ನಿಗಮ-ಮಂಡಳಿ ಪಟ್ಟಿ ಅಂತಿಮ, ಎರಡು ದಿನದಲ್ಲಿ ಪ್ರಕಟ
ನವದೆಹಲಿ, ನ.22 : ಕರ್ನಾಟಕದ ನಿಗಮ-ಮಂಡಳಿ ನೇಮಕಾತಿಯ ಹಗ್ಗ ಜಗ್ಗಾಟ ಅಂತ್ಯಗೊಂಡಿದ್ದು, 95 ಪ್ರಮುಖ ನಿಗಮ-ಮಂಡಳಿಗಳ ಪಟ್ಟಿಯನ್ನು ರಾಜ್ಯ ನಾಯಕರು ಹೈಕಮಾಂಡ್‌ಗೆ ಒಪ್ಪಿಸಿದ್ದಾರೆ. ಈ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಪ್ಪಿಗೆ ನೀಡಬೇಕಾಗಿದ್ದು, ನಂತರ ಬಿಡುಗಡೆಯಾಗಲಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ 18 ತಿಂಗಳು ಮಾತ್ರವಿರಲಿದೆ.
ಶುಕ್ರವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಪಟ್ಟಿಯನ್ನು ಅಂತಿಮವಾಗಿ ಪರಿಷ್ಕರಿಸುವ ಕಾರ್ಯಕ್ಕೆ ಮುಂದಾದರು. 11.30ರ ವೇಳೆಗೆ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್ ಅವರನ್ನು ಭೇಟಿ ಮಾಡಿ ಪಟ್ಟಿ ನೀಡಿ, ಸಮಾಲೋಚನೆ ನಡೆಸಿದರು. [ನಿಗಮ-ಮಂಡಳಿ ನೇಮಕಕ್ಕೆ ಎಐಸಿಸಿ ಮಾರ್ಗಸೂಚಿಗಳು]

ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಟ್ಟಿ ನೀಡಿದರು. ರಾಹುಲ್ ಗಾಂಧಿ ಅವರು ಪಟ್ಟಿಗೆ ಒಪ್ಪಿಗೆ ನೀಡಿದ್ದು, ಇದಾದ ನಂತರ ನಾಯಕರು ಸೋನಿಯಾ ಗಾಂಧಿ ಅವರಿಗೆ ಪಟ್ಟಿ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅವರ ಸಹಿ ಬಿದ್ದರೆ ಪಟ್ಟಿ ಪ್ರಕಟಗೊಳ್ಳಲಿದೆ.
18-18 ಸೂತ್ರ ಜಾರಿಗೆ : ಈ ಬಾರಿ ನೇಮಕವಾಗುವ 95 ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಕಾರ್ಯಾವಧಿ 18 ತಿಂಗಳು ಮಾತ್ರ ಇರಲಿದೆ. ಹುದ್ದೆಗಳಿಗೆ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಬಾಕಿ ಉಳಿದ ಅವಧಿಗೆ ಉಳಿದ ನಾಯಕರಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಮೂಲ ಕಾಂಗ್ರೆಸಿಗರಿಗೆ ಪಟ್ಟಿಯಲ್ಲಿ ಆದ್ಯತೆ ನೀಡಲಾಗಿದ್ದು, ಹಾಲಿ ಶಾಸಕರಿಗೆ, ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತವರಿಗೆ, ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದವರಿಗೆ ಯಾವುದೇ ಸ್ಥಾನಗಳನ್ನು ನೀಡಲಾಗುವುದಿಲ್ಲ. ಈ ನಿರ್ಧಾರ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹುಟ್ಟುಹಾಕುವ ನಿರೀಕ್ಷೆ ಇದೆ.

ಪರಮೇಶ್ವರ ಅವರು ಹೇಳಿರುವಂತೆಯೇ 12 ಕೆಪಿಸಿಸಿ ಪದಾಧಿಕಾರಿಗಳು, 6 ಜಿಲ್ಲಾಧ್ಯಕ್ಷರು ಹಾಗೂ 24 ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲಾ ಜಾತಿ, ಪ್ರಾಂತೀಯ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.












Click it and Unblock the Notifications