Budget: ರಾಜ್ಯ ಬಜೆಟ್ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಅವರು ಇಂದು ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. 16ನೇ ಬಾರಿಗೆ ಬಜೆಟ್ ಮಂಡಿಸಿದ ದಾಖಲೆ ಬಿಟ್ಟರೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ತಮ್ಮ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯನ್ನು ಬಜೆಟ್‌ಗೂ ವಿಸ್ತರಿಸಿದ್ದೇ ಈ ಸರ್ಕಾರದ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬಜೆಟ್ ನಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಧರ್ಮಾಧಾರಿತ ಮೀಸಲಾತಿ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವುದು, ಸಾಲದ ಹೊರೆ ಹೆಚ್ಚಿಸಿರುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿಯತ್ತ ನಿರ್ಲಕ್ಷ್ಯ, ಕಳೆದ ಬಜೆಟ್ ಘೋಷಣೆಗಳ ಅನುಷ್ಠಾನದ ಬಗ್ಗೆ ಮೌನ ವಹಿಸಿರುವುದು, ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಜೆಟ್‌ನಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಗಮನವೇ ನೀಡಿಲ್ಲ ಎಂದು ಟೀಕಿಸಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ರೈತರಿಗಾಗಿ ಬಜೆಟ್‌ನಲ್ಲಿ ಯಾವುದೇ ವಿಶೇಷ ಯೋಜನೆಯೇ ನೀಡಿಲ್ಲ. ರೈತರ ಆದಾಯ ಹೆಚ್ಚಳಕ್ಕೆ ಯಾವುದೇ ಕ್ರಮಗಳಿಲ್ಲ. ಸ್ಪಷ್ಟತೆಯಿಲ್ಲದ ಈ ಬಜೆಟ್ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಕಿಡಿಕಾರಿದ್ದಾರೆ.
ಇಸ್ಲಾಮೀಕರಣಗೊಂಡ ಬಜೆಟ್: ರಾಜ್ಯ ಬಿಜೆಪಿ ಕೂಡ ಕಾಂಗ್ರೆಸ್ ಸರ್ಕಾರದ ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಕರ್ನಾಟಕ ಬಜೆಟ್ ಅನ್ನು ಇಸ್ಲಾಮೀಕರಣಗೊಳಿಸಿರುವ ಸಿಎಂ ಸಿದ್ದರಾಮಯ್ಯ ಅವರೇ, ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ನೀವು ಕೊಟ್ಟಿರುವುದು ಕೇವಲ ಚಿಪ್ಪು ಮಾತ್ರ ಎಂದಿದೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ಮುಸ್ಲಿಮರ ಸರಳ ಮದುವೆಗೆ ₹50 ಸಾವಿರ, ವಕ್ಫ್, ಖಬರಸ್ಥಾನಗಳ ಮೂಲಸೌಕರ್ಯಕ್ಕೆ ₹150 ಕೋಟಿ, ಮುಸ್ಲಿಮರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ₹50 ಲಕ್ಷ, ಮುಸ್ಲಿಮರು ಅ ತಿಹೆಚ್ಚು ವಾಸವಿರುವ ಪ್ರದೇಶದಲ್ಲಿ ಐಟಿಐ ಸ್ಥಾಪನೆ, KEA ಅಡಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಶುಲ್ಕ ಕಡಿತ, ಉಲ್ಲಾಳದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ವಸತಿ ಸಹಿತ ಪಿಯು ಕಾಲೇಜು, ಮುಸ್ಲಿಂ ವಿದ್ಯಾರ್ಥಿಗಳ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ ಏರಿಕೆ, ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ ಎಂದು ಟೀಕಿಸಿದೆ. ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ಕಾಂಗ್ರೆಸ್ ಸರ್ಕಾರದ ದಿವಾಳಿ ಮಾಡೆಲ್ ಜಾರಿ ಆಗುತ್ತಿದೆ ಎಂದು ವ್ಯಂಗ್ಯವಾಡಿದೆ.

ಸಿದ್ದರಾಮಯ್ಯನವರು ಔಟ್‌ಗೋಯಿಂಗ್ ಸಿಎಂ ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಗಟ್ಟಿಯಾದ ಅಭಿಪ್ರಾಯ ಮೂಡಿರುವುದರಿಂದ, ಈ ಬಜೆಟ್‌ನಿಂದ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ಆದರೂ ತಮ್ಮ ಕಡೆಯ ಬಜೆಟ್‌ನಲ್ಲಿ ಒಂದಿಷ್ಟಾದರೂ ಜನಪರ ಯೋಜನೆಗಳನ್ನ ಘೋಷಿಸುತ್ತಾರೆ ಎಂದು ಎದುರು ನೋಡುತ್ತಿದ್ದ ಜನರಿಗೆ ಈ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ. ಇದು ಕೇವಲ 'ಬೊಗಳೆರಾಮಯ್ಯ ಬಜೆಟ್' ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸಾಧನೆಯ ಬಲದಿಂದಾಗಲಿ, ದಿಟ್ಟ ನಾಯಕತ್ವದಿಂದಾಗಲಿ, ಅಹಿಂದ ನಾಮ ಜಪದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಈ ಗ್ಯಾರೆಂಟಿಗಳು ಬಡವರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಜನರನ್ನ ದಿಕ್ಕು ತಪ್ಪಿಸಿ, ಮತ ಗಳಿಸಿ ಅಧಿಕಾರಕ್ಕೆ ಏರುವುದು ಮಾತ್ರ ಆಗಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಬಿಸಿ ತುಪ್ಪದಂತಾಗಿರುವ ಗ್ಯಾರೆಂಟಿಗಳನ್ನು ಮುಂದುವರೆಸಲು ಆಗದೆ ನಿಲ್ಲಿಸಲೂ ಆಗದೆ ಕಾಂಗ್ರೆಸ್ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೆಡಿಪಿ ಅಂಕಿ-ಅಂಶದ ಪ್ರಕಾರ, ಕಳೆದ ವರ್ಷದ ಅಂದರೆ 2024-25ನೇ ಬಜೆಟ್ ವರ್ಷದ 10 ತಿಂಗಳಲ್ಲಿ ಶೇ 62ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷದ ಅನುದಾನವೇ ಖರ್ಚು ಆಗದೆ ಇರುವಾಗ ಈಗ ಇನ್ನೊಂದು ಬಜೆಟ್ ಮಂಡಿಸಿದರೆ ಪ್ರಯೋಜನವೇನು? ಐದನೇ ಕ್ಲಾಸು ಪಾಸಾಗದ ವಿದ್ಯಾರ್ಥಿ ಆರನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿದರೆ ಏನು ಪ್ರಯೋಜನ? ಹಾಗಾಗಿದೆ ಸಿದ್ದರಾಮಯ್ಯ ನವರ ಬಜೆಟ್‌ನ ಕಥೆ-ವ್ಯಥೆ. ಇದು ಕೇವಲ ನಾಮಕಾವಸ್ತೆ ಬಜೆಟ್. ಪಾಪರ್ ಸರ್ಕಾರದ ಪಾಪರ್ ಬಜೆಟ್ ಎಂದು ಲೇವಡಿ ಮಾಡಿದ್ದಾರೆ.












Click it and Unblock the Notifications