Budget 2024: ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸ ವಂದೇ ಭಾರತ್ ರೈಲು ಘೋಷಣೆ?
ಬೆಂಗಳೂರು, ಜುಲೈ 20: ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ. ಕರ್ನಾಟಕದ ವಿವಿಧ ಮಾರ್ಗದಲ್ಲಿ ರೈಲು ಓಡಿಸಬೇಕು ಎಂದು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮಂಗಳವಾರ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್‌ನಲ್ಲಿ ಹೊಸ ರೈಲು ಘೋಷಣೆಯಾಗಲಿದೆಯೇ?.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ 23ರಂದು ಮಂಡಿಸಲಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ಸೇರಿಸಿ ಮಂಡನೆ ಮಾಡಲಾಗುತ್ತದೆ. ಆದ್ದರಿಂದ ಹೊಸ ರೈಲುಗಳ ಘೋಷಣೆ ಬಜೆಟ್‌ನಲ್ಲಿಯೇ ಆಗಬೇಕಿದೆ.

ಸದ್ಯ 5ಕ್ಕೂ ಅಧಿಕ ಮಾರ್ಗದಲ್ಲಿ ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳು ಓಡುತ್ತಿವೆ. ನರೇಂದ್ರ ಮೋದಿ 3.0 ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ವಂದೇ ಭಾರತ್ ರೈಲುಗಳನ್ನು ಘೋಷಣೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಕರ್ನಾಟಕದ ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಖಾತೆ ಸಚಿವರು. ಆದ್ದರಿಂದ ಬಜೆಟ್ ಮೇಲೆ ಕರ್ನಾಟಕದ ಜನರ ನಿರೀಕ್ಷೆ ಹೆಚ್ಚಾಗಿಯೇ ಇದೆ.
ಯಾವ-ಯಾವ ಮಾರ್ಗದಲ್ಲಿ ರೈಲು?; ಕರ್ನಾಟಕದಲ್ಲಿ 10 ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲು 19/7/2023ರಂದು ನಡೆದ ನೈಋತ್ಯ ರೈಲ್ವೆಯ ಸಭೆಯಲ್ಲಿ ಚರ್ಚೆ ನಡೆದಿತ್ತು. ಇವುಗಳಲ್ಲಿ ಕೆಲವು ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾಗಿದೆ. ಆದರೆ ಇನ್ನೂ ಕೆಲವು ಮಾರ್ಗದಲ್ಲಿ ರೈಲಿನ ಸಂಚಾರ ಬಾಕಿ ಇದೆ.
ವಂದೇ ಭಾರತ್ ರೈಲು ಓಡಿಸಲು ಪ್ರಮುಖವಾಗಿ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಬೇಕು. ಒಂದು ಬಾರಿ ರೈಲು ಸಂಚಾರ ನಡೆಸಿದ ಬಳಿಕ ಅದನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕಿದೆ. ಆದ್ದರಿಂದ ಮೂಲ ಸೌಕರ್ಯ ಇರುವ ಮಾರ್ಗದಲ್ಲಿ ಮಾತ್ರ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಒಪ್ಪಿಗೆ ನೀಡಲಿದೆ.
ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಬೇಡಿಕೆ ಇತ್ತು. ಇದಕ್ಕೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. 2023ರ ನವೆಂಬರ್‌ನಲ್ಲಿ ಬೆಂಗಳೂರು-ಬೆಳಗಾವಿ ನಡುವೆ ರೈಲುಗಳ ಪ್ರಾಯೋಗಿಕ ಸಂಚಾರ ಸಹ ಮುಗಿದಿದೆ. ಆದರೆ ವಂದೇ ಭಾರತ್ ರೈಲುಗಳ ಸಂಚಾರ ಇನ್ನೂ ಆರಂಭವಾಗಿಲ್ಲ. ಬಜೆಟ್‌ನಲ್ಲಿ ರೈಲು ಸಂಚಾರದ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲಾಗಿದೆ. ಬೆಳಗಾವಿಯ ಜನರು ಸಾಮಾಜಿಕ ಜಾಲತಾಣದ ಮೂಲಕ ಬೆಳಗಾವಿಗೆ ವಂದೇ ಭಾರತ್ ಸಂಚಾರ ಆರಂಭಿಸಿ ಎಂದು ಪದೇ ಪದೇ ಬೇಡಿಕೆ ಇಡುತ್ತಲೇ ಇದ್ದಾರೆ. ಆದ್ದರಿಂದ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ನಿರೀಕ್ಷೆ ಮಾಡಲಾಗಿದೆ.
ಬೆಂಗಳೂರು-ಮುಧುರೈ ನಡುವೆ ಜೂನ್ 2024ರಲ್ಲಿಯೇ ವಂದೇ ಭಾರತ್ ಸಂಚಾರ ಆರಂಭವಾಗಲಿದೆ ಎಂದು ಅಂದಾಜಿಸಲಾಗಿತ್ತು. ಈ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವೂ ಪೂರ್ಣಗೊಂಡಿದೆ. ಆದರೆ ರೈಲು ಸಂಚಾರದ ದಿನಾಂಕ ಘೋಷಣೆಯಾಗಿಲ್ಲ. ಬಜೆಟ್‌ನಲ್ಲಿ ಈ ಮಾರ್ಗದಲ್ಲಿ ಸಹ ವಂದೇ ಭಾರತ್ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದೆ.
ಉಳಿದಂತೆ ಬೆಂಗಳೂರು-ಹೊಸಪೇಟೆ, ಬೆಂಗಳೂರು-ತಿರುಪತಿ, ಬೆಂಗಳೂರು-ಪುದುಚೇರಿ, ಬೆಂಗಳೂರು-ಶಿವಮೊಗ್ಗ, ಬೀದರ್-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಬೇಕು ಎಂಬುದು ಬೇಡಿಕೆಯಾಗಿದೆ. ಆದರೆ ಬಜೆಟ್‌ನಲ್ಲಿ ಯಾವ-ಯಾವ ಮಾರ್ಗದ ರೈಲು ಘೋಷಣೆಯಾಗಲಿದೆ? ಎಂದು ಕಾದು ನೋಡಬೇಕಿದೆ.
ಭಾರತೀಯ ರೈಲ್ವೆ ಬಿಳಿ, ಕೇಸರಿ ಬಣ್ಣದ 16 ಮತ್ತು 8 ಬೋಗಿಯನ್ನು ಹೊಂದಿರುವ ವಂದೇ ಭಾರತ್ ರೈಲುಗಳನ್ನು ಓಡಿಸುತ್ತಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈಗಾಗಲೇ ಹಲವು ಬೋಗಿಗಳನ್ನು ತಯಾರು ಮಾಡಿ, ರೈಲ್ವೆ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಮಾಹಿತಿಗಳ ಪ್ರಕಾರ ನೈಋತ್ಯ ರೈಲ್ವೆ ವಿಭಾಗಕ್ಕೆ 8 ಹೊಸ ವಂದೇ ಭಾರತ್ ರೈಲುಗಳು ಹಂಚಿಕೆಯಾಗಿದೆ.












Click it and Unblock the Notifications