ಬಸ್ ಪ್ರಯಾಣಿಕರೇ ಗಮನಿಸಿ: ಯಮನೂರು ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ!
ಹುಬ್ಬಳ್ಳಿ: ನವಲಗುಂದ ತಾಲೂಕು ಯಮನೂರು ಚಾಂಗದೇವರು ಉರ್ಫ ರಾಜಾ ಬಾಗಸವಾರ ದೇವರ ಜಾತ್ರೆಗೆ ಬರುವ ಭಕ್ತಾದಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ವ್ಯವಸ್ಥೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಸಂಸ್ಥೆಯಿಂದ ಮಾರ್ಚ್ 17 ರಿಂದ 21 ರವರೆಗೆ ಜಾತ್ರೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ, ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.
ಯಮನೂರು ಚಾಂಗದೇವರು ಉರ್ಫ ರಾಜಾ ಬಾಗಸವಾರ ದೇವರ ಜಾತ್ರೆ ಇದೇ ಮಾರ್ಚ್ 17ರ ಸೋಮವಾರದಿಂದ 21ರ ಶುಕ್ರವಾರ ತನಕ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಮಾರ್ಚ್ 18ರ ಮಂಗಳವಾರ ಗಂಧಾಭಿಷೇಕ (ಸಂದಲ್) ಕಾರ್ಯಕ್ರಮ & 19ರ ಬುಧವಾರ ಪುಣ್ಯತಿಥಿ & ಮುಖ್ಯ ಉರುಸ್ ಕಾರ್ಯಕ್ರಮ ಇರುತ್ತದೆ. ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ವಿಶೇಷ ಬಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

ಭಕ್ತ ಸಮುದಾಯಕ್ಕೆ ಸಾಕಷ್ಟು ಅನುಕೂಲ
ಜಾತ್ರೆಗೆ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಸೇರಿ ಹಲವು ಭಾಗದಿಂದ ಭಕ್ತರು ಬರುತ್ತಾರೆ. ಅಲ್ಲದೆ ದೂರದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಕಲ್ಯಾಣ ಕರ್ನಾಟಕ ಭಾಗದಿಂದ ಬರುವ ಬಹಳಷ್ಟು ಭಕ್ತಾದಿಗಳು ರೈಲು ಮೂಲಕ & ಬಸ್ಸುಗಳು ಅಣ್ಣಿಗೇರಿವರೆಗೆ ತಲುಪುತ್ತಾರೆ.
ಅಲ್ಲಿಂದ ಯಮನೂರಿಗೆ ಬಸ್ ಮೂಲಕ ಬರುತ್ತಾರೆ, ಅವರ ಅನುಕೂಲಕ್ಕೆ ರೈಲುಗಳ ಆಗಮನ ಸಮಯಕ್ಕೆ ಅಣ್ಣಿಗೇರಿ ರೈಲು ನಿಲ್ದಾಣದಿಂದ ಯಮನೂರು & ಅಣ್ಣಿಗೇರಿ ಬಸ್ ನಿಲ್ದಾಣದಿಂದ ಯಮನೂರಿಗೆ ನಿರಂತರ ನೇರ ಜಾತ್ರೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಇದು ಭಕ್ತರ ಸಂಚಾರಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.
ಹಲವು ಜಿಲ್ಲೆಗಳಿಗೂ ವಿಶೇಷ ಬಸ್ ವ್ಯವಸ್ಥೆ
ಧಾರವಾಡ ಜಿಲ್ಲೆಯ ವಿವಿಧ ಸ್ಥಳದಿಂದ ಬರುವವರು, ಹುಬ್ಬಳ್ಳಿಯಿಂದ ಬಸ್ ಮೂಲಕ ಬರುವ ಭಕ್ತರಿಗೆ ಹೊಸೂರು ಬಸ್ ನಿಲ್ದಾಣದಿಂದ ಯಮನೂರಿಗೆ ನೇರ ಜಾತ್ರೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೆಲ ಭಕ್ತರು ಗಂಧಾಭಿಷೇಕ ಮುಗಿಸಿಕೊಂಡು ಹಿಂದಿರುಗುತ್ತಾರೆ, ಬಹಳಷ್ಟು ಜನ ಉರುಸ್ ಮುಗಿಸಿ ನಂತರದ ದಿನಗಳಲ್ಲಿ ಹಿಂದಿರುಗುತ್ತಾರೆ. ಅವರ ಅನುಕೂಲಕ್ಕೆ ಮಾರ್ಚ್ 19 ರಿಂದ 21ರ ತನಕ ಯಮನೂರಿನಿಂದ ಅಣ್ಣಿಗೇರಿ ರೈಲ್ವೆ ನಿಲ್ದಾಣ, ಹುಬ್ಬಳ್ಳಿ, ಕಲಬುರಗಿ, ಯಾದಗಿರಿ, ಸಿಂಧನೂರು, ರಾಯಚೂರು, ಕೊಪ್ಪಳ, ಗಂಗಾವತಿ, ವಿಜಯಪುರ ಸೇರಿದಂತೆ ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲು ಇದೀಗ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ 65 ಬಸ್ ಹಾಗೂ 150 ಚಾಲಕರು & ನಿರ್ವಾಹಕರು, ಮೇಲ್ವಿಚಾರಣೆಗೆ 8 ಅಧಿಕಾರಿಗಳೂ ಸೇರಿದಂತೆ 42 ಮೇಲ್ವಿಚಾರಕ ಸಿಬ್ಬಂದಿ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತಾಗಿ, ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿಯನ್ನ ನೀಡಿದ್ದಾರೆ.












Click it and Unblock the Notifications