"ಬಂಡೆಯೆಂದು ಬೀಗುತ್ತಿದ್ದ ಡಿ ಕೆ ಶಿವಕುಮಾರ್ ಈಗಾಗಲೇ ಮುದ್ದೆಯಾಗಿ ಹೋಗಿದ್ದೀರಿ"
ಬೆಂಗಳೂರು, ಆಗಸ್ಟ್ 27: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ ಎಂಬ ಬಿಜೆಪಿ ನಾಯಕರ ವಿರೋಧದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇದು ಹಿಂದೂಗಳ ಆಸ್ತಿಯಲ್ಲ ಎಂದು ಡಿ ಕೆ ಶಿವಕುಮಾರ್ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿರು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ, ನಿಮ್ಮ ಪಕ್ಷದಲ್ಲಿ ನಿಮಗೆ ಎದುರಾಗಿರುವ ಕಂಟಕದಿಂದ ಪಾರಾಗಲು ಚಾಮುಂಡಿ ಬೆಟ್ಟ ಹಾಗೂ ಸಂಪ್ರದಾಯದ ದಸರೆಯನ್ನು ಬಳಸಿಕೊಳ್ಳಬೇಡಿ, ಬಂಡೆಯೆಂದು ಬೀಗುತ್ತಿದ್ದ ನೀವು ಈಗಾಗಲೇ ಮುದ್ದೆಯಾಗಿ ಹೋಗಿದ್ದೀರಿ, ಚಾಮುಂಡಿ ತಾಯಿಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗಿ ಹೋಗುವಿರಿ ಎಚ್ಚರ ಎಂದು ಹೇಳಿದ್ದಾರೆ.

ಪೈಪೋಟಿಯ ಮೇಲೆ ನೀವೂ, ನಿಮ್ಮ ಕಾಂಗ್ರೆಸಿಗರು ಹಿಂದೂ ಧರ್ಮದ ಅವಹೇಳನ, ಹಿಂದೂ ಧಾರ್ಮಿಕ ಕೇಂದ್ರಗಳ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದೀರಿ, ಇದೀಗ ಹಿಂದೂ ಪರಂಪರೆಯ ವಿಜಯ ದಶಮಿ ಹಬ್ಬವನ್ನು ಮಲಿನ ಮಾಡಲು ಹೊರಟಿದ್ದೀರಿ, ಮಹಿಷಾಸುರ ಮರ್ದಿನಿ ನಿಮ್ಮನ್ನು ಮರ್ದನ ಮಾಡುವ ಕಾಲ ದೂರವಿಲ್ಲ, ಚಾಮುಂಡಿ ತಾಯಿ ಶ್ರದ್ಧೆಯ ಭಕ್ತರ ಸ್ವತ್ತು, ಅದನ್ನು ಮುಟ್ಟಲು ಹೋದರೆ ಕಾದಿದೆ ನಿಮಗೆ ಆಪತ್ತು ಎಂದು ಡಿ ಕೆ ಶಿವಕುಮಾರ್ ಅವರ ವಿರುದ್ಧ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.
"ನಮಸ್ತೇ ಸದಾ ವತ್ಸಲೇ ಮಾತೃಭೂಮಿ... " ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆ ಮಾತೃಭೂಮಿಗೆ ಧನ್ಯತೆ ಸಮರ್ಪಿಸುವ ಸಂಕೇತವನ್ನು ರವಾನಿಸುತ್ತದೆ, ರಾಷ್ಟ್ರಭಕ್ತಿ ಪ್ರೇರೇಪಿಸುತ್ತದೆ, ಇದು ಸಂಘಟನೆಯ ಗೀತೆಯಷ್ಟೇ ಅಲ್ಲ ದೇಶಭಕ್ತಿಯ ಬದ್ಧತೆಯನ್ನು ಜಗತ್ತಿಗೇ ಸಾರಿ ಹೇಳುವ ಗೀತೆ. ನಮ್ಮನ್ನು ಹೆರುವ ತಾಯಿಗೆ ಮಡಿಲ ಆಸರೆ ನೀಡುವವಳು ಭೂಮಿತಾಯಿ. ಈ ಹಿನ್ನಲೆಯಲ್ಲಿಯೇ 'ಮಾತೃ ಭೂಮಿ' ಎಂದು ಜನ್ಮದಾತೆಯಷ್ಟೇ ಜನ್ಮಭೂಮಿಯನ್ನು ಆರಾಧಿಸುತ್ತೇವೆ, ತಾಯ್ನೆಲಕ್ಕಾಗಿ ನಮ್ಮನ್ನೇ ಸಮರ್ಪಿಸಿಕೊಳ್ಳುವಷ್ಟು ಭಾವುಕರಾಗುತ್ತೇವೆ.
ಜನನಿ, ಜನ್ಮ ಭೂಮಿ ಮಹತ್ವ ತಿಳಿಸಿಕೊಟ್ಟು ರಾಷ್ಟ್ರ ಭಕ್ತಿ ಪಡಿಮೂಡಿಸುವ ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ಸಿಗರಿಗೆ ಮೊದಲಿನಿಂದಲೂ ಅಸಹನೆ ಏಕೆಂದರೆ ಗುಲಾಮಿ ಚೌಕಟ್ಟಿನಲ್ಲಿ ನೆಹರು ಕುಟುಂಬವನ್ನು ಓಲೈಸುವ ಭಟ್ಟಂಗಿತನ ಬಿಟ್ಟರೆ ಆವರಿಗೆ ಬೇರೇನೂ ತಿಳಿದಿಲ್ಲ. ಸರ್ವಾಧಿಕಾರಿತನ,ಭ್ರಷ್ಟತೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ವಿದ್ರೋಹಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪಠ್ಯಕ್ರಮವನ್ನು ಮಾತ್ರ ಕಾಂಗ್ರೆಸ್ ಪಾಠ ಶಾಲೆಯಲ್ಲಿ ಬೋಧಿಸಲಾಗುತ್ತದೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಪ್ರಕರಣ ದೇಶದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಲಿದೆ, ವಿಧಾನಸಭೆಯಲ್ಲಿ ಡಿಕೆಶಿ ಅವರು ಸಂಘದ ಗೀತೆ ತಮಗೂ ತಿಳಿದಿದೆ ಎಂಬ ಪಾಂಡಿತ್ಯ ಪ್ರದರ್ಶಿಸಲು ಹೋಗಿ 'ಸದಾ ವತ್ಸಲೇ ಮಾತೃಭೂಮಿ...'ಪಠಿಸಿದರು,ಇದನ್ನೇ ಮಹದಪರಾಧವೆಂದು ಪರಿಗಣಿಸಿದ ಕಾಂಗ್ರೆಸ್ ಮುಂದಾಳುಗಳು ಡಿಕೆ ಶಿವಕುಮಾರ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ 'ರಾ ಕಮಾಂಡ್ 'ಮುಂದೆ ಕಟಕಟ್ಟೆಯಲ್ಲಿ ನಿಲ್ಲಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ,ಡಿಕೆಶಿ ಅವರು ಬಾಗಿ ಕ್ಷಮಾಪಣೆ ಕೇಳುವವಂತೆ ಮಾಡಿದ್ದಾರೆ. ಬಂಡೆಯಂಥ ಡಿಕೆಶಿ ಅವರಿಗೇ ಈ ಗತಿಯಾದರೆ, ಕಾಂಗ್ರೆಸ್ ಪಕ್ಷದಲ್ಲಿರುವ ಅದೆಷ್ಟೋ ದೇಶ ನಿಷ್ಠ ಕಾರ್ಯಕರ್ತರ ಸ್ಥಿತಿ ಹೇಗಿರಬಹುದು? ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ.
ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಇವತ್ತಿಗೂ ತುರ್ತುಪರಿಸ್ಥಿತಿಕರಾಳ ನೃತ್ಯ ಮಾಡುತ್ತಲೇ ಇದೆ ಎಂಬುದಕ್ಕೆ ಡಿಕೆಶಿ ಅವರ ಕ್ಷಮಾಪಣೆ ಕೇಳಿದ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. 'ಮಾತೃಪ್ರೇಮ-ದೇಶ ಭಕ್ತಿ'ಸ್ವಾಭಿಮಾನಿ ಪ್ರಜೆಯ ಹೆಮ್ಮೆಯ ಕಿರೀಟ, ತಾಯ್ನೆಲ್ಲದ ಬದ್ಧತೆಯನ್ನು ತೋರುವುದೇ ಅಪರಾಧವೆಂದು ಪರಿಗಣಿಸಿ ಕ್ಷಮಾಪಣೆ ಕೇಳುವ ಪರಿಸ್ಥಿತಿ ವ್ಯಕ್ತಿ ಒಬ್ಬನನ್ನು ಮುತ್ತುವುದಾದರೆ ಅದಕ್ಕಿಂತ ಘೋರ ದುರಂತ ಇನ್ನೊಂದಿಲ್ಲ ಎಂದು ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.












Click it and Unblock the Notifications