೂರುಗಳು ಸ್ವಯಂ ಸ್ಥಳವನ್ನು ತೋರಿಸುವ ಸೌಲಭ್ಯ, ಪ್ರಕರಣ ನಡೆದ ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಸಲಿದೆ. ಇದರಿಂದಾಗಿ ತಕ್ಷಣ ಅದನ್ನು ಬಗೆಹರಿಸಲು ಸಾಧ್ಯವಾಗುತ್ತದೆ.

ಜನರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿ-ವಿಜಿಲ್ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಂಡು ಅತ್ಯಂತ ಸುಲಭ ರೀತಿಯಲ್ಲಿ ಬಳಸಬಹುದಾಗಿದೆ. ಅಕ್ರಮದ ಕುರಿತ ಚಿತ್ರ ಹಾಗೂ ವೀಡಿಯೋಗಳನ್ನು ಅಲ್‌ಲೋಡ್ ಮಾಡಬಹುದಾಗಿದೆ. ದೂರು ನೀಡುವ ಸಾರ್ವಜನಿಕರ ಹೆಸರು ಬಹಿರಂಗಪಡಿಸುವುದಿಲ್ಲ. ಅಲ್ಲದೇ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸಿ-ವಿಜಲ್ ಅಪ್ಲಿಕೇಶನ್‌ನಲ್ಲಿ ಬರುವ ದೂರುಗಳ ನಿರ್ವಹಣೆಗಾಗಿಯೇ 24*7 ತಂಡವನ್ನು ಜಿಲ್ಲಾ ಚುನಾವಣಾಧಿಕಾರಿಗಳು ರಚನೆ ಮಾಡಿದ್ದಾರೆ.
ಮತದಾನ ಮುಕ್ತಾಯವಾಗುವರೆಗೂ ಮೂರು ಪಾಳಿಯಲ್ಲಿ 24*7 ಈ ತಂಡ ಕಾರ್ಯ ನಿರ್ವಹಣೆ ಮಾಡಲಿದೆ. ದೂರು ಬಂದ ಕೂಡಲೇ ಅವುಗಳನ್ನು ಪರಿಶೀಲಿಸಿ, ಸದರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್‌ಗಳ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ನೀಡಲಾಗುತ್ತದೆ. ತಂಡದ ಸಿಬ್ಬಂದಿ ದೂರು ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಗರಿಷ್ಠ 100 ನಿಮಿಷಗಳ ಒಳಗೆ ಆ ದೂರುಗಳನ್ನು ಸಂಪೂರ್ಣ ಇತ್ಯರ್ಥಪಡಿಸಲಾಗುತ್ತದೆ.
ಜನರು ಸಿ-ವಿಜಿಲ್ ಅಪ್ಲಿಕೇಶನ್ ಮಾತ್ರವಲ್ಲದೇ ಉಚಿತ ಸಹಾಯವಾಣಿ ಸಂಖ್ಯೆ 1950ಗೆ ಸಹ ಚುನಾವಣಾ ಅಕ್ರಮಗಳ ಬಗ್ಗೆ ಕರೆ ಮಾಡಿ ದೂರು ನೀಡಬಹುದು. ಮುಕ್ತ, ಪಾರದರ್ಶಕ ಚುನಾವಣೆ ನಡೆಯಲು ಚುನಾವಣಾ ಆಯೋಗದ ಜೊತೆ ತಾವೂ ಸಹ ಕೈ ಜೋಡಿಸಬೇಕು ಎಂದು ಆಯೋಗ ಜನರಲ್ಲಿ ಮನವಿ ಮಾಡಿದೆ.
ಸಿ-ವಿಜಲ್ ಅಪ್ಲಿಕೇಶನ್ ಮೂಲಕ ಜನರು ತಮ್ಮ ಸ್ವವಿವರ ನೀಡಿಯಾದರೂ ಅಥವಾ ನೀಡದೆಯೂ ದೂರು ನೀಡಬಹುದು. ಈ ಮೂಲಕ ದೂರು ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಆಯೋಗ ಭರವಸೆ ಕೊಟ್ಟಿದೆ. ಇದರಲ್ಲಿ ಒಟ್ಟು 16 ರೀತಿಯ ದೂರುಗಳ ಪಟ್ಟಿ ಇದೆ. ಅವುಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಮಾಡಿ ವಿವರಗಳನ್ನು ಸಲ್ಲಿಕೆ ಮಾಡಬಹುದಾಗಿದೆ.












Click it and Unblock the Notifications