ಸಿದ್ದರಾಮಯ್ಯ ನವರೇ, ನೀವು ಮೊಘಲರಲ್ಲ, ಮೊಘಲರೇ ಮತ್ತೆ ಹುಟ್ಟಿ ಬಂದರೂ ಈಗದು ಸಾಧ್ಯವಿಲ್ಲ: ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು,ಡಿಸೆಂಬರ್ 18: ಶ್ರೀರಾಮ ಮಂದಿರ ಉಳಿಯ ಬೇಕೆಂದರೆ ಹಿಂದೂ ರಾಷ್ಟ್ರವಾಗಬೇಕು ಎಂಬ ಪೇಜಾವರ ಶ್ರೀಗಳ ಹೇಳಿಕೆ ಸರಿಯಲ್ಲ, ಅದು ಬಿಜೆಪಿಯ ಸಿದ್ಧಾಂತ,ಅದಕ್ಕೆ ನಾವು ಅವಕಾಶ ಕೊಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬಿ ವೈ ವಿಜಯೇಂದ್ರ ಅವರು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಕುಟುಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾನ್ಯ ಸಿದ್ದರಾಮಯ್ಯ ನವರೇ, "ಹಿಂದೂ ರಾಷ್ಟ್ರ ಕಲ್ಪನೆ ಈ ದೇಶದ ಕೋಟ್ಯಾಂತರ ಜನರ ಸಂಕಲ್ಪ, ಅದಕ್ಕೆ ಅವಕಾಶ ನೀಡದಿರಲು ನೀವು ಮೊಘಲರಲ್ಲ, ಮೊಘಲರೇ ಮತ್ತೆ ಹುಟ್ಟಿ ಬಂದರೂ ಈಗದು ಸಾಧ್ಯವಿಲ್ಲ" ಭಾರತವೆಂದರೆ ಹಿಂದುತ್ವ, ಹಿಂದುತ್ವ ಎಂದರೆ ಬಹುತ್ವ, ವಿವಿಧತೆಯನ್ನು ತನ್ನ ಒಡಲಲ್ಲಿರಿಸಿಕೊಂಡು ಏಕತೆಯನ್ನು ಮೆರೆಯುತ್ತಿರುವುದೇ ಭಾರತೀಯತೆ ಎಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಲು ಶತ ಶತಮಾನಗಳಿಂದಲೂ ಹೊರಗಿನವರ ಆಕ್ರಮಣ ನಡೆಯುತ್ತಲೇ ಇದೆ, ಮೊಘಲರ ನಿರಂತರ ದಾಳಿಗೆ ತುತ್ತಾಗಿ ಅಸಂಖ್ಯಾತ ಹಿಂದೂ ದೇವಾಲಯಗಳು ಭಗ್ನಗೊಂಡಿರುವುದಕ್ಕೆ, ನಾಮಾವಶೇಷಗೊಂಡಿರುವುದಕ್ಕೆ ಇಂದಿಗೂ ಸಾಕ್ಷಿ, ಪುರಾವೆಗಳು ನಮ್ಮ ಕಣ್ಣಿಗೆ ರಾಚುತ್ತಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಮಾನ್ಯ @siddaramaiah ನವರೇ,
— Vijayendra Yediyurappa (@BYVijayendra) December 18, 2023
“ಹಿಂದೂ ರಾಷ್ಟ್ರ ಕಲ್ಪನೆ ಈ ದೇಶದ ಕೋಟ್ಯಾಂತರ ಜನರ ಸಂಕಲ್ಪ, ಅದಕ್ಕೆ ಅವಕಾಶ ನೀಡದಿರಲು ನೀವು ಮೊಘಲರಲ್ಲ, ಮೊಘಲರೇ ಮತ್ತೆ ಹುಟ್ಟಿ ಬಂದರೂ ಈಗದು ಸಾಧ್ಯವಿಲ್ಲ” ಭಾರತವೆಂದರೆ ಹಿಂದುತ್ವ, ಹಿಂದುತ್ವ ಎಂದರೆ ಬಹುತ್ವ, ವಿವಿಧತೆಯನ್ನು ತನ್ನ ಒಡಲಲ್ಲಿರಿಸಿಕೊಂಡು ಏಕತೆಯನ್ನು ಮೆರೆಯುತ್ತಿರುವುದೇ ಭಾರತೀಯತೆ.… pic.twitter.com/N4fOvWOgJU
ಎಷ್ಟೇ ದುರಾಕ್ರಮಣಗಳು ನಡೆದರೂ ಬಹುತ್ವ ಸಂಸ್ಕೃತಿಯ ಹಿಂದುತ್ವದ ಭಾರತ ಗಟ್ಟಿಯಾಗಿ ಉಳಿದಿದೆ. ಸ್ವಾತಂತ್ರ್ಯ ನಂತರವೂ ಮತಬ್ಯಾಂಕ್ ರಾಜಕಾರಣಕ್ಕಾಗಿ ಹಿಂದುತ್ವವನ್ನು ದಮನ ಮಾಡಲು ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಕುತಂತ್ರವನ್ನು ಬಗ್ಗು ಬಡಿಯಲೆಂದೇ 'ಭಾರತೀಯ ಜನತಾ ಪಾರ್ಟಿ' ಜನ್ಮತಾಳಿದ್ದು. ಕಾಂಗ್ರೆಸ್'ನ ಸ್ವಾರ್ಥ ಹಾಗೂ ನಿರಂಕುಶ ಪ್ರಭುತ್ವದ ಆಡಳಿತವನ್ನು ಮೂಲೆಗಟ್ಟಿ ದೇಶದ ಜನರು ಇಂದು ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸಿ ಅದರ ನೆರಳಲ್ಲಿ ಅಭಿವೃದ್ಧಿಯ ಭಾರತವನ್ನು ಕಾಣುತ್ತಿದ್ದಾರೆ.

ರಾಜಕೀಯ ಭೂಪಟದಲ್ಲಿ 'ಅಳಿಸಿ ಹೊಗುತ್ತಿರುವ ಕಾಂಗ್ರೆಸ್ ಅಸ್ತಿತ್ವ ಮೊದಲು ಉಳಿಸಿಕೊಳ್ಳಿ' ಆ ನಂತರ ರಾಷ್ಟ್ರದ ಕುರಿತು ನೀವು ಮಾತನಾಡುವಿರಂತೆ. ಪೂಜ್ಯ ಪೇಜಾವರ ಶ್ರೀಗಳ 'ಹಿಂದೂ ರಾಷ್ಟ್ರದ ಪ್ರತಿಪಾದನೆ' ಇನ್ನೊಬ್ಬರನ್ನು ಹೊರಗಟ್ಟುವುದಲ್ಲ, ಬಲವಂತ ಮತಾಂತರವಲ್ಲ, ಎಲ್ಲರನ್ನೂ ಒಳಗೊಂಡ ನೈಜ ಭಾರತೀಯತೆಯನ್ನು ರಕ್ಷಿಸುವುದು ಭಾರತದ ಅಸ್ತಿತ್ವ ಎಂದು ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.












Click it and Unblock the Notifications