Byrathi Suresh Profile: ಕರ್ನಾಟಕದ ನೂತನ ಸಚಿವ ಬೈರತಿ ಸುರೇಶ್ ಪರಿಚಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆದ್ದು ಭರ್ಜರಿ ಬಹುಮತ ಗಳಿಸಿದ ಕಾಂಗ್ರೆಸ್ ಇದೀಗ ರಾಜ್ಯದಲ್ಲಿ ನೂತನ ಸರ್ಕಾರ ರಚಿಸಿದೆ. ಶನಿವಾರ, ಮೇ 27ರಂದು ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸಮಾರಂಭದಲ್ಲಿ 23 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದೇ ವೇಳೆ ಕರ್ನಾಟಕದ ನೂತನ ಸಚಿವರಾಗಿ ಬೈರತಿ ಸುರೇಶ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಬೈರತಿ ಸುರೇಶ್ ಇದೇ ಮೊದಲ ಬಾರಿಗೆ ಸಚಿವರಾಗಲಿದ್ದಾರೆ. 2018ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಇದಕ್ಕೂ ಮುನ್ನ 2012ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು.

ಬೈರತಿ ಸುರೇಶ್ ಅವರು ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ಕುಮಾರ್ ವಿರುದ್ಧ 30,754 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು.
ಬೈರತಿ ಸುರೇಶ್ ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರು ಆಗಿದ್ದಾರೆ ಮತ್ತು ಕುರುಬ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯನವರ ಅತ್ಯಾಪ್ತ ಶಾಸಕರಲ್ಲಿ ಒಬ್ಬರಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಗೆ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವಾಗ, ಬೈರತಿ ಸುರೇಶ್ ಎಂಎಲ್‌ಸಿ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದರು. 2023ರಲ್ಲಿ ಮತ್ತೆ ಹೆಬ್ಬಾಳ ಕ್ಷೇತ್ರದಲ್ಲಿ ಗೆದ್ದು, ಇದೀಗ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚುನಾವಣೆ 2023ರ ಫಲಿತಾಂಶದಲ್ಲಿ ಕಾಂಗ್ರೆಸ್‌ನ ಬೈರತಿ ಸುರೇಶ್ 92,000 ಮತಗಳನ್ನು ಪಡೆದರೆ, ಬಿಜೆಪಿಯ ಕಟ್ಟಾ ಜಗದೀಶ್ 61,000 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ನನ್ ಆಫ್ ದಿ ಎಬೌವ್ (ನೋಟಾ) ಮೂರನೇ ಸ್ಥಾನ ಪಡೆಯಿತು.
ಬೈರತಿ ಸುರೇಶ್ ಪರಿಚಯ
ಹೆಬ್ಬಾಳ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರು 1972 ಜುಲೈ 19ರಂದು ಬೆಂಗಳೂರಿನ ಬೈರತಿಯಲ್ಲಿ ಜನಿಸಿದರು. ಪಿಯುಸಿ ವಿಧ್ಯಾಭ್ಯಾಸ ಮುಗಿಸಿರುವ ಬೈರತಿ ಸುರೇಶ್ ಅವರು ಭೂಮಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ.
1991ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ ಬೈರತಿ ಸುರೇಶ್, ನಂತರ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡಿದ್ದರು. ಬೈರತಿ ಸುರೇಶ್ ಅವರು 2018ರಲ್ಲಿ ಹೆಬ್ಬಾಳ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಗೆದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿಯೂ ಆಗಿರುವ ಬೈರತಿ ಸುರೇಶ್ 2012ರಲ್ಲಿ ಎಂಎಲ್‌ಸಿ ಆಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು.
ಬೈರತಿ ಸುರೇಶ್ ಅವರ ಸಹೋದರ ಬೈರತಿ ಬಸವರಾಜು ಅವರು ಕೂಡ ರಾಜಕೀಯದಲ್ಲಿದ್ದಾರೆ. ಹೆಬ್ಬಾಳ ಪಕ್ಕದ ಕೆ.ಆರ್. ಪುರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು.












Click it and Unblock the Notifications