ಕೆ.ಜೆ.ಜಾರ್ಜ್ ಸೋಲಿಸಲು ಸರ್ವಜ್ಞನಗರದಲ್ಲಿ ಬಿಜೆಪಿ ತಂತ್ರವೇನು?
ಬೆಂಗಳೂರು, ಫೆಬ್ರವರಿ 5 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವರ ಸಾಲಿನಲ್ಲಿ ಮೊದಲು ಕೇಳಿ ಬರುವ ಹೆಸರು ಕೆ.ಜೆ.ಜಾರ್ಜ್. ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದಿಂದ ಅವರು ಶಾಸಕರಾಗಿ 4 ಬಾರಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ 5ನೇ ಬಾರಿಗೆ ಸರ್ವಜ್ಞ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಬಿಜೆಪಿಯ ಪದ್ಮನಾಭ ರೆಡ್ಡಿ ಅವರು ಜಾರ್ಜ್ ಅವರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.
ಸಚಿವರಾದ ದಿನದಿಂದ ಸದಾ ವಿವಾದಕ್ಕೆ ಗುರಿಯಾಗುತ್ತಲಿದ್ದಾರೆ ಕೆ.ಜೆ.ಜಾರ್ಜ್. ಪ್ರತಿಪಕ್ಷ ಬಿಜೆಪಿಗೂ ಸಚಿವ ಜಾರ್ಜ್ ಮೇಲೆ ಕಣ್ಣಿದೆ. ಈ ಬಾರಿ ಅವರನ್ನು ಸೋಲಿಸಲು ಪಕ್ಷ ರಣತಂತ್ರ ರೂಪಿಸಲಿದೆ. ಬೆಂಗಳೂರಿನಲ್ಲಿ ಹೆಚ್ಚು ಸ್ಥಾನಗಳಿಸಲು ಬಿಜೆಪಿ ಈಗಾಗಲೇ ಯೋಜನೆ ರೂಪಿಸುತ್ತಿದೆ.
2008ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ ಸರ್ವಜ್ಞ ನಗರ. ಸಚಿವ ಜಾರ್ಜ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಮೇಲೆ ಸಾಕಷ್ಟು ಕೆಲಸಗಳನ್ನು ಮಾಡಿಸಿದ್ದಾರೆ. 4 ಬಾರಿ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ.
ಸಯ್ಯದ್ ಮೋಹಿದ್ ಅಲ್ತಾಫ್ ಅವರು ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈಗ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹಾಗಾದರೆ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಚುನಾವಣೆ ಕಣ ಹೇಗಿದೆ? ಚಿತ್ರಗಳಲ್ಲಿ ನೋಡಿ...

ಸಿದ್ದರಾಮಯ್ಯ ಪರಮಾಪ್ತರು
ಸರ್ವಜ್ಞ ನಗರ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೆ.ಜೆ.ಜಾರ್ಜ್, ಸಿದ್ದರಾಮಯ್ಯ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಮಾಪ್ತರೂ ಹೌದು. 5 ಬಾರಿಯೂ ಅವರಿಗೆ ಕ್ಷೇತ್ರದಲ್ಲಿ ಟಿಕೆಟ್ ಸಿಗುವ ಬಗ್ಗೆ ಯಾವುದೇ ಅನುಮಾನವಿಲ್ಲ.

ಬಿಜೆಪಿಯಿಂದ ಪದ್ಮನಾಭ ರೆಡ್ಡಿ
2013ರ ಚುನಾವಣೆಯಲ್ಲಿ ಕೆ.ಜೆ.ಜಾರ್ಜ್ ವಿರುದ್ಧ ಸ್ಪರ್ಧಿಸಿದ್ದ ಪದ್ಮನಾಭ ರೆಡ್ಡಿ 46,819 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಬಾರಿಯೂ ಅವರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಅವರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಸದ್ಯದ ಮಾಹಿತಿ.

ಮೋಹಿದ್ ಅಲ್ತಾಫ್ ಕಾಂಗ್ರೆಸ್‌ಗೆ?
2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಯ್ಯದ್ ಮೋಹಿದ್ ಅಲ್ತಾಫ್ ಅವರು ಈಗ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕಾಂಗ್ರೆಸ್ ಪಕ್ಷ ಸೇರಿದರೆ ಕೆ.ಜೆ.ಜಾರ್ಜ್ ಅವರ ಬಲ ಮತ್ತಷ್ಟು ಹೆಚ್ಚಲಿದೆ.

ಜೆಡಿಎಸ್ ಅಭ್ಯರ್ಥಿ ಯಾರು?
ಸಚಿವ ಜಾರ್ಜ್ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಲವು ಬಾರಿ ವಾಗ್ದಾಳಿ ನಡೆಸಿದ್ದಾರೆ. ಜಾರ್ಜ್ ಸೋಲಿಸಲು ಅವರು ತಂತ್ರ ರೂಪಿಸುತ್ತಾರೆ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಸದ್ಯದ ಪ್ರಶ್ನೆ.

2013ರಲ್ಲಿ ಯಾರಿಗೆ ಎಷ್ಟು, ಮತ?
2013ರ ಚುನಾವಣೆಯಲ್ಲಿ ಕೆ.ಜೆ.ಜಾರ್ಜ್ 69,673 ಮತ, ಬಿಜೆಪಿ ಅಭ್ಯರ್ಥಿಯಾಗಿದ್ದ ಪದ್ಮನಾಭ ರೆಡ್ಡಿ 46,819 ಮತ, ಜೆಡಿಎಸ್‌ನ ಸಯ್ಯದ್ ಮೋಹಿದ್ ಅಲ್ತಾಫ್ 7,711 ಮತಗಳನ್ನು ಪಡೆದಿದ್ದರು.












Click it and Unblock the Notifications