ಮೆಣಸಿನಕಾಯಿ ಬಾರದೇ ಬ್ಯಾಡಗಿ ಮಾರುಕಟ್ಟೆ ಖಾಲಿ ಖಾಲಿ; ಪೂರೈಕೆ ಕೊರತೆ, ಮಸಾಲೆ ಕಂಪನಿಗಳಿಗೂ ತಟ್ಟಿದ ಬಿಸಿ
ಹಾವೇರಿ: ಜಿಲ್ಲೆ ವ್ಯಾಪ್ತಿಯಲ್ಲಿರುವ ಬ್ಯಾಡಗಿ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯು ಪ್ರಸ್ತಕ ಋತುವಿನಲ್ಲಿ ಮೆಣಸಿನಕಾಯಿ ಪೂರೈಕೆಯಲ್ಲಿ ಕೊರತೆ ಎದುರಿಸುತ್ತಿದೆ. ಲಕ್ಷಾಂತರ ಚೀಲ ಮೆಣಸಿನಕಾಯಿಗಳು ಮಾರುಕಟ್ಟೆಗೆ ಬರುತ್ತಿದ್ದವು. ಮಾರುಕಟ್ಟೆ ತುಂಬಾ ಕೆಂಪು ಒಣ ಮೆಣಸಿನಕಾಯಿ ಘಾಟು ರಾಚುತ್ತಿತ್ತು. ಈ ವರ್ಷದ ಋತುವಿನ ಆರಂಭದಲ್ಲೇ ಮಾರ್ಕೆಟ್ ಖಾಲಿ ಇದ್ದು, ಬಣಗುಡುತ್ತಿದೆ. ಇಲ್ಲಿನ ಉತ್ಪನ್ನ ನಂಬಿದ್ದ ಮಸಾಲೆ ಕಂಪನಿಗಳು ಪೂರೈಕೆಯ ಕೊರತೆಯ ಸಂಕಷ್ಟ ಎದುರಿಸುವಂತಾಗಿದೆ.
ಈ ವರ್ಷ ನಿರೀಕ್ಷಿತ ಒಣ ಮೆಣಸಿನಕಾಯಿ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಮಾರುಕಟ್ಟೆ ವಾತಾವರಣ ಮುಚ್ಚಿದ ಸ್ಥಿತಿಯಂತಿತ್ತು. ಜನವರಿ ಮತ್ತು ಫೆಬ್ರವರಿಯಲ್ಲಿ ಲಕ್ಷಾಂತರ ಮೆಣಸಿನಕಾಯಿ ಚೀಲಗಳಿಂದ ಮಾರುಕಟ್ಟೆ ತುಂಬಿ ತುಳುಕುತ್ತಿರುತ್ತದೆ. ಈ ಬಾರಿ ಅದಕ್ಕೆ ತದ್ವಿರುದ್ಧ ವಾತಾವರಣ ಕಂಡು ಬಂದಿದೆ. ಇದರಿಂದ ವ್ಯಾಪಾರಿಗಳಲ್ಲಿ ಆತಂಕ ಉಂಟಾಗಿದ್ದು, ವ್ಯಾಪಾರ ನಷ್ಟ ಅನುಭವಿಸುವಂತಾಗಿದೆ. ಫೆಬ್ರವರಿ ಎರಡನೇ ವಾರ ಕೊನೆಗೊಳ್ಳುತ್ತಾ ಬಂದರೂ ರೈತರಿಂದ ಮೆಣಸಿನಕಾಯಿ ಬಾರದಿರುವುದು ವರ್ತಕರ ನಿರೀಕ್ಷೆ ಹುಸಿ ಮಾಡಿದೆ.

ಕಳೆದ ವರ್ಷದ ಋತುವಿನಲ್ಲಿ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಕರ್ನಾಟಕ ಮಾತ್ರವಲ್ಲದೇ ಆಂಧ್ರ ಪ್ರದೇಶ, ಬಳ್ಳಾರಿ, ಅನಂತಪುರ ಮತ್ತು ಶ್ರೀಶೈಲಂನಿಂದ ಲಕ್ಷಾಂತರ ಮೆಣಸಿನಕಾಯಿ ಚೀಲಗಳು ಬಂದಿದ್ದವು. ಮಾರುಕಟ್ಟೆ ತುಂಬಿ ಹೋಗಿತ್ತು. ಆದರೆ ಈ ವರ್ಷ ಮಾರುಕಟ್ಟೆ ಬಣಗುಡುತ್ತಿದೆ. ಹಾಗಾದರೆ ಇದಕ್ಕೆಲ್ಲ ಕಾರಣವೇನು?
ಮೆಣಸಿನಕಾಯಿ ಉತ್ಪಾದನೆ ಕಡಿಮೆ
2024 ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಸಮರ್ಪಕವಾದ ಬೆಲೆ ಸಿಗಲಿಲ್ಲ. ಉತ್ತಮ ಇಳುವರಿ ಪಡೆದ ರೈತರು ಆರ್ಥಿಕ ಸಂಕಷ್ಟ ಅನುಭವಿಸಿದರು. ರೈತರ ಬೆಳೆಯಿಂದ ಮೂರನೇ ವ್ಯಕ್ತಿಗಳಿಗೆ ಲಾಭವಾಗಿತ್ತು. ಈ ಸಂಬಂಧ ಮಾರುಕಟ್ಟೆ ಕಚೇರಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿತ್ತು. ಬೆಲೆ ಸಿಗದಿದ್ದಕ್ಕೆ ಈ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯಲು ಮುಂದಾಗಲಿಲ್ಲ. ಹೀಗಾಗಿ ಈ ವರ್ಷ ಮೆಣಸಿನಕಾಯಿ ದರ ಹೆಚ್ಚಾಗಿದೆ. ಅಲ್ಪ ಸ್ವಲ್ಪ ಬೆಳೆ ಬೆಳೆದರು ಇಳುವರಿ ಉತ್ತಮವಾಗಿಲ್ಲ. ಇದೆಲ್ಲದರ ಪರಿಣಾಮ ಪೂರೈಕೆ ಸರಪಳಿ ಮೇಲೆ ಉಂಟಾಗಿದೆ. ಕಳೆದ 2 ತಿಂಗಳು ಪೂರೈಕೆಯಲ್ಲಿ ಸಾಕಷ್ಟು ಕೊರತೆ ಎದುರಿಸುವಂತಾಗಿದೆ. ದೇಶದ ದೊಡ್ಡ ಮಸಾಲೆ ಕಂಪನಿಗಳಿಗೂ ಇದರ ಎಫೆಕ್ಟ್ ತಟ್ಟಿದೆ.
ಲಾಭಾದಾಯಕ ಬೆಳೆಯತ್ತ ರೈತರ ಚಿತ್ತ
ಮೆಣಸಿನಕಾಯಿ ಕೃಷಿಯಿಂದ ಒಂದಷ್ಟು ರೈತರು ವಿಮುಖರಾಗಿ ಬೇರೆ ಬೇರೆ ವಾಣಿಜ್ಯ, ಲಾಭದಾಯಕ ಬೆಳೆಯತ್ತ ಮುಖ ಮಾಡಿದ್ದು ಕಂಡು ಬಂದಿದೆ. ಗದಗ, ಅಣ್ಣಿಗೇರಿ, ಕುಂದಗೋಳ, ಅಂತೂರು-ಬೆಂತೂರು ಹಾಗೂ ಉತ್ತರ ಕರ್ನಾಟಕದ ಸುತ್ತಮುತ್ತಲಿನ ಭಾಗಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬರುತ್ತದೆ. ಈ ಬಾರಿ ಇಲ್ಲಿಂದಲೂ ಪೂರೈಕೆ ತಗ್ಗಿದೆ. ಮುಂದಿನ ಮಾರ್ಚ್ ಮತ್ತು ಏಪ್ರಿಲ್ ವೇಳೆ ಪೂರೈಕೆ ಸುಧಾರಣೆ ಕಾಣುವ ವಿಶ್ವಾಸ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.












Click it and Unblock the Notifications